ಪ್ಯಾರಿಸ್: ಒಲಿಂಪಿಕ್ನ ನಾಲ್ಕನೇ ದಿನವಾದ ಇಂದು ಭಾರತ ಸೇರಿದಂತೆ ವಿಶ್ವದಾದ್ಯಂತ ಆಟಗಾರರು ಪದಕಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇದರ ನಡುವೆಯೇ 7 ತಿಂಗಳ ಗರ್ಭಿಣಿಯೊಬ್ಬರು ಫೆನ್ಸಿಂಗ್ ಗೇಮ್ನಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಈಜಿಪ್ಟ್‌ನ ಫೆನ್ಸರ್ ನಾಡಾ ಹಫೀಜ್ ಅವರು ಫೆನ್ಸಿಂಗ್ನ ಮಹಿಳಾ ಸೇಬರ್ ವೈಯಕ್ತಿಕ ಸ್ಪರ್ಧೆಯಲ್ಲಿ ಭಾಗವಹಿಸಿ 16ನೇ ಸುತ್ತಿನಲ್ಲಿ ಸೋಲನುಭವಿಸಿ ಹೊರ ಬಿದ್ದಿದ್ದಾರೆ. ಆದರೇ ಗರ್ಭಿಣಿಯಾಗಿದ್ದರೂ ಕೂಡ ದೇಶವನ್ನು ಪ್ರತಿನಿಧಿಸಿ ಜನರ ಹೃದಯವನ್ನು ಗೆದ್ದಿದ್ದಾರೆ.
ಪಂದ್ಯ ಸೋಲಿನ ಬಳಿಕ ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಾಡಾ ಹಫೀಜ್, "16ನೇ ಸುತ್ತಿನಲ್ಲಿ ಆಡಿದ್ದಕ್ಕೆ ಹೆಮ್ಮೆಯಾಗುತ್ತಿದೆ. ಈ ಪಂದ್ಯದಲ್ಲಿ ಇಬ್ಬರು ಮಾತ್ರ ಆಡಿಲ್ಲ, ಬದಲಿಗೆ 3 ಜನ ಸ್ಪರ್ಧಿಸಿದ್ದೇವೆ. ನಾನು, ನನ್ನ ಎದುರಾಳಿ ಮತ್ತು ಹೊಟ್ಟೆಯಲ್ಲಿರುವ ಪುಟ್ಟ ಮಗು. ನನ್ನ ಪತಿ ಇಬ್ರಾಹಿಂ ಮತ್ತು ನನ್ನ ಕುಟುಂಬದವರು ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನು ಇಲ್ಲಿಗೆ ಕಳುಹಿಸಿದ್ದು ಅದೃಷ್ಟ ಎಂದು ಭಾವಿಸುತ್ತೇನೆ. ಇದು ನನ್ನ ಪಾಲಿಗೆ ವಿಶೇಷ ಒಲಿಂಪಿಕ್ ಆಗಿದೆ. ಏಕೆಂದರೆ, ಈ ಬಾರಿ ನನ್ನ ಮಗು ಕೂಡ ಇದರಲ್ಲಿ ಭಾಗವಹಿಸಿದೆ ಎಂದು ಭಾವುಕರಾದರು.
26 ವರ್ಷದ ನಾಡಾ ಅವರಿಗೆ ಇದು ಮೂರನೇ ಒಲಿಂಪಿಕ್ ಸ್ಪರ್ಧೆಯಾಗಿದೆ. ಅವರು ತಮ್ಮ ಮೊದಲ ಪಂದ್ಯದಲ್ಲಿ ಯುಎಸ್‌ಎಯ ಎಲಿಜಬೆತ್ ಟಾರ್ಟಕೋವ್ಸ್ಕಿ ವಿರುದ್ಧ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಕೊರಿಯಾದ ಫೆನ್ಸರ್ ಜಿಯೋನ್ ಹೇಯಂಗ್‌ಗೆ ವಿರುದ್ಧ 7-15 ಅಂತರದಿಂದ ಸೋಲನುಭವಿಸಿದರು. ಗರ್ಭಿಣಿಯಾಗಿಯೂ ಒಲಿಂಪಿಕ್ನಲ್ಲಿ ಭಾಗವಹಿಸಿದ ನಾಡಾ ಅವರಿಗೆ ಜನರು ಶುಭ ಕೋರುತ್ತಿದ್ದಾರೆ.
ಇದನ್ನೂ ಓದಿ: ಒಂದೇ ಒಲಿಂಪಿಕ್ನಲ್ಲಿ ಎರಡು ಪದಕ ಪಡೆದ ಏಕೈಕ ಕ್ರೀಡಾಪಟು; ಶೂಟಿಂಗ್ನಲ್ಲಿ ಇತಿಹಾಸ ಬರೆದ ಮನು ಭಾಕರ್ - Paris Olympics 2024