ಬ್ರಿಡ್ಜ್‌ಟೌನ್: ಐಸಿಸಿ ಟಿ20 ವಿಶ್ವಕಪ್ 2024ರ 17ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಆಸ್ಟ್ರೇಲಿಯಾ 36 ರನ್‌ಗಳಿಂದ ಬಗ್ಗುಬಡಿಯಿತು. ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ಶನಿವಾರ ಪಂದ್ಯ ನಡೆಯಿತು. ಆಸ್ಟ್ರೇಲಿಯಾ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಇಂಗ್ಲೆಂಡ್ ಮೇಲೆ ಪ್ರಾಬಲ್ಯ ಸಾಧಿಸಿತು.
ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಟಾಸ್ ಗೆದ್ದು ಆಸ್ಟ್ರೇಲಿಯಾ ತಂಡವನ್ನು ಬ್ಯಾಟಿಂಗ್‌ಗಿಳಿಸಿದರು. ಬಿರುಸಾಗಿ ಬ್ಯಾಟ್ ಬೀಸಿದ ಆಸ್ಟ್ರೇಲಿಯಾ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 201 ರನ್ ಪೇರಿಸಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿ ಸೋಲು ಕಂಡಿತು.
ಉತ್ತಮ ಆರಂಭದ ಹೊರತಾಗಿಯೂ ಸೋಲು: 202 ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್‌ಗೆ ಫಿಲ್ ಸಾಲ್ಟ್ ಮತ್ತು ಜೋಸ್ ಬಟ್ಲರ್ ಉತ್ತಮ ಆರಂಭ ನೀಡಿದರು. 73 ರನ್‌ಗಳಿಗೆ ಬ್ರಿಟಿಷರ ಮೊದಲ ವಿಕೆಟ್ ಪತನವಾಯಿತು. ನಂತರ ತಂಡ ಚೇತರಿಸಿಕೊಳ್ಳಲಿಲ್ಲ. ಒಂದರ ಹಿಂದೊಂದರಂತೆ ವಿಕೆಟ್‌ಗಳು ಬೀಳುತ್ತಿದ್ದವು. ಬಟ್ಲರ್ ಗರಿಷ್ಠ 42 ರನ್ ಗಳಿಸಿದರೆ, ಸಾಲ್ಟ್ 37 ರನ್ ಕಲೆ ಹಾಕಿದರು. ಮೊಯಿನ್ ಅಲಿ 25 ರನ್ ಗಳಿಸಿದರು.
ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ ಮತ್ತು ಆ್ಯಡಂ ಝಂಪಾ ತಲಾ ಎರಡು ವಿಕೆಟ್ಗಳನ್ನು ಪಡೆದರು. ಜೋಶ್ ಹೇಜಲ್‌ವುಡ್ ಮತ್ತು ಮಾರ್ಕಸ್ ಸ್ಟೊಯಿನಿಸ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.
ದುಬಾರಿಯಾದ ಇಂಗ್ಲೆಂಡ್ ಬೌಲರ್‌ಗಳು: ಆಸಿಸ್ ಆಟಗಾರರು ಆಂಗ್ಲ ಬೌಲರ್‌ಗಳ ಬೆವರಿಳಿಸಿದರು. ಡೇವಿಡ್ ವಾರ್ನರ್ 16 ಎಸೆತಗಳಲ್ಲಿ 243 ಸ್ಟ್ರೈಕ್ ರೇಟ್‌ನಲ್ಲಿ 36 ರನ್, ಟ್ರಾವಿಸ್ ಹೆಡ್ 18 ಎಸೆತಗಳಲ್ಲಿ 34 ರನ್, ನಾಯಕ ಮಿಚೆಲ್ ಮಾರ್ಷ್ 35 ರನ್‌ಗಳ ಉತ್ತಮ ಇನಿಂಗ್ಸ್ ಆಡಿದರು.
ಮಧ್ಯಮ ಕ್ರಮಾಂಕದಲ್ಲಿ ಸ್ಟೊಯಿನಿಸ್ ವೇಗವಾಗಿ 30 ರನ್ ಗಳಿಸಿದರು. ಮ್ಯಾಥ್ಯೂ ವೇಡ್ 17 ರನ್ ಗಳಿಸಿ ಅಜೇಯರಾಗುಳಿದರು.
ಇಂಗ್ಲೆಂಡ್ ಪರ ಕ್ರಿಸ್ ಜೋರ್ಡಾನ್ ಗರಿಷ್ಠ 2 ವಿಕೆಟ್ ಪಡೆದರು. ಮೊಯಿನ್ ಅಲಿ, ಜೋಫ್ರಾ ಆರ್ಚರ್, ಆದಿಲ್ ರಶೀದ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ತಲಾ 1 ವಿಕೆಟ್ ಪಡೆದರು.