ಶಿವಮೊಗ್ಗ: ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನಕ್ಕೆ ಕಾರ ಹುಣ್ಣಿಮೆ ಪ್ರಯುಕ್ತ ಸಾವಿರಾರು ಭಕ್ತರು ಶುಕ್ರವಾರ ಆಗಮಿಸಿ ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ಸಲ್ಲಿಸಿದರು.
ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಾವೇರಿ ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ರಾಣೇಬೆನ್ನೂರು, ಶಿಕಾರಿಪುರ, ಹರಿಹರ, ಹಾನಗಲ್, ವಿಜಯಪುರ, ಬಾಗಲಕೋಟೆ, ಚಿತ್ರದುರ್ಗ, ರಾಯಚೂರು, ಸೇರಿದಂತೆ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಮಳೆಯ ನಡುವೆಯೂ ಆಗಮಿಸಿ ಮಲೆನಾಡಿನ ಆರಾಧ್ಯ ದೇವಿ ರೇಣುಕಾದೇವಿಯ ದರ್ಶನ ಪಡೆದು ಉಧೋ ಉಧೋ ಎಂದು ಜೈಕಾರ ಹಾಕಿ ಭಕ್ತಿ ಸಮರ್ಪಿಸಿದರು.
ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ ತ್ರಿಶೂಲದ ಭೈರಪ್ಪ ದೇವರಿಗೆ ಹಾಗೂ ತೊಟ್ಟಿಲು ಬಾವಿಗೆ ಹುಣ್ಣಿಮೆಯ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವರ ಹೆಸರಿನಲ್ಲಿ ಭಕ್ತರು ಧಾರ್ಮಿಕ ಪೂಜಾ ವಿಧಿ ವಿಧಾನಗಳಾದ ಪಡ್ಲಿಗೆ ತುಂಬಿಸುವುದು, ಮುಡಿ ನೀಡುವುದು, ಕಿವಿ ಚುಚ್ಚಿಸುವುದು, ವಿವಿಧ ಸೇವೆಗಳನ್ನು ಆಚರಿಸಿದರು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ ಹಿನ್ನೆಲೆಯಲ್ಲಿ ಚಂದ್ರಗುತ್ತಿ ಮುಖ್ಯರಸ್ತೆಯಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿತು.
ಇದನ್ನೂ ಓದಿ: ಐದು ವರ್ಷಕ್ಕೊಮ್ಮೆ ಜರುಗುವ ದುರ್ಗಾದೇವಿಯ ಅದ್ಧೂರಿ ಜಾತ್ರೆ; ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ - Grand Bhandara Jatre