ಚೆನ್ನೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲೆ ಗಮನ ಕೇಂದ್ರಿಕರಿಸಲು ದಶಕದ ಕಾಲ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಹೊರಗುಳಿದಿದ್ದ ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಇದೀಗ ಹೆಚ್ಚಿನ ಫ್ರಾಂಚೈಸಿ ಲೀಗ್ ಆಡಲು ಅಂತಾರಾಷ್ಟ್ರೀಯ ಏಕದಿನ ಸ್ವರೂಪದ ಕ್ರಿಕೆಟ್ಗೆ ನಿವೃತ್ತಿ ಘೋಷಿಸುವ ಬಗ್ಗೆ ಸುಳಿವು ನೀಡಿದ್ದಾರೆ.
ನಿನ್ನೆ ನಡೆದ ಐಪಿಎಲ್ ಫೈನಲ್ ಬಳಿಕ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದು ಮಾತನಾಡಿದ ಸ್ಟಾರ್ಕ್, " ಕಳೆದ 9 ವರ್ಷಗಳಿಂದ ನಾನು ಆಸ್ಟ್ರೇಲಿಯಾ ಪರ ಆಡಲು ಆದ್ಯತೆ ನೀಡಿದ್ದೆ. ಐಪಿಎಲ್ ಸಂದರ್ಭದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೆ. ಆ ಸಮಯದಲ್ಲಿ ನನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಿದ್ದೆ. ಇದೀಗ ನನ್ನ ವೃತ್ತಿ ಬದುಕು ಅಂತಿಮ ಘಟ್ಟಕ್ಕೆ ತಲುಪಿದೆ ಎಂಬುದನ್ನು ನಾನು ಚೆನ್ನಾಗಿ ಅರಿತುಕೊಂಡಿದ್ದೇನೆ. ಹಾಗಾಗಿ ಒಂದು ಸ್ವರೂಪದ ಕ್ರಿಕೆಟ್ನಿಂದ ನಿವೃತ್ತಿ ಪಡೆಯುವ ಬಗ್ಗೆ ಯೋಚಿಸುತ್ತಿದ್ದೇನೆ. ಮುಂದಿನ ಏಕದಿನ ವಿಶ್ವಕಪ್ಗೆ ಬಹಳ ಸಮಯವಿದೆ. ಅಷ್ಟು ಸಮಯ ನಾನು ಏಕದಿನ ಕ್ರಿಕೆಟ್ನಲ್ಲಿ ಉಳಿಯುವುದು ಅನುಮಾನ. ಮುಂಬುರುವ ಏಕದಿನ ವಿಶ್ವಕಪ್ ಆಡುವಷ್ಟು ಸಾಮರ್ಥ್ಯ ನನ್ನ ಬಳಿ ಇರಲಿದೆಯೇ ಎಂಬ ಬಗ್ಗೆ ಗೊತ್ತಿಲ್ಲ. ಈ ಹಿನ್ನೆಲೆ ನಾನು ಫ್ರಾಂಚೈಸಿ ಕ್ರಿಕೆಟ್ಗಳತ್ತ ಹೆಚ್ಚಿನ ಗಮನ ಹರಿಸುತ್ತೇನೆ.
ಈ ಬಾರಿಯ ಐಪಿಎಲ್ ಬಹಳ ಖುಷಿಯನ್ನು ನೀಡಿದೆ. ಹೀಗಾಗಿ ಮುಂದಿನ ಟೂರ್ನಿಯನ್ನು ಆಡಲು ಬಯಸುತ್ತೇನೆ ಎಂದು ತಿಳಿಸಿದ್ದಾರೆ. ಮುಂದಿನ ಐಪಿಎಲ್ ವೇಳಾಪಟ್ಟಿ ಹೇಗಿರಲಿದೆ ಎಂಬುದರ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಖಂಡಿತವಾಗಿ 18ನೇ ಆವೃತ್ತಿಯಲ್ಲಿ ಆಡಲಿದ್ದೇನೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಹರ್ಮನ್ಪ್ರೀತ್ ಹ್ಯಾಟ್ರಿಕ್ ಗೋಲು; ಅರ್ಜೆಂಟೀನಾ ವಿರುದ್ಧ ಭಾರತಕ್ಕೆ ಗೆಲುವು - FIH Hockey League