ಮುಂಬೈ: ಕ್ರಿಕೆಟ್ ಪಂದ್ಯಗಳಲ್ಲಿ ಬೌಲರ್ ಒಬ್ಬನೇ 10 ವಿಕೆಟ್‌ಗಳನ್ನು ಪಡೆಯುವುದು ಸುಲಭದ ಮಾತಲ್ಲ. ಇದುವರೆಗೂ ಕ್ರಿಕೆಟ್ ಇನ್ನಿಂಗ್ಸ್ ಒಂದರಲ್ಲಿ ಎಲ್ಲ 10 ವಿಕೆಟ್‌ಗಳನ್ನು ಕಬಳಿಸಿದ ನಿದರ್ಶನಗಳು ಬಹಳ ಕಡಿಮೆ ಇವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂವರು ಮಾತ್ರ ಎಲ್ಲ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಅದರಲ್ಲಿ ಇಂಗ್ಲೆಂಡ್‌ನ ಶ್ರೇಷ್ಠ ಬೌಲರ್ ಜಿಮ್ ಲೇಕರ್, ಭಾರತದ ಮಾಜಿ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಮತ್ತು ಎಜಾಜ್ ಪಟೇಲ್ (ನ್ಯೂಜಿಲೆಂಡ್) ಈ ಮೂವರು ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ್ದಾರೆ. ಇದೀಗ ಮುಂಬೈನ ಯುವ ಕ್ರಿಕೆಟರ್ವೊಬ್ಬರು ಈ ಸಾಧನೆ ಮಾಡಿದ್ದಾರೆ.
ಹೌದು, ಮುಂಬೈನ ಪ್ರತಿಷ್ಠಿತ ಕಂಗಾ ಲೀಗ್‌ನಲ್ಲಿ ಯುವ ಬೌಲರ್ ಶೋಯೆಬ್ ಖಾನ್ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್‌ಗಳನ್ನು ಉರುಳಿಸಿ ಈ ಸಾಧನೆ ಮಾಡಿದ್ದಾರೆ. ಎಡಗೈ ಸ್ಪಿನ್ನರ್ ಶೋಯೆಬ್ ಕಂಗಾ ಲೀಗ್ ಇ ವಿಭಾಗದಲ್ಲಿ ಗೌಡ್ ಸಾರಸ್ವತ್ ಕ್ರಿಕೆಟ್ ಕ್ಲಬ್ (ಗೌಡ ಸಾರಸ್ವತ್ ಸಿಸಿ) ಪರ ಆಡುತ್ತಿದ್ದಾರೆ. ಜಾಲಿ ಕ್ರಿಕೆಟರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 17.4 ಓವರ್‌ಗಳನ್ನು ಎಲ್ಲ 10 ವಿಕೆಟ್‌ಗಳನ್ನು ಪಡೆದು ಮಿಂಚಿದರು. ಇವರ ಈ ಸಾಧನೆ ಗಮನಸಿದ ನೆಟ್ಟಿಗರು ಭವಿಷ್ಯದ ಅನಿಲ್ ಕುಂಬ್ಳೆ ಎಂದಿದ್ದಾರೆ.
A performance for the ages from the Mumbai lad! 🙌#MCA #Mumbai #Cricket #Wankhede #BCCI pic.twitter.com/YDt36LBrdb
— Mumbai Cricket Association (MCA) (@MumbaiCricAssoc) September 23, 2024
ಈ ಪಂದ್ಯದಲ್ಲಿ ಶೋಯಬ್ ಖಾನ್ ಮಾರಕ ಬೌಲಿಂಗ್ ದಾಳಿಗೆ ಜಾಲಿ ಕ್ರಿಕೆಟರ್ಸ್ ತಂಡ ಕೇವಲ 67 ರನ್‌ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಗೌಡ್ ಸಾರಸ್ವತ್ ತಂಡ ಅಂಕುರ್ ದಿಲೀಪ್‌ಕುಮಾರ್ ಸಿಂಗ್ (27*) ಅವರ ಅಜೇಯ ಬ್ಯಾಟಿಂಗ್ ನೆರವಿನಿಂದ ಆರು ವಿಕೆಟ್‌ಗೆ 69 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಕುಂಬ್ಳೆ-ಲೇಕರ್, ಇಜಾಜ್ ದಾಖಲೆ: ಇಂಗ್ಲೆಂಡ್‌ನ ದಂತಕಥೆ ಬೌಲರ್ ಜಿಮ್ ಲೇಕರ್ 1956ರಲ್ಲಿ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಆಸ್ಟ್ರೇಲಿಯನ್ನರ ವಿರುದ್ಧ 53 ರನ್‌ಗಳಿಗೆ 10 ವಿಕೆಟ್ ಪಡೆದ ಅದ್ಭುತ ದಾಖಲೆಯನ್ನು ಹೊಂದಿದ್ದರು. ನಂತರ 1999ರಲ್ಲಿ ಭಾರತದ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಪಾಕಿಸ್ತಾನ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ 26.3 ಓವರ್‌ಗಳಲ್ಲಿ 74 ರನ್ ನೀಡಿ 10 ವಿಕೆಟ್ ಕಬಳಿಸಿದ್ದರು. ನಂತರ ಡಿಸೆಂಬರ್ 2021 ರಲ್ಲಿ ಅಜಾಜ್ ಪಟೇಲ್, ಭಾರತದ ವಿರುದ್ಧ ವಾಂಖೆಡೆ ಟೆಸ್ಟ್ ಪಂದ್ಯದಲ್ಲಿ 119 ರನ್‌ಗಳಿಗೆ 10 ವಿಕೆಟ್ ಪಡೆದಿದ್ದರು.
ಕಂಗಾ ಲೀಗ್ ಇತಿಹಾಸ: ಮಾಜಿ ಕ್ರಿಕೆಟಿಗ ಡಾ. ಹೊರ್ಮುಸ್ಜಿ ಕಂಗಾ ಅವರ ಸ್ಮರಣಾರ್ಥವಾಗಿ ಈ ಲೀಗ್ ಪಂದ್ಯಾವಳಿಯನ್ನು ಪ್ರಾರಂಭಿಸಲಾಯಿತು. ಹೊರ್ಮುಸ್ಜಿ ಕಂಗಾ ಅವರು 43 ಪ್ರಥಮ ದರ್ಜೆ ಪಂದ್ಯಗಳಲ್ಲಿ 1905 ರನ್ ಗಳಿಸಿದ್ದರು ಮತ್ತು 33 ವಿಕೆಟ್‌ಗಳನ್ನು ಪಡೆದಿದ್ದರು. ಮುಂಬೈನ ಆಜಾದ್ ಮೈದಾನ, ಶಿವಾಜಿ ಪಾರ್ಕ್, ಕ್ರಾಸ್ ಮೈದಾನ ಮುಂತಾದ ಮೈದಾನಗಳಲ್ಲಿ ಈ ಲೀಗ್ ಆಡಲಾಗುತ್ತದೆ. ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಕೂಡ ಈ ಲೀಗ್‌ನಲ್ಲಿ ಆಡಿದ್ದರು. 1984ರಲ್ಲಿ ಜಾನ್ ಬ್ರೈಟ್ ಕ್ರಿಕೆಟ್ ಕ್ಲಬ್‌ನಿಂದ 11ನೇ ವಯಸ್ಸಿನಲ್ಲಿ ಈ ಲೀಗ್‌ಗೆ ಪದಾರ್ಪಣೆ ಮಾಡಿದ್ದರು. ಅವರ ಮಗ ಅರ್ಜುನ್ ತೆಂಡೂಲ್ಕರ್ ಕೂಡ 2013 ರಲ್ಲಿ ಕಂಗಾ ಲೀಗ್‌ನಲ್ಲಿ ಆಡಿದ್ದರು.