ನವದೆಹಲಿ: ರಷ್ಯಾ ರಾಜಧಾನಿ ಮಾಸ್ಕೋದ ಕ್ರಾಕೋವ್‌ನ ಕನ್ಸರ್ಟ್ ಹಾಲ್‌ನಲ್ಲಿ ಶುಕ್ರವಾರ ನಡೆದ ಭಯೋತ್ಪಾದಕ ಗುಂಡಿನ ದಾಳಿಗೆ 145ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್-ಖೊರಾಸನ್ (ಐಸಿಸ್-ಕೆ) ಸಂಘಟನೆ ಹೊತ್ತುಕೊಂಡಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ದಾಳಿಯನ್ನು ತಾನೇ ನಡೆಸಿದ್ದಾಗಿ ತಿಳಿಸಿದೆ. ಆದರೆ ರಷ್ಯಾ ಸರ್ಕಾರ ಅಥವಾ ಭದ್ರತಾ ಸಂಸ್ಥೆಗಳು ಈ ಘಟನೆಗೆ ಇಲ್ಲಿಯವರೆಗೆ ಅಧಿಕೃತವಾಗಿ ಯಾರನ್ನೂ ಹೊಣೆಗಾರರಾಗಿಸಿಲ್ಲ.
ಇಸ್ಲಾಮಿಕ್ ಸ್ಟೇಟ್‌ನ ಅಮಾಕ್ ಸುದ್ದಿ ಸಂಸ್ಥೆ ಪ್ರಕಟಿಸಿದ ವರದಿಯ ಪ್ರಕಾರ, ಅಫ್ಘಾನಿಸ್ತಾನದ ಭಯೋತ್ಪಾದಕ ಸಂಘಟನೆಯ ಅಂಗಸಂಸ್ಥೆಯು ಕ್ರಾಸ್ನೋಗೊರ್ಸ್ಕ್‌ನಲ್ಲಿ ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಮತ್ತೊಂದೆಡೆ, ಯುಎಸ್ ಗುಪ್ತಚರ ಅಧಿಕಾರಿಯೊಬ್ಬರು ಅಸೋಸಿಯೇಟೆಡ್ ಪ್ರೆಸ್ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿ, ಅಮೆರಿಕದ ಗುಪ್ತಚರ ಸಂಸ್ಥೆಗಳು ಈ ದಾಳಿಗೆ ಇಸ್ಲಾಮಿಕ್ ಸ್ಟೇಟ್ ಕಾರಣ ಎಂದು ದೃಢಪಡಿಸಿವೆ ಎಂದು ಹೇಳಿದ್ದಾರೆ.
ಐಸಿಸ್-ಖೊರಾಸಾನ್ ಎಂದರೇನು?, ಹುಟ್ಟಿಕೊಂಡಿದ್ದು ಹೇಗೆ?: ಐಸಿಸ್-ಕೆ ಅಥವಾ ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್ಕೆಪಿ) ಎಂದು ಕರೆಯಲ್ಪಡುವ ಐಸಿಸ್-ಖೊರಾಸಾನ್, ಮುಖ್ಯವಾಗಿ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುವ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಯ ಪ್ರಾದೇಶಿಕ ಅಂಗಸಂಸ್ಥೆಯಾಗಿದೆ. ಐಸಿಸ್ ನಾಯಕ ಅಬು ಬಕರ್ ಅಲ್-ಬಾಗ್ದಾದಿ ಎಂಬಾತನ ಜೊತೆಗಿನ ಸಂಪರ್ಕದೊಂದಿಗೆ ಐಸಿಸ್-ಖೊರಾಸಾನ್ 2014ರ ಕೊನೆಯಲ್ಲಿ ಆರಂಭವಾಗಿದೆ. ಇದು ಪಾಕಿಸ್ತಾನಿ ತಾಲಿಬಾನ್ನ ಮಾಜಿ ಸದಸ್ಯರು, ಅಫ್ಘಾನ್ ತಾಲಿಬಾನ್ ಹೋರಾಟಗಾರರು ಮತ್ತು ಈ ಪ್ರದೇಶದ ಇತರ ಉಗ್ರಗಾಮಿಗಳನ್ನು ಒಳಗೊಂಡಿದೆ.
ಈ ಸಂಘಟನೆ ಇಸ್ಲಾಮಿಕ್ ಸ್ಟೇಟ್ನಂತೆ ಅದೇ ಸಿದ್ಧಾಂತವನ್ನು ಅನುಸರಿಸುತ್ತದೆ. ಖೊರಾಸಾನ್ ಪ್ರದೇಶದಾದ್ಯಂತ ಶರಿಯಾ ಕಾನೂನಿನಿಂದ ನಿಯಂತ್ರಿಸಲ್ಪಡುವ, ಇಸ್ಲಾಮಿಕ್ ಕಲಿಫತ್ ಸ್ಥಾಪಿಸುವ ಇದು ಗುರಿ ಹೊಂದಿದೆ. ಖೊರಾಸಾನ್ ಮಧ್ಯಕಾಲೀನ ಇಸ್ಲಾಮಿಕ್ ಸಾಮ್ರಾಜ್ಯವಾಗಿದ್ದು, ಇದು ಇಂದಿನ ಇರಾನ್, ಅಫ್ಘಾನಿಸ್ತಾನ ಮತ್ತು ಬ್ರಿಟಿಷ್ ಭಾರತದ ವಾಯುವ್ಯ ಗಡಿನಾಡಿನ ಪ್ರಾಂತ್ಯದ ಪ್ರದೇಶಗಳನ್ನೂ ಒಳಗೊಂಡಿದೆ. ಖೊರಾಸನ್ ಎಂದು ಕರೆಯಲ್ಪಡುವ ಪ್ರದೇಶದ ವ್ಯಾಪ್ತಿ ಕಾಲಾನಂತರದಲ್ಲಿ ಬದಲಾಗಿದೆ. ಇದು ಪ್ರಸ್ತುತ ಈಶಾನ್ಯ ಇರಾನ್, ಅಫ್ಘಾನಿಸ್ತಾನದ ಕೆಲವು ಭಾಗಗಳು ಮತ್ತು ಮಧ್ಯ ಏಷ್ಯಾದ ದಕ್ಷಿಣ ಭಾಗಗಳನ್ನು ಒಳಗೊಂಡಿದೆ ಮತ್ತು ಅಮು ದರಿಯಾ (ಆಕ್ಸಸ್) ನದಿಯವರೆಗೆ ವಿಸ್ತರಿಸಿದೆ.
ಆದಾಗ್ಯೂ, ಟ್ರಾನ್ಸೊಕ್ಸಿಯಾನಾದ ಹೆಚ್ಚಿನ ಭಾಗವನ್ನು (ಇಂದಿನ ಉಜ್ಬೇಕಿಸ್ತಾನದ ಬುಖಾರಾ ಮತ್ತು ಸಮರ್ಖಂಡ್ ಒಳಗೊಂಡಿದೆ) ಪಶ್ಚಿಮಕ್ಕೆ ಕ್ಯಾಸ್ಪಿಯನ್ ಕರಾವಳಿಯವರೆಗೆ ಮತ್ತು ದಕ್ಷಿಣಕ್ಕೆ ಸಿಸ್ತಾನ್ ವರೆಗೆ ಮತ್ತು ಪೂರ್ವಕ್ಕೆ ಪಾಮಿರ್ ಪರ್ವತದವರೆಗೆ ವಿಸ್ತರಿಸಿದ ವಿಶಾಲ ಪ್ರದೇಶವನ್ನು ಒಳಗೊಂಡಿರುವುದನ್ನು ಖೊರಾಸನ್ ಎಂದು ಕರೆಯಲಾಗುತ್ತದೆ.
ಅಲ್ ಖೈದಾ-ಸಂಬಂಧಿತ ಗುಂಪುಗಳಿಂದ ಅಫ್ಘಾನ್ ಮತ್ತು ಪಾಕಿಸ್ತಾನಿ ಉಗ್ರಗಾಮಿಗಳನ್ನು ಸಿರಿಯನ್ ಅಂತರ್ಯುದ್ಧಕ್ಕೆ ಕಳುಹಿಸುವುದರೊಂದಿಗೆ ಐಸಿಸ್-ಖೊರಾಸಾನ್ ಪ್ರಾರಂಭವಾಯಿತು. ಅವರು ಖೊರಾಸಾನ್ ಪ್ರದೇಶದಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಶಾಖೆಗೆ ಭಯೋತ್ಪಾದಕರನ್ನು ನೇಮಕ ಮಾಡಿಕೊಳ್ಳಲು ಅವರು ಈ ಪ್ರದೇಶಕ್ಕೆ ಬಂದರು. ತಾಲಿಬಾನ್ನ ಮಾಜಿ ಅತೃಪ್ತ ಹೋರಾಟಗಾರರು ಮತ್ತು ಭಿನ್ನಮತೀಯರನ್ನು ತಮ್ಮ ಸಂಘಟನೆಗೆ ನೇಮಿಸಿಕೊಂಡರು. ಇದರೊಂದಿಗೆ ಈ ಸಂಘಟನೆಯ ಅಧಿಕಾರದ ನೆಲೆ ಸೃಷ್ಟಿಯಾಯಿತು ಮತ್ತು ಪಾಕಿಸ್ತಾನದ ಗಡಿಯುದ್ದಕ್ಕೂ ಪೂರ್ವ ಅಫ್ಘಾನಿಸ್ತಾನದಲ್ಲಿ ವಿಸ್ತರಿಸಿತು.
ಐಸಿಸ್-ಕೆ ಕಾರ್ಯಾಚರಣೆಯ ಪ್ರದೇಶಗಳು ಯಾವುವು?: ಈ ಸಂಘಟನೆಯ ಪ್ರಾಥಮಿಕ ಕಾರ್ಯಾಚರಣೆಯ ಪ್ರದೇಶಗಳು ಅಫ್ಘಾನಿಸ್ತಾನದ ಪೂರ್ವ ಮತ್ತು ಉತ್ತರ ಪ್ರಾಂತ್ಯಗಳಾದ ನಂಗರ್‌ಹಾರ್, ಕುನಾರ್, ನುರಿಸ್ತಾನ್ ಮತ್ತು ಜೌಜ್ಜನ್‌ಗಳಾಗಿವೆ. ಇದು ಪಾಕಿಸ್ತಾನದ ವಿವಿಧ ಪ್ರದೇಶಗಳಲ್ಲಿ, ವಿಶೇಷವಾಗಿ ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯುದ್ದಕ್ಕೂ ಇರುವ ಬುಡಕಟ್ಟು ಪ್ರದೇಶಗಳಲ್ಲಿ ಅಸ್ತಿತ್ವವನ್ನು ಹೊಂದಿದೆ. ಐಸಿಸ್-ಕೆ ಆತ್ಮಾಹುತಿ ಬಾಂಬ್ ದಾಳಿಗಳು, ಉದ್ಧೇಶಿತ ಹತ್ಯೆಗಳು ಮತ್ತು ನಾಗರಿಕರು ಮತ್ತು ಮಿಲಿಟರಿಗಳ ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಲು ಹೆಸರುವಾಸಿಯಾಗಿದೆ.
ಐಸಿಸ್-ಕೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ನಾಗರಿಕರ ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ. 2021ರ ಆಗಸ್ಟ್ನಲ್ಲಿ ಕಾಬೂಲ್ನಿಂದ ಅಮೆರಿಕ ಸೇನೆ ವಾಪಸಾತಿ ವೇಳೆ 13 ಅಮೆರಿಕನ್ ಮಿಲಿಟರಿ ಸಿಬ್ಬಂದಿ ಮತ್ತು ಕನಿಷ್ಠ 169 ಅಫ್ಘಾನಿಸ್ತಾನಿಗಳನ್ನು ಬಲಿತೆಗೆದುಕೊಂಡ ಆತ್ಮಾಹುತಿ ಬಾಂಬ್ ದಾಳಿ, 2018ರ ಜುಲೈನಲ್ಲಿ ಪಾಕಿಸ್ತಾನದಲ್ಲಿ ಚುನಾವಣಾ ರ್‍ಯಾಲಿಗಳಲ್ಲಿ ಕನಿಷ್ಠ 131 ಮಂದಿಯನ್ನು ಬಲಿ ತೆಗೆದುಕೊಂಡ ಅವಳಿ ಆತ್ಮಾಹುತಿ ಬಾಂಬ್ ದಾಳಿಗಳು, 2016ರ ಜುಲೈನಲ್ಲಿ ಕಾಬೂಲ್ನಲ್ಲಿ 97 ಹಜಾರಾ ಪ್ರತಿಭಟನಾಕಾರರನ್ನು ಬಲಿ ಪಡೆದ ಅವಳಿ ಬಾಂಬ್ ದಾಳಿಗಳು ಸಂಘಟನೆಯ ಪ್ರಮುಖ ದಾಳಿಗಳಾಗಿವೆ. ಜುಲೈ 2023 ರಲ್ಲಿ ಪಾಕಿಸ್ತಾನದ ಖಾರ್‌ನಲ್ಲಿ ಜಮಿಯತ್ ಉಲೇಮಾ-ಇ-ಇಸ್ಲಾಂ-ಎಫ್ (ಜೆಯುಐ-ಎಫ್)ರ್‍ಯಾಲಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 63 ಜನರು ಸಾವನ್ನಪ್ಪಿದ್ದರು.
ಐಸಿಸ್-ಕೆ ದಾಳಿಗಳಲ್ಲಿ ಹೆಚ್ಚಿನವು ಪೂರ್ವ ಅಫ್ಘಾನಿಸ್ತಾನ ಮತ್ತು ಪಶ್ಚಿಮ ಪಾಕಿಸ್ತಾನದಲ್ಲಿ ಸಂಭವಿಸುತ್ತಿದ್ದರೆ, ಈ ಸಂಘಟನೆಯು ಅಫ್ಘಾನಿಸ್ತಾನದ ಉತ್ತರದ ನೆರೆಯ ದೇಶಗಳಾದ ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಮೇಲೆ ರಾಕೆಟ್ ದಾಳಿ ನಡೆಸಿರುವುದಾಗಿ ಎಂದು ಹೇಳಿಕೊಂಡಿದೆ. ಜನವರಿ 2024 ರ ಆರಂಭದಲ್ಲಿ, ಇಬ್ಬರು ಐಸಿಸ್-ಕೆ ದಾಳಿಕೋರರು ಇರಾನ್‌ನ ಕೆರ್ಮನ್‌ನಲ್ಲಿ ಅವಳಿ ಆತ್ಮಾಹುತಿ ಬಾಂಬ್ ದಾಳಿಗಳನ್ನು ನಡೆಸಿದರು. ಖುಡ್ಸ್ ಫೋರ್ಸ್ ನಾಯಕ ಖಾಸಿಮ್ ಸೊಲೈಮಾನಿ ಎಂಬಾತನ ಹತ್ಯೆಗೆ ಸಂತಾಪ ಸೂಚಿಸುವ ವೇಳೆ 94 ಮಂದಿಯನ್ನು ಬಲಿ ಪಡೆದ ಈ ದಾಳಿಯು ಅಫ್ಘಾನಿಸ್ತಾನ-ಪಾಕಿಸ್ತಾನ ಪ್ರದೇಶದ ಗಡಿಯನ್ನು ಮೀರಿ ಐಸಿಸ್-ಕೆ ನಡೆಸಿದ ಮೊದಲ ದಾಳಿಯಾಗಿದೆ.
ಇಂದು, ಐಸಿಸ್-ಕೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದೊಂದಿಗೆ ಕಡಿಮೆ ಪ್ರಮಾಣದ ಸಂಘರ್ಷದಲ್ಲಿ ತೊಡಗಿದೆ. ತಾಲಿಬಾನ್ ಮತ್ತು ಐಸಿಸ್-ಕೆ ಯುಎಸ್ ವಿರುದ್ಧ ಸಕ್ರಿಯವಾಗಿ ಹೋರಾಡುತ್ತಿದ್ದರೂ, ಯುಎಸ್ ತನ್ನ ಸೇನೆಯನ್ನು ಹಿಂತೆಗೆದುಕೊಂಡ ನಂತರ, ಐಸಿಸ್-ಕೆ ತನ್ನ ಇಸ್ಲಾಮಿಕ್ ಕಲಿಫತ್ ಅನ್ನು ಸ್ಥಾಪಿಸುವ ಸಲುವಾಗಿ ತಾಲಿಬಾನ್ ಆಡಳಿತವನ್ನು ಅಪಖ್ಯಾತಿಗೊಳಿಸುವ, ಅಸ್ಥಿರಗೊಳಿಸುವ ಮತ್ತು ಉರುಳಿಸುವ ಪ್ರಯತ್ನಗಳನ್ನು ಮಾಡುತ್ತಿಲ್ಲ. ಮತ್ತೊಂದೆಡೆ, ತಾಲಿಬಾನ್ ಹಿಂಸಾತ್ಮಕ ದಾಳಿಗಳ ಮೂಲಕ ಐಸಿಸ್-ಕೆ ಉಗ್ರರನ್ನು ಗುರಿಯಾಗಿಸಲು, ವಿದೇಶಿ ರಾಜತಾಂತ್ರಿಕರು ಮತ್ತು ಹೂಡಿಕೆದಾರರನ್ನು ಐಸಿಸ್-ಕೆ ದಾಳಿಗಳಿಂದ ರಕ್ಷಿಸಲು ಮತ್ತು ವಿದೇಶಿ ಮಾನ್ಯತೆ ಮತ್ತು ಹೂಡಿಕೆಯನ್ನು ಆಕರ್ಷಿಸಲು ಇಸ್ಲಾಮಿಕ್ ಸ್ಟೇಟ್ ಉಪಸ್ಥಿತಿಯನ್ನು ಸಾರ್ವಜನಿಕವಾಗಿ ಕಡಿಮೆ ಮಾಡಲು ಪ್ರಯತ್ನಿಸುತ್ತದೆ.
ಐಸಿಸ್-ಕೆ ರಷ್ಯಾವನ್ನು ತನ್ನ ದಾಳಿಗೆ ಗುರಿಯಾಗಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಸೆಪ್ಟೆಂಬರ್ 2022ರಲ್ಲಿ, ಈ ಸಂಘಟನೆಯು ಕಾಬೂಲ್ನಲ್ಲಿರುವ ರಷ್ಯಾ ರಾಯಭಾರ ಕಚೇರಿಯ ಪ್ರವೇಶದ್ವಾರದ ಬಳಿ ಉನ್ನತ ಮಟ್ಟದ ಆತ್ಮಾಹುತಿ ಬಾಂಬ್ ದಾಳಿ ನಡೆಸಿತು. ಈ ದಾಲಿಯಲ್ಲಿ ಇಬ್ಬರು ರಾಯಭಾರ ಕಚೇರಿ ನೌಕರರು ಸೇರಿದಂತೆ ಆರು ಜನರು ಮೃತಪಟ್ಟಿದ್ದರು. ರಷ್ಯಾದ ಉನ್ನತ ರಾಜತಾಂತ್ರಿಕ ಮಿಖಾಯಿಲ್ ಶೇಖ್ ಮತ್ತು ಭದ್ರತಾ ತಜ್ಞ ಕುಝುಗೆಟ್ ಅಡಿಗ್ಜಿ ಆತ್ಮಾಹುತಿ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ಒಪ್ಪಿಕೊಂಡಿದೆ.
ವ್ಲಾಡಿಮಿರ್ ಪುಟಿನ್ ರಷ್ಯಾದ ಅಧ್ಯಕ್ಷರಾಗಿ ಮರು ಆಯ್ಕೆಯಾದ ಕೆಲವು ದಿನಗಳಲ್ಲಿ ಕ್ರೋಕಸ್ ಸಿಟಿ ಹಾಲ್‌ನಲ್ಲಿ ಶುಕ್ರವಾರ ರಾತ್ರಿ ದಾಳಿ ನಡೆದಿದೆ ಎಂದು ಗಮನರ್ಹ ಅಂಶ. ಇಸ್ಲಾಮಿಕ್ ಸ್ಟೇಟ್ ಪುಟಿನ್ ಜೊತೆ ದೀರ್ಘಕಾಲದ ದ್ವೇಷ ಹೊಂದಿದೆ. ಇಸ್ಲಾಮಿಕ್ ಸ್ಟೇಟ್ ಪುಟಿನ್ ಅವರನ್ನು ವಿರೋಧಿಸಲು ಪ್ರಾಥಮಿಕ ಕಾರಣ, ಸಿರಿಯಾದಲ್ಲಿ ರಷ್ಯಾದ ಮಿಲಿಟರಿ ಹಸ್ತಕ್ಷೇಪ. ಇಸ್ಲಾಮಿಕ್ ಸ್ಟೇಟ್ ಮತ್ತು ಇತರ ಬಂಡುಕೋರ ಗುಂಪುಗಳ ವಿರುದ್ಧ ವೈಮಾನಿಕ ದಾಳಿ ಸೇರಿದಂತೆ ಬಷರ್ ಅಲ್-ಅಸ್ಸಾದ್ ಅವರ ಸಿರಿಯನ್ ಸರ್ಕಾರಕ್ಕೆ ಬೆಂಬಲ ನೀಡುವ ಪುಟಿನ್ ನಿರ್ಧಾರವು ಸಿರಿಯಾದಲ್ಲಿ ಸಂಘಟನೆಯ ಪ್ರಾದೇಶಿಕ ಮಹತ್ವಾಕಾಂಕ್ಷೆಗಳನ್ನು ನೇರವಾಗಿ ಪ್ರಶ್ನಿಸಿತು. ರಷ್ಯಾದ ಮಿಲಿಟರಿ ಒಳಗೊಳ್ಳುವಿಕೆಯು ಭೂಪ್ರದೇಶದ ಮೇಲೆ ಇಸ್ಲಾಮಿಕ್ ಸ್ಟೇಟ್ನಲ್ಲಿ ನಿಯಂತ್ರಣವನ್ನು ಗಮನಾರ್ಹವಾಗಿ ದುರ್ಬಲಗೊಳಿಸಿತು ಮತ್ತು ವಿಸ್ತರಿಸುವ ಸಾಮರ್ಥ್ಯಕ್ಕೆ ಅಡ್ಡಿಯಾಯಿತು.