ETV Bharat / opinion

ಯುಪಿಎಸ್​ಸಿ ಪ್ರಯತ್ನಿಸುವುದು ಆಕಾಂಕ್ಷೆಯ ಬಡತನವಲ್ಲ, ಅದು ಆಕಾಂಕ್ಷೆಯ ಉದಾತ್ತತೆ: ಪ್ರೊ. ಮಿಲಿಂದ್​ ಕುಮಾರ್​ ಶರ್ಮಾ - UPSC Exams

ಯುಪಿಎಸ್​ಸಿ ಪರೀಕ್ಷೆಗಳನ್ನು ಪಾಸು ಮಾಡಲು ಪ್ರಯತ್ನಿಸುವುದು ಎಂದರೆ ಆಕಾಂಕ್ಷೆಯ ಬಡತನ ಎಂಬ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಯೊಬ್ಬರ ಹೇಳಿಕೆ ಏಕೆ ಸರಿಯಲ್ಲ ಎಂಬ ಬಗ್ಗೆ ಪ್ರಾಧ್ಯಾಪಕ ಮಿಲಿಂದ್ ಕುಮಾರ್ ಶರ್ಮಾ ವಿಶ್ಲೇಷಣೆ ಮಾಡಿದ್ದಾರೆ.

ಯುಪಿಎಸ್​ಸಿ ಕಚೇರಿ
ಯುಪಿಎಸ್​ಸಿ ಕಚೇರಿ (IANS (ಸಾಂದರ್ಭಿಕ ಚಿತ್ರ))
author img

By ETV Bharat Karnataka Team

Published : Jul 2, 2024, 8:08 PM IST

ಇತ್ತೀಚೆಗೆ ಬಿಡುಗಡೆಯಾದ ಯುಪಿಎಸ್​ಸಿ ಫಲಿತಾಂಶಗಳು ಎಂದಿನಂತೆ ಹೆಚ್ಚಿನ ಉತ್ಸಾಹವನ್ನು ಹುಟ್ಟುಹಾಕಿದ್ದು, ದೇಶದ ಅತ್ಯಂತ ಅಪೇಕ್ಷಿತ ಸರ್ಕಾರಿ ಹುದ್ದೆಗಳನ್ನು ನಿರ್ವಹಿಸಲಿರುವ ಆಕಾಂಕ್ಷಿಗಳ ಅದ್ಭುತ ಯಶಸ್ಸು ಪ್ರದರ್ಶಿಸಿದೆ. ಆದರೆ, ಈ ವಿಷಯದ ಬಗ್ಗೆ ಕೆಲ ತಿಂಗಳ ಹಿಂದೆ ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿಯ (ಪಿಎಂಇಎಸಿ) ಅಧಿಕಾರಿಯೊಬ್ಬರು ನೀಡಿದ ಹೇಳಿಕೆಗಳು ಈಗ ವಿವಾದ ಸೃಷ್ಟಿಸಿವೆ. ಯುಪಿಎಸ್​ಸಿ ಪಾಸಾಗುವ ಪ್ರಯತ್ನಗಳನ್ನು "ಆಕಾಂಕ್ಷೆಯ ಬಡತನ" ಎಂದು ಬಣ್ಣಿಸಿದ ಆ ಅಧಿಕಾರಿ, ಯುಪಿಎಸ್​ಸಿ ಪರೀಕ್ಷೆಗಳಿಗೆ ತಯಾರಿ ನಡೆಸುವುದು ಕೇವಲ ಸಮಯದ ವ್ಯರ್ಥ ಎಂದು ಹೇಳಿದ್ದಾರೆ.

ಬರೀ ಯುಪಿಎಸ್​ ಪಾಸಾಗಿ ಸರ್ಕಾರದಲ್ಲಿ ಮತ್ತೋರ್ವ ಜಂಟಿ ಕಾರ್ಯದರ್ಶಿ ಹುದ್ದೆ ಪಡೆಯಲು ಪ್ರಯತ್ನಿಸುವ ಬದಲು, ಇಂದಿನ ಯುವಕರು ತಾವು ಮತ್ತೊಬ್ಬ ಎಲೋನ್ ಮಸ್ಕ್ ಅಥವಾ ಮುಖೇಶ್ ಅಂಬಾನಿಯ ರೀತಿಯ ವ್ಯಕ್ತಿಯಾಗಲು ಬಯಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. ಇನ್ನೊಂದು ಮಗ್ಗುಲನ್ನು ನೋಡುವುದಾದರೆ, ಈ ಸಲಹೆ ನೀಡಿದ ಅಧಿಕಾರಿಯು ಪ್ರಸ್ತುತ ಸರ್ಕಾರದಲ್ಲಿ ಹಿಂಬಾಗಿಲ ಮೂಲಕ ಪ್ರವೇಶ ಪಡೆದಿದ್ದು, ಸಾರ್ವಜನಿಕ ನೀತಿ ಕ್ಷೇತ್ರದಲ್ಲಿ ಕೆಲಸ ಮಾಡಲು ಹೆಚ್ಚಿನ ಸಂಬಳದ ಕೆಲಸವನ್ನು ಬಿಟ್ಟು ಬಂದಿದ್ದಾರೆ.

ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯ ಯುವಕರು ಲಭ್ಯ ಇರುವ ಕೆಲ ಸಾವಿರ ಸಂಖ್ಯೆಯ ನೌಕರಿಗಳ ಪೈಕಿ ತಾವೂ ಒಂದನ್ನು ಪಡೆಯಲು ತೀವ್ರ ಪೈಪೋಟಿ ನಡೆಸುತ್ತಾರೆ. ಪ್ರತಿವರ್ಷ ತಯಾರಾಗುವ ಎಲ್ಲ ಯುವ ಪ್ರತಿಭೆಗಳಿಗೆ ಸಾಕಾಗುವಷ್ಟು ಉದ್ಯೋಗಗಳನ್ನು ನಮ್ಮ ಆರ್ಥಿಕತೆಯು ಸೃಷ್ಟಿಸುತ್ತಿಲ್ಲ ಎಂದು ಐಎಲ್​ಒ ವರದಿ ಹೇಳಿದೆ.

ಆದಾಗ್ಯೂ, ಯುಪಿಎಸ್​ಸಿ ಪಾಸಾಗಲು ಪ್ರಯತ್ನಿಸುವುದನ್ನು ಆಕಾಂಕ್ಷೆಯ ಬಡತನ ಎಂದು ಕರೆಯುವುದು ಅನ್ಯಾಯಕರ ಮತ್ತು ಅನಗತ್ಯ. ಇಂತಹ ವಿಲಕ್ಷಣ ಹೇಳಿಕೆಗಳು ಅವಹೇಳನಕಾರಿ ಮಾತ್ರವಲ್ಲ, ಸರ್ಕಾರದ ನೀತಿ ನಿರೂಪಕರಾಗುವ ಉತ್ಸಾಹ ಹೊಂದಿರುವವರಿಗೆ ನಿರುತ್ಸಾಹ ಮೂಡಿಸುತ್ತವೆ.

ಇದಕ್ಕೆ ವ್ಯತಿರಿಕ್ತವಾಗಿ ಇಂದಿನ ಯುವಕರಲ್ಲಿ ಅಧಿಕಾರಿಯಾಗಬೇಕು ಎಂಬ ಹೆಚ್ಚುತ್ತಿರುವ ಆಕಾಂಕ್ಷೆಯನ್ನು "ಆಕಾಂಕ್ಷೆಯ ಉದಾತ್ತತೆ" ಎಂದು ಹೇಳಬಹುದು. ಐಎಎಸ್, ಐಪಿಎಸ್ ಮತ್ತು ಐಎಫ್ಎಸ್​ನಂತಹ ಉನ್ನತ ದರ್ಜೆಯ ಹುದ್ದೆಗಳಿಗೆ ಅರ್ಹತೆ ಪಡೆದವರ ಅಂಕಿ - ಅಂಶಗಳ ಡೇಟಾವನ್ನು ಪರಿಶೀಲಿಸಿದಾಗ, ಈ ಅಭ್ಯರ್ಥಿಗಳಲ್ಲಿ ಹೆಚ್ಚಿನವರು ಎಂಜಿನಿಯರಿಂಗ್ ಅಥವಾ ವೈದ್ಯಕೀಯ, ನಿರ್ವಹಣೆ, ಚಾರ್ಟರ್ಡ್ ಅಕೌಂಟೆನ್ಸಿ, ಕಾನೂನು ಮುಂತಾದ ತಾಂತ್ರಿಕ ಪದವಿಗಳನ್ನು ಹೊಂದಿರುವುದು ಕಂಡು ಬರುತ್ತದೆ.

ಬಹುತೇಕ ಇಂಥ ಯುವಕರು ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿರುತ್ತಾರೆ ಮತ್ತು ಅವರು ಖಾಸಗಿ ವಲಯದಲ್ಲಿ ದೊಡ್ಡ ಸಂಬಳದ ಕೆಲಸವನ್ನು ಗಿಟ್ಟಿಸಿಕೊಳ್ಳುವ ಅರ್ಹತೆ ಹೊಂದಿದ್ದಾರೆ. ಅವರು ಬಯಸಿದರೆ ವಿದೇಶಕ್ಕೆ ಹೋಗಿ ಕೂಡ ಕೆಲಸ ಮಾಡಬಹುದು. ಆದರೂ ಅವರು ಭಾರತದ ಅಧಿಕಾರಶಾಹಿ ವರ್ಗಕ್ಕೆ ಸೇರುವ ಆಸೆಯಿಂದ ಅದೆಲ್ಲವನ್ನೂ ತ್ಯಾಗ ಮಾಡಲು ನಿರ್ಧರಿಸಿರುತ್ತಾರೆ. ಖಾಸಗಿ ವಲಯಕ್ಕೆ ಹೋಲಿಸಿದರೆ ಸರ್ಕಾರಿ ವಲಯದಲ್ಲಿ ಸಿಗುವ ಸಂಬಳ ಅತ್ಯಲ್ಪ ಎಂಬುದು ಕೂಡ ಇಲ್ಲಿ ಗಮನಾರ್ಹ.

ವಿಶ್ವದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್​ಸಿ ಪಾಸ್​​ ಮಾಡಬೇಕಾದರೆ ಅತ್ಯಂತ ಕಠಿಣ ಪರಿಶ್ರಮ ಬೇಕಾಗುತ್ತದೆ. ಯುಪಿಎಸ್​ಸಿ ಪಠ್ಯಕ್ರಮದ ವಿಶಾಲವಾದ, ವಿಸ್ತಾರದ ಅಸಂಖ್ಯಾತ ಅಂಶಗಳ ಬಗ್ಗೆ ತಿಳಿವಳಿಕೆ ಪಡೆಯಬೇಕಾದರೆ ಒಬ್ಬ ವ್ಯಕ್ತಿಗೆ ಸರಾಸರಿ ಒಂದರಿಂದ ಎರಡು ವರ್ಷಗಳು ಬೇಕಾಗುತ್ತವೆ.

ಭಾರತದ ಶ್ರೀಮಂತ ಪರಂಪರೆಗೆ ಆಧಾರವಾಗಿರುವ ವೈವಿಧ್ಯಮಯ ಸಾಮಾಜಿಕ ಪರಿಸರ, ರಾಷ್ಟ್ರವು ಎದುರಿಸುತ್ತಿರುವ ಅನೇಕ ಸವಾಲುಗಳು ಮತ್ತು ನೀತಿ ರೂಪಿಸುವ ಕ್ಷೇತ್ರದಲ್ಲಿ ವ್ಯಾಪಿಸಿರುವ ರಾಜಕೀಯ ಅರ್ಥಶಾಸ್ತ್ರದ ಸೂಕ್ಷ್ಮತೆಗಳ ಬಗ್ಗೆ ತಿಳಿಯಲು ವರ್ಷಗಳನ್ನೇ ವ್ಯಯಿಸಬೇಕಾಗುತ್ತದೆ. ಯಶಸ್ಸು ಮತ್ತು ಹಿನ್ನಡೆಗಳ ಮಿಶ್ರಣದಿಂದ ತುಂಬಿರುವ ಯುಪಿಎಸ್​ಸಿ ಪ್ರಯಾಣವನ್ನು ಮುಂದುವರಿಸಬೇಕಾದರೆ ಶ್ರಮದಾಯಕ ಪ್ರಯತ್ನ, ಮಾನಸಿಕ ದೃಢತೆ, ಸಹಿಷ್ಣುತೆ ಮತ್ತು ಸಜ್ಜುಗೊಳಿಸುವಿಕೆಗಳು ಬಹಳ ಅಗತ್ಯವಾಗಿವೆ.

ಆಕಾಂಕ್ಷಿಗಳು ತಮ್ಮ ಆಯ್ಕೆಯ ಹುದ್ದೆಗಳನ್ನು ಪಡೆಯಲು ಪುನರಾವರ್ತಿತ ಪ್ರಯತ್ನಗಳನ್ನು ಮಾಡುವ ಬಗ್ಗೆ ಆರ್ಥಿಕ ಸಲಹಾ ಮಂಡಳಿಯ ಅಧಿಕಾರಿಗೆ ಆಕ್ಷೇಪವಿರುವಂತೆ ಕಾಣಿಸುತ್ತದೆ. ಬಹುಶಃ, ಯಶಸ್ಸನ್ನು ರಾತ್ರೋರಾತ್ರಿ ಸಾಧಿಸಬಹುದು ಮತ್ತು ಒಂದು ಬಾರಿ ವೈಫಲ್ಯ ಉಂಟಾದರೆ ಅಲ್ಲಿಗೆ ಪ್ರಯತ್ನ ಮಾಡುವುದನ್ನೇ ನಿಲ್ಲಿಸಬೇಕು ಎಂದು ಆ ಅಧಿಕಾರಿಯ ನಂಬಿಕೆಯಾಗಿರಬಹುದು.

ಈ ತಪ್ಪು ಕಲ್ಪನೆಯು 'ಚರೈವೇತಿ ಚರೈವೇತಿ' ಅಂದರೆ ನೀವು ಗಮ್ಯಸ್ಥಾನವನ್ನು ತಲುಪುವವರೆಗೂ ದೃಢವಾಗಿ ನಡೆಯುತ್ತಲೇ ಇರಿ ಎಂದು ಹೇಳುವ ವೇದಗಳ ಬೋಧನೆಗಳಿಗೆ ವಿರುದ್ಧವಾಗಿದೆ. ಖಾಸಗಿ ವಲಯಕ್ಕೆ ಸೇರಿದರೆ ಯಶಸ್ಸು ಖಚಿತವಾಗಿ ಸಿಗುತ್ತದೆ ಎಂಬುದು ಅಧಿಕಾರಿಯ ಭಾವನೆಯಾಗಿರಬಹುದು ಎಂದು ಕಂಡು ಬರುತ್ತದೆ. ಆದರೆ ವಾಸ್ತವ ಸಂಗತಿಗಳು ಮತ್ತು ಸಾಮಾನ್ಯ ಜ್ಞಾನದಿಂದ ನೋಡಿದರೆ ಸತ್ಯ ಬೇರೆಯದೇ ಆಗಿರುವುದು ಕಾಣಿಸುತ್ತದೆ.

"ಹಾರ್ವರ್ಡ್ ಬಿಸಿನೆಸ್ ರಿವ್ಯೂ" ಪ್ರಕಾರ, ಸುಮಾರು ಶೇಕಡಾ 90 ಸ್ಟಾರ್ಟ್ಅಪ್​ಗಳು ಒಂದೇ ಸಲಕ್ಕೆ ಲಾಭದಾಯಕ ಉದ್ಯಮಗಳಾಗಿ ಬೆಳೆಯಲು ಸಾಧ್ಯವಿಲ್ಲ. ಆದರೆ, ಇದನ್ನು ಮಾನವ ಪ್ರಯತ್ನದ ವೈಫಲ್ಯ ಎಂದು ಹೇಳಲಾಗದು. ಇದು ಇನ್ನಷ್ಟು ಉತ್ತಮ ನಾಳೆಗಳಿಗಾಗಿ ಶ್ರಮಿಸುವ ಮಾನವ ಜಾಣ್ಮೆಯನ್ನು ಪ್ರತಿಬಿಂಬಿಸುತ್ತದೆ.

ಯಾವುದೇ ಆವಿಷ್ಕಾರವು ಹಿನ್ನಡೆ ಮತ್ತು ವೈಫಲ್ಯಗಳನ್ನು ಅನುಭವಿಸದೆ ಸಾಧಿಸಿರುವಂಥದ್ದಲ್ಲ. ಈ ಸಮಯದಲ್ಲಿ ಥಾಮಸ್ ಆಲ್ವಾ ಎಡಿಸನ್ ಅವರ ಹೇಳಿಕೆಯನ್ನು ಗಮನಿಸಬೇಕಾಗುತ್ತದೆ. "ನಾನು 10,000 ಬಾರಿ ವಿಫಲವಾಗಿಲ್ಲ, ವಿಫಲತೆಯನ್ನು ಉಂಟು ಮಾಡುವ 10,000 ಮಾರ್ಗಗಳನ್ನು ನಾನು ಯಶಸ್ವಿಯಾಗಿ ಕಂಡುಕೊಂಡಿದ್ದೇನೆ" ಎಂದು ಅವರು ಹೇಳಿದ್ದರು. ಭಾರತವನ್ನು ಯಶಸ್ವಿಗೊಳಿಸುವ ಸಂಕಲ್ಪದಲ್ಲಿ ಪಟ್ಟುಹಿಡಿದಿದ್ದ ನಮ್ಮ ವಿಜ್ಞಾನಿಗಳ ಹಾದಿಯಲ್ಲಿ ವೈಫಲ್ಯಗಳು ಅಡ್ಡಿಯಾಗಲು ಸಾಧ್ಯವಿಲ್ಲ ಎಂಬುದಕ್ಕೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಸಾಕ್ಷಿಯಾಗಿದೆ. ಚಂದ್ರಯಾನ -3 ಇದಕ್ಕೆ ಉತ್ತಮ ಉದಾಹರಣೆಯಾಗಿದೆ. ಆದ್ದರಿಂದ ಯಾವುದೇ ಪ್ರಯತ್ನ ಮಾಡುವಾಗ ಪುನಃ ಪ್ರಯತ್ನ ಮಾಡುವುದನ್ನು ನಿಲ್ಲಿಸಬಾರದು ಮತ್ತು ಅದನ್ನು ಆಕಾಂಕ್ಷೆಯ ಬಡತನವೆಂದು ತಿಳಿಯಬಾರದು.

ಯುಪಿಎಸ್​ಸಿ ಸೇವೆಗಳಿಗೆ ಸೇರಲು ಬಯಸುವವರು ದೊಡ್ಡ ಸಾಮಾಜಿಕ ಉದ್ದೇಶಕ್ಕಾಗಿ ಕೆಲಸ ಮಾಡುವ ಉತ್ಸಾಹ ಮತ್ತು ಬದ್ಧತೆಯಿಂದ ಪ್ರೇರೇಪಿಸಲ್ಪಡುತ್ತಾರೆ. ಅವರ ಹೃದಯ ಮತ್ತು ಮನಸ್ಸಿನಲ್ಲಿ ನಿಸ್ವಾರ್ಥ ಮನೋಭಾವ ಬೇರೂರಿರುತ್ತದೆ. ಸಾರ್ವಜನಿಕ ಸೇವೆ ಎಂಬುದು ಅದರ ನಿಜವಾದ ಅರ್ಥದ ಹೊರತಾಗಿ ಕೆಲವರಿಗೆ ಬೇರೆಯಾಗಿ ಧ್ವನಿಸಬಹುದು.

ಸಮಾಜದ ಕೆಳಸ್ತರದಲ್ಲಿನ ವರ್ಗಗಳಿಗೆ ಸೇರಿದವರಿಗೆ ಇದು ಸಾಮಾಜಿಕವಾಗಿ ಮುಂದುವರಿಯುವ ಮಾರ್ಗವಾಗಿರಬಹುದು ಮತ್ತು ತಾವಿರುವ ಸಾಮಾಜಿಕ ಪರಿಸರವನ್ನು ಸುಧಾರಿಸುವ ಹೆಬ್ಬಾಗಿಲಾಗಿರಬಹುದು. ಇನ್ನು ಕೆಲವರಿಗೆ ದೇಶದ ರಾಜತಾಂತ್ರಿಕರಾಗಿ ವಿಶ್ವದಲ್ಲಿ ದೇಶದ ಖ್ಯಾತಿಯನ್ನು ಹೆಚ್ಚಿಸುವುದು ಉನ್ನತ ಗುರಿಯಾಗಿರಬಹುದು. ಇನ್ನೂ ಕೆಲವರಿಗೆ ಪೊಲೀಸ್​ ಇಲಾಖೆಗೆ ಸೇರಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸುವುದು ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವುದು ಉದ್ದೇಶವಾಗಿರಬಹುದು.

ಹೀಗಾಗಿ ಅಧಿಕಾರಿಯೊಬ್ಬರ ಇಂತಹ ಕಟುವಾದ ಹೇಳಿಕೆಗಳು ಈ ಆಕಾಂಕ್ಷಿಗಳಲ್ಲಿ ಹುದುಗಿರುವ ಸಾರ್ವಜನಿಕ ಸೇವೆಯ ಉತ್ಸಾಹಕ್ಕೆ ಆಘಾತವನ್ನುಂಟುಮಾಡುತ್ತವೆ. ಅವು ಮಹತ್ವಾಕಾಂಕ್ಷೆಯ ಯುವಕರನ್ನು ಭ್ರಮನಿರಸನಗೊಳಿಸುವುದಲ್ಲದೆ, ಈ ರಾಷ್ಟ್ರದ ಅಭಿವೃದ್ಧಿ ಪಥವನ್ನು ರೂಪಿಸುವಲ್ಲಿ ನಾಗರಿಕ ಸೇವಕರು ನೀಡಿದ ಅದ್ಭುತ ಕೊಡುಗೆಯನ್ನು ನಿರ್ಲಕ್ಷಿಸಿದಂತಾಗುತ್ತದೆ. ವಿಶ್ವದ ಅತಿದೊಡ್ಡ ಚುನಾವಣಾ ಪ್ರಕ್ರಿಯೆಯನ್ನು ನಡೆಸುವ ಮೂಲಕ ಸಂವಿಧಾನದಲ್ಲಿ ಕಲ್ಪಿಸಲಾದ ಪ್ರಜಾಪ್ರಭುತ್ವ ಪ್ರಯೋಗವನ್ನು ವಾಸ್ತವವಾಗಿ ಪರಿವರ್ತಿಸುವಲ್ಲಿ ನಮ್ಮ ನಾಗರಿಕ ಸೇವಾ ಅಧಿಕಾರಿಗಳ ಪ್ರತಿಭೆ ಪ್ರಮುಖ ಪಾತ್ರ ವಹಿಸಿದೆ ಎಂಬುದನ್ನು ನಾವು ಮರೆಯಬಾರದು. ಇದು ದೇಶದ ಸಾಮಾಜಿಕ - ಆರ್ಥಿಕ ಪರಿವರ್ತನೆಯನ್ನು ವೇಗವರ್ಧಿಸುವ ನಿಟ್ಟಿನಲ್ಲಿ ಅವರ ಹಲವಾರು ಕೊಡುಗೆಗಳಲ್ಲಿ ಒಂದಾಗಿದೆ.

ಇದರರ್ಥ ಅಧಿಕಾರಶಾಹಿಯು ದೋಷರಹಿತವಾಗಿದೆ ಮತ್ತು ಯಾವುದೇ ಸುಧಾರಣೆಗಳ ಅಗತ್ಯವಿಲ್ಲ ಎಂದಲ್ಲ. ಆದರೆ ಅವಕಾಶಗಳ ವಿಷಯದಲ್ಲಿ ಇದನ್ನು ಖಾಸಗಿ ವಲಯದೊಂದಿಗೆ ಹೋಲಿಸುವುದು ಸೇಬು ಮತ್ತು ಕಿತ್ತಳೆಗಳನ್ನು ಹೋಲಿಸುವುದಕ್ಕೆ ಸಮಾನವಾಗಿದೆ. ನೀತಿ ಆಯೋಗದ ಮಾಜಿ ಸಿಇಒ ಮತ್ತು ಈಗ ಜಿ 20 ಷೆರ್ಪಾ ಆಗಿರುವ ಅಧಿಕಾರಿ ಅಮಿತಾಬ್ ಕಾಂತ್ ಅವರು ಪಿಎಂಇಎಸಿ ಅಧಿಕಾರಿಯ ಹೇಳಿಕೆಯೊಂದಿಗೆ ಸಹಮತಿ ಹೊಂದಿಲ್ಲ ಮತ್ತು ಖಾಸಗಿ ವಲಯದಲ್ಲಿ ನೀವು ಎಂದಿಗೂ ಪಡೆಯಲಾಗದ ಗೌರವ ಮತ್ತು ಹೆಮ್ಮೆಯ ಭಾವನೆಗಳನ್ನು ಸರ್ಕಾರ ನಿಮಗೆ ನೀಡುತ್ತದೆ ಎಂದು ಅವರು ಹೇಳಿದರು.

ಆದಾಗ್ಯೂ, ರಾಷ್ಟ್ರ ನಿರ್ಮಾಣದಲ್ಲಿ ಖಾಸಗಿ ವಲಯದ ಮಹತ್ವವನ್ನು ಕಾಂತ್ ಒಪ್ಪಿಕೊಂಡರು. ಈ ವಲಯ ಬೆಳೆಯಲು ಸರ್ಕಾರವು ಕೈಹಿಡಿಯಬೇಕೆಂದು ಪ್ರತಿಪಾದಿಸಿದರು. ಭಾರತದ ಬೆಳವಣಿಗೆಯ ಗಾಥೆಯನ್ನು ರೂಪಿಸುವಲ್ಲಿ ಇಬ್ಬರೂ ಸಮಾನ ಪಾಲುದಾರರು ಮತ್ತು ಇಬ್ಬರೂ ಇರಬೇಕು ಎಂಬುದನ್ನು ಇದು ಒತ್ತಿಹೇಳುತ್ತದೆ. ಅಲ್ಲದೆ, ಅಂತರ್ಗತ ಮತ್ತು ಸುಸ್ಥಿರವಾದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸಲು ಖಾಸಗಿ ವಲಯವು ಸರ್ಕಾರದೊಂದಿಗೆ ಕೊಡುಗೆ ನೀಡಲು ಮತ್ತು ಸಹಕರಿಸಲು ಅನುವು ಮಾಡಿಕೊಡುವ ಅನುಕೂಲಕರ ನೀತಿ ಪರಿಸರ ವ್ಯವಸ್ಥೆಯನ್ನು ಬೆಳೆಸಲು ನಾಗರಿಕ ಸೇವಾ ಅಧಿಕಾರಿಗಳು ಸಹಾಯ ಮಾಡಬಹುದು. ಇಂತಹ ನೀತಿ ಚೌಕಟ್ಟು ಉದ್ಯಮಶೀಲತಾ ಮನೋಭಾವ ಹೊಂದಿರುವವರಿಗೆ ಮಿಲಿಯನೇರ್ ಮತ್ತು ಬಿಲಿಯನೇರ್ ಆಗಲು ಅನುವು ಮಾಡಿಕೊಡುತ್ತದೆ.

ರಾಷ್ಟ್ರದ ನಿಜವಾದ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಮತ್ತು ಜನಸಂಖ್ಯಾ ಸಾಂರ್ಥ್ಯವನ್ನು ಬಳಸಿಕೊಳ್ಳಲು, ನಮಗೆ ಇಂದಿನ ವಾಸ್ತವಗಳೊಂದಿಗೆ ಸಮನ್ವಯಗೊಳ್ಳುವ ಬದ್ಧ, ಉತ್ಸಾಹಭರಿತ ಮತ್ತು ಪ್ರತಿಭಾವಂತ ಅಧಿಕಾರಿ ವರ್ಗದ ಅಗತ್ಯವಿದೆ. ಹವಾಮಾನ ಬದಲಾವಣೆ, ತಂತ್ರಜ್ಞಾನದ ಬೆಳವಣಿಗೆ ಮತ್ತು ಜನಸಂಖ್ಯಾ ಪರಿವರ್ತನೆಗೆ ಸಂಬಂಧಿಸಿದ ಸಮಕಾಲೀನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಚುರುಕಾದ ಮತ್ತು ನಿಪುಣವಾದ ನೀತಿ ನಿಯಮಗಳು ನಮಗೆ ಬೇಕು.

ಸರ್ದಾರ್ ಪಟೇಲ್ ಅವರು ಉಲ್ಲೇಖಿಸಿದಂತೆ ಅಧಿಕಾರಶಾಹಿ ಅಥವಾ ಉಕ್ಕಿನ ಚೌಕಟ್ಟು 2047 ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರದ ಸ್ಥಾನಮಾನವನ್ನು ಸಾಧಿಸಲು ಶ್ರಮಿಸುತ್ತಿರುವಾಗ ರಾಷ್ಟ್ರದ ಸಾಮರ್ಥ್ಯಗಳಿಗೆ ಶಕ್ತಿಯನ್ನು ನೀಡಬೇಕು. ಈ ಹಿನ್ನೆಲೆಯಲ್ಲಿ, ಮುಂಬರುವ ವರ್ಷಗಳಲ್ಲಿ ಉತ್ತಮ ಭಾರತವನ್ನು ರೂಪಿಸುವ ಯುಪಿಎಸ್​ಸಿ ಆಕಾಂಕ್ಷಿಗಳ ಬದ್ಧತೆಯನ್ನು ಅಪಹಾಸ್ಯ ಮಾಡುವ ಬದಲು ಅವರ ದೃಢತೆ, ಸಮರ್ಪಣೆ, ಉದ್ಯಮಶೀಲತೆ ಮತ್ತು ಪ್ರಯತ್ನಕ್ಕಾಗಿ ನಾವು ಒಟ್ಟಾಗಿ ಹೆಮ್ಮೆ ಪಡಬೇಕು ಮತ್ತು ವಂದಿಸಬೇಕು. ಕೊನೆಯದಾಗಿ, ಸ್ವಾಮಿ ವಿವೇಕಾನಂದರು ಹೇಳಿದಂತೆ- "ಎದ್ದೇಳಿ, ಎಚ್ಚರವಾಗಿರಿ ಮತ್ತು ಗುರಿಯನ್ನು ಸಾಧಿಸುವವರೆಗೆ ನಿಲ್ಲಬೇಡಿ" ಎಂಬ ಕಠೋಪನಿಷದ್​ನ ಶ್ಲೋಕವನ್ನು ಉಲ್ಲೇಖಿಸುವುದು ಈ ಸಂದರ್ಭದಲ್ಲಿ ಬಹಳ ಸೂಕ್ತವಾಗಿದೆ.

ಲೇಖನ: ಮಿಲಿಂದ್ ಕುಮಾರ್ ಶರ್ಮಾ, ಪ್ರಾಧ್ಯಾಪಕರು, ಜೋಧಪುರದ ಎಂಬಿಎಂ ವಿಶ್ವವಿದ್ಯಾಲಯದ ಪ್ರೊಡಕ್ಷನ್ ಮತ್ತು ಇಂಡಸ್ಟ್ರಿಯಲ್ ಎಂಜಿನಿಯರಿಂಗ್ ವಿಭಾಗ.

(ಇಲ್ಲಿ ವ್ಯಕ್ತಪಡಿಸಲಾದ ಅಭಿಪ್ರಾಯಗಳು ಲೇಖಕರದ್ದೇ ಆಗಿರುತ್ತವೆ.)

ಇದನ್ನೂ ಓದಿ : ವೈದ್ಯ ವೃತ್ತಿಯಲ್ಲಿ ನೈತಿಕತೆಯೂ ಬಹಳ ಮುಖ್ಯ: ಪದ್ಮಶ್ರೀ ಡಾ. ಪಿ. ರಘುರಾಮ್ - Doctors Day

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.