ಬೆಂಗಳೂರು: ಇಂದಿನಿಂದ ಆರಂಭವಾಗಿರುವ ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾರತ ಎ ಹಾಗೂ ಭಾರತ ಬಿ ತಂಡಗಳ ನಡುವಿನ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಆತಿಥ್ಯ ವಹಿಸಿದೆ. ಸಿ ಹಾಗೂ ಡಿ ತಂಡಗಳ ನಡುವಿನ ಹಣಾಹಣಿ ಆಂಧ್ರ ಪ್ರದೇಶದ ಅನಂತಪುರದಲ್ಲಿ ನಡೆಯುತ್ತದೆ. ಈ ಮೂಲಕ ದೇಶಿ ಕ್ರಿಕೆಟ್ ಋತುವಿಗೆ ಅಧಿಕೃತ ಚಾಲನೆ ದೊರೆತಿದೆ.
ಮುಂಬರುವ ಬಾಂಗ್ಲಾದೇಶ-ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಾಗೂ ಭಾರತ-ಆಸ್ಟ್ರೇಲಿಯಾ ಪ್ರವಾಸದ ದೃಷ್ಟಿಯಿಂದ ಆಯ್ಕೆ ಸಮಿತಿಯ ಗಮನ ಸೆಳೆಯಲು ಯುವ ಆಟಗಾರರಿಗೆ ಇದು ಮಹತ್ವದ ಅವಕಾಶ.
ಅನುಭವಿಗಳಾದ ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ರಿಷಭ್ ಪಂತ್, ದೃವ್ ಜುರೆಲ್, ಸರ್ಫರಾಜ್ ಖಾನ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಆಕಾಶ್ ದೀಪ್ ಅವರಂಥ ಆಟಗಾರರಿಗೆ ಮುಂಬರುವ ಸಾಲು ಸಾಲು ಟೂರ್ನಿಗಳ ದೃಷ್ಟಿಯಿಂದ ಸಿದ್ಧತೆ ನಡೆಸಲು ಹಾಗೂ ಹಿಂದಿನ ವೈಫಲ್ಯಗಳನ್ನು ಮೆಟ್ಟಿನಿಂತು ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ವೇದಿಕೆಯಾಗಲಿದೆ. ಇದರ ಜೊತೆಗೆ, ಮಯಾಂಕ್ ಅಗರ್ವಾಲ್, ನವದೀಪ್ ಸೈನಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿ ಟೆಸ್ಟ್ ಕ್ಯಾಪ್ ಪಡೆಯಲು ಉತ್ಸುಕರಾಗಿದ್ದಾರೆ.
ಅವರಷ್ಟೇ ಅಲ್ಲದೇ ರಿಯಾನ್ ಪರಾಗ್, ಶಿವಂ ದುಬೆ, ಖಲೀಲ್ ಅಹಮದ್, ಆವೇಶ್ ಖಾನ್, ತಿಲಕ್ ವರ್ಮಾ, ವಿದ್ವತ್ ಕಾವೇರಪ್ಪ, ಸಾಯಿ ಕಿಶೋರ್, ಯಶ್ ದಯಾಳ್, ರಾಹುಲ್ ಚಹರ್ ಸೇರಿದಂತೆ ಇನ್ನೂ ಅನೇಕ ಆಟಗಾರರು ಟೆಸ್ಟ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಈ ಟೂರ್ನಿ ಅವಕಾಶ ನೀಡಲಿದೆ.
ಇಂದಿನ ಮೊದಲ ಪಂದ್ಯದಲ್ಲಿ ಇಂಡಿಯಾ ಎ ಮತ್ತು ಇಂಡಿಯಾ ಬಿ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದಿರುವ ಶುಭ್‌ಮನ್ ಗಿಲ್ ನೇತೃತ್ವದ ಇಂಡಿಯಾ ಎ ತಂಡ ಮೊದಲಿಗೆ ಬೌಲಿಂಗ್ ಆಯ್ದುಕೊಂಡಿದೆ. ಬ್ಯಾಟಿಂಗ್ಗೆ ಇಳಿದಿರುವ ಇಂಡಿಯಾ ಬಿ ತಂಡ 35.3 ಓವರ್ ವೇಳೆಗೆ 80 ರನ್ಗಳಿಗೆ 5 ವಿಕೆಟ್ ಕಳೆದುಕೊಂಡಿದೆ.
ಬಿ ತಂಡದ ಪರ ಯಶಸ್ವಿ ಜೈಸ್ವಾಲ್ 30 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರೆ, ಅಭಿಮನ್ಯು ಈಶ್ವರನ್ (13), ಸರ್ಫರಾಜ್ ಖಾನ್ (9) ಆವೇಶ ಖಾನ್ ಬಲೆಗೆ ಬಿದ್ದು ಪೆವಿಲಿಯನ್ ಸೇರಿದ್ದರೆ, ಆಕಾಶ ದೀಪ್ ಎಸೆತದಲ್ಲಿ ರಿಷಭ್ ಪಂತ್ (7) ಮತ್ತು ನಿತೀಶ್ ಕುಮಾರ್ ರೆಡ್ಡಿ ಖಾತೆ ತೆರಯದೆ ನಿರ್ಗಮಿಸಿದ್ದಾರೆ. ಎ ತಂಡದ ಪರ ಆವೇಶ್ ಖಾನ್, ಆಕಾಶ್ ದೀಪ್ ತಲಾ 2 ವಿಕೆಟ್ ಪಡೆದರೆ ಖಲೀಲ್ ಅಹ್ಮದ್ 1 ವಿಕೆಟ್ ಉರುಳಿಸಿದ್ದಾರೆ.