ಹೈದರಾಬಾದ್: ಶನಿವಾರ ಟೀಂ ಇಂಡಿಯಾ ಪಾಲಿಗೆ ಅದೃಷ್ಟದ ದಿನವಾಗಿದೆ. ಏಕೆಂದರೇ ಇದೇ ದಿನದಂದು ಈವರೆಗೆ ಭಾರತ 3 ಐಸಿಸಿ ಟ್ರೋಫಿಗಳನ್ನು ಗೆದ್ದುಕೊಂಡಿದೆ. 1983ರಲ್ಲಿ ಚೊಚ್ಚಲ ಏಕದಿನ ವಿಶ್ವಕಪ್, 2011ರಲ್ಲಿ ಎರಡನೇ ಏಕದಿನ ವಿಶ್ವಕಪ್, ಇದೀಗ ನಿನ್ನೆ (ಜೂ.29) ಎರಡನೇ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಈ ಮೂರು ಟ್ರೋಫಿಗಳು ಶನಿವಾರದಂದೇ ಗೆದ್ದಿರುವುದರಿಂದ ಟೀಂ ಇಂಡಿಯಾಗೆ ಈ ದಿನ ವಿಶೇಷವಾಗಿದೆ ಎಂಬ ಚರ್ಚೆ ಶುರುವಾಗಿದೆ.
ಚೊಚ್ಚಲ ವಿಶ್ವಕಪ್: 1983 ಜೂನ್ 25ರಂದು ಭಾರತ ಚೊಚ್ಚಲ ವಿಶ್ವಕಪ್ ಗೆದ್ದಿದ್ದ ವೇಳೆ ಆ ದಿನ ಶನಿವಾರ ಆಗಿತ್ತು. ಈ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕಪ್ ಗೆಲ್ಲುವ ಫೆವರೆಟ್ ತಂಡವಾಗಿ ಗುರುತಿಸಿಕೊಂಡಿರಲಿಲ್ಲ. ಆದರೆ ನಾಯಕ ಕಪಿಲ್ ದೇವ್ ನೇತೃತ್ವದ ತಂಡ ಸತತ ಹೋರಾಟದ ಫಲವಾಗಿ ಫೈನಲ್ಗೆ ತಲುಪಿತ್ತು.
ಈ ಫೈನಲ್ ಪಂದ್ಯ ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದಿತ್ತು. ಭಾರತ ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮತ್ತ ಕಪ್ ಗೆಲ್ಲುವ ಫೆವರೆಟ್ ತಂಡ ಎನಿಸಿಕೊಂಡಿದ್ದ ವೆಸ್ಟ್ ಇಂಡೀಸ್ ವಿರುದ್ಧ ಫೈನಲ್ ಕದನಕ್ಕಿಳಿದಿತ್ತು. ವೆಸ್ಟ್ ಇಂಡೀಸ್ ಈ ಪಂದ್ಯ ಸುಲಭವಾಗಿ ಗೆಲ್ಲಲಿದೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆಯನ್ನು ಹುಸಿಗೊಳಿಸಿದ ಭಾರತ ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಬಗ್ಗುಬಡಿದು ಚೊಚ್ಚಲ ವಿಶ್ವಕಪ್ ಜಯಿಸಿತ್ತು.
ವೆಸ್ಟ್ ಇಂಡೀಸ್‌ನ ಬ್ಯಾಟಿಂಗ್ ಲೈನ್-ಅಪ್‌ನಲ್ಲಿ ವಿವಿಯನ್ ರಿಚರ್ಡ್ಸ್‌ನಂತಹ ದಿಗ್ಗಜ ಆಟಗಾರರಿದ್ದರು. ಭಾರತದ ಮೊಹಿಂದರ್ ಅಮರನಾಥ್ ಮತ್ತು ಮದನ್ ಲಾಲ್ ಅವರ ಮಾರಕ ಬೌಲಿಂಗ್ ದಾಳಿಗೆ ಇಡೀ ವಿಂಡೀಸ್ ತಂಡ ಶರಣಾಗಿತ್ತು. ಅದು ದಿನವೂ ಶನಿವಾರವೇ ಆಗಿತ್ತು.
ಎರಡನೇ ವಿಶ್ವಕಪ್: ಇದಾದ ಬಳಿಕ ಏಪ್ರಿಲ್ 2, 2011ರಂದು ಶನಿವಾರದಂದೇ ಭಾರತ ಎರಡನೇ ಏಕದಿನ ವಿಶ್ವಕಪ್ ಜಯಿಸಿತ್ತು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟೀಂ ಇಂಡಿಯಾ ಶ್ರೀಲಂಕಾವನ್ನು ಮಣಿಸುವ ಮೂಲಕ ಟ್ರೋಫಿಯನ್ನು ಎತ್ತಿ ಹಿಡಿದಿತ್ತು.
ಟಿ20 ವಿಶ್ವಕಪ್: ಇದೀಗ ನಿನ್ನೆ ಅಂದರೆ ಶನಿವಾರವೇ ಟೀಂ ಇಂಡಿಯಾ ಎರಡನೇ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳಿಂದ ರೋಚಕ ಗೆಲುವು ಸಾಧಿಸುವ ಮೂಲಕ ಎರಡನೇ ಬಾರಿಗೆ ಕಪ್ ಎತ್ತಿಹಿಡಿದಿದೆ.
ಇದನ್ನೂ ಓದಿ: ಕೊಹ್ಲಿ- ರೋಹಿತ್ ಶರ್ಮಾ ಬೆನ್ನಲ್ಲೇ ಟಿ20ಗೆ ಆಲ್ ರೌಂಡರ್ ರವೀಂದ್ರ ಜಡೇಜಾ ವಿದಾಯ - Ravindra Jadeja retires