WHERE IS PATALKOT LOCATED: ಈ ಊರಿನಲ್ಲಿ ಬೆಳಗ್ಗೆ 11 ನಂತರವೇ ಸೂರ್ಯೋದಯ ಆಗುತ್ತದೆ. ಹಾಗೆ ಮಧ್ಯಾಹ್ನ 3ಕ್ಕೇ ಕತ್ತಲಾಗುತ್ತದೆ. ಈ ದೃಶ್ಯವನ್ನು ಸಿನಿಮಾವೊಂದರಲ್ಲಿ ನೋಡಿದ್ದೇವೆ. ಇದೇ ರೀತಿಯ ವಿಚಿತ್ರ ಊರಿನಲ್ಲಿ ಯಾರಿಗೂ ತಿಳಿಯದ ರಹಸ್ಯವೊಂದು ಅಡಗಿರುತ್ತದೆ. ಇದೆಲ್ಲವು ಸಿನಿಮಾದಲ್ಲಿನ ಕಾಲ್ಪನಿಕ ಕಥೆ. ಆದರೆ, ಅಂತಹ ಪ್ರದೇಶವು ನಿಜವಾಗಿಯೂ ಅಸ್ತಿತ್ವದಲ್ಲಿದೆ ಎಂದು ನಿಮಗೆ ನಂಬಲು ಸಾಧ್ಯವೇ? ಹೌದು, ನಮ್ಮ ದೇಶದಲ್ಲಿ ಅಂತಹ ವಿಚಿತ್ರ ಪ್ರದೇಶವೊಂದಿದೆ.
ಈ ಸ್ಥಳದ ವಿಚಿತ್ರವೆಂದರೆ ಬೆಳಗ್ಗೆ 11 ಗಂಟೆಯಾದರೂ ಸೂರ್ಯನ ಸುಳಿವೇ ಇರುವುದಿಲ್ಲ. ಮಧ್ಯಾಹ್ನ 3 ಗಂಟೆಯ ಹೊತ್ತಿಗೆ ಈ ಪ್ರದೇಶದಲ್ಲಿ ದಟ್ಟ ಕತ್ತಲೆ ಆವರಿಸುತ್ತದೆ. ಇಲ್ಲಿರುವ ಜನರಿಗೆ ಹೊರ ಜಗತ್ತಿನ ಸಂಪರ್ಕವೇ ಇಲ್ಲ. ಈ ಪ್ರದೇಶಕ್ಕೆ ಇಲ್ಲಿರುವ ಜನರೇ ಮಾಲೀಕರು. ಈ ಪ್ರದೇಶದ ಸೌಂದರ್ಯಕ್ಕೆ ಎಲ್ಲರೂ ಮಾರುಹೋಗುತ್ತಾರೆ. ಹಾಗಾದರೆ ಆ ಪ್ರದೇಶ ಎಲ್ಲಿದೆ? ಇಲ್ಲಿ ಯಾಕೆ ಹೀಗಾಗುತ್ತಿದೆ? ಈ ಎಲ್ಲಾ ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ..
ಇದು ಮಧ್ಯ ಪ್ರದೇಶ ರಾಜ್ಯದಲ್ಲಿರುವ ಪಾತಾಳಕೋಟ್ ಎಂಬ ಗ್ರಾಮದ ವಿಸ್ಮಯದ ಕಥೆ. ಈ ಊರಿನ ವ್ಯಾಪ್ತಿಯಲ್ಲಿ ಜಡ್ಮದಲ್, ಹರ್ರಾ ಕಚಾರ್, ಸೆಹ್ರಾ ಪಚ್ಗೋಲ್ ಸೇರಿದಂತೆ ಒಟ್ಟು 12 ಗ್ರಾಮಗಳು ಇವೆ. ಈ ಗ್ರಾಮಗಳು ಸುಮಾರು 3,000 ಅಡಿ ಎತ್ತರದಲ್ಲಿ ದಟ್ಟವಾದ ಪರ್ವತಗಳಿಂದ ಆವೃತವಾಗಿವೆ. ಹಾಗಾಗಿ ಸೂರ್ಯನ ಕಿರಣಗಳು ಗ್ರಾಮಗಳ ಮೇಲೆ ಹೆಚ್ಚಾಗಿ ಬೀಳುವುದಿಲ್ಲ. ಅದರ ಪರಿಣಾಮವಾಗಿ, ಒಂದು ದಿನದಲ್ಲಿ ಸೂರ್ಯನ ಬೆಳಕು ಕೇವಲ 5 ಗಂಟೆಗಳ ಕಾಲ ಮಾತ್ರ ಇರುತ್ತದೆ. ಇಲ್ಲಿ ಉಳಿದ ಸಮಯದಲ್ಲಿ ಕತ್ತಲೆ ಆವರಿಸುತ್ತದೆ.
ಇಲ್ಲಿರಲಿಲ್ಲ ಕೋವಿಡ್ನ ಕುರುಹು: ಕೋವಿಡ್-19 ಸಮಯದಲ್ಲಿ ಇಡೀ ವಿಶ್ವವೇ ಅಲ್ಲೋಲಕಲ್ಲೋಲವಾಗಿತ್ತು. ಭಾರತ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿತ್ತು. ಆದರೆ, ಈ ಅವಧಿಯಲ್ಲಿ ಪಾತಾಳಕೋಟ್ ಮಾತ್ರ ಶಾಂತವಾಗಿತ್ತು. ಇಲ್ಲಿ ಕೋವಿಡ್-19ರ ಯಾವುದೇ ಕುರುಹು ಕಂಡುಬಂದಿರಲಿಲ್ಲ. ಇಲ್ಲಿನ ಜನರಿಗೆ ಹೊರ ಜಗತ್ತಿನ ಸಂಪರ್ಕವೇ ಇಲ್ಲ. ಹಾಗಾಗಿ, ಈ ಪ್ರದೇಶದಲ್ಲಿ ಒಂದೇ ಒಂದು ಕೋವಿಡ್ ಪ್ರಕರಣ ದಾಖಲಾಗಿರಲಿಲ್ಲ.
ಜನರ ಜೀವನಾಧಾರವೇನು? ಪಾತಾಳಕೋಟ್‌ನಲ್ಲಿ ವಾಸಿಸುವ ಆದಿವಾಸಿಗಳಿಗೆ ಅರಣ್ಯವೇ ಏಕೈಕ ಜೀವನಾಧಾರವಾಗಿದೆ. ಅಂದ್ರೆ, ಅರಣ್ಯದ ಉತ್ಪನ್ನಗಳು, ಜೇನುತುಪ್ಪ ಮತ್ತು ಧಾನ್ಯಗಳು ಇವುಗಳೇ ಇವರಿಗೆ ಮುಖ್ಯ ಆಧಾರವಾಗಿವೆ. ಈಗ ಒಂದೋ ಎರಡೋ ಹಳ್ಳಿಗಳಲ್ಲಿ ಕೊಡೋ ರಾಗಿ ಸೇರಿದಂತೆ ಎರಡ್ಮೂರು ತರಹದ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದಲ್ಲದೆ ಇಲ್ಲಿ ಲಭ್ಯವಿರುವ ಗಿಡಮೂಲಿಕೆಗಳು ಪ್ರಪಂಚದಾದ್ಯಂತ ಪ್ರಸಿದ್ಧವಾಗಿವೆ.
ಪ್ರವಾಸಿ ತಾಣ: ಪಾತಾಳಕೋಟ್ನಲ್ಲಿನ ಅಮೂಲ್ಯವಾದ ಗಿಡಮೂಲಿಕೆಗಳ ಉಪಸ್ಥಿತಿಯಿಂದಾಗಿ ಸರ್ಕಾರವು ಇದನ್ನು ಜೀವವೈವಿಧ್ಯ ಪ್ರದೇಶವೆಂದು ಘೋಷಿಸಿದೆ. ಈ ಕ್ಷೇತ್ರವನ್ನು ಎಲ್ಲ ರೀತಿಯಿಂದಲೂ ಅಭಿವೃದ್ಧಿಪಡಿಸಲು ಸರ್ಕಾರ ಶ್ರಮಿಸುತ್ತಿದೆ. ಶಿವರಾಜ್ ಸಿಂಗ್ ಅವರು ಸಿಎಂ ಆಗಿದ್ದ ಅವಧಿಯಲ್ಲಿ ಸ್ಥಳೀಯ ಭರಿಯಾ ಬುಡಕಟ್ಟು ಜನಾಂಗದವರು ಪಾತಾಳಕೋಟ್ ಪ್ರದೇಶದ ವಸತಿ ಹಕ್ಕುಗಳ ಅಡಿಯಲ್ಲಿ ಅಲ್ಲಿರುವ ಜನರನ್ನು ಮಾಲೀಕರಾಗಿ ಘೋಷಣೆ ಮಾಡಲಾಗಿತ್ತು.
ಸಾಹಸೋತ್ಸವ ಆಯೋಜನೆ: ಈಗ ಪ್ರದೇಶದ ಜನರ ಒಪ್ಪಿಗೆಯಿಲ್ಲದೆ ಯಾರೂ ನೀರು, ಭೂಮಿಯ ಮೇಲೆ ಹಕ್ಕು ಪಡೆಯಲು ಸಾಧ್ಯವಿಲ್ಲ. ಇದೇ ವೇಳೆ ಅಲ್ಲಿನ ಪ್ರವಾಸೋದ್ಯಮವನ್ನು ಉತ್ತೇಜಿಸಲು ಜಿಲ್ಲಾಡಳಿತ ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿ ಡಿಸೆಂಬರ್ 28 ರಿಂದ ಜನವರಿ 2ರ ವರೆಗೆ ಪಾತಾಳಕೋಟ್ ಬಳಿ ಸಾಹಸೋತ್ಸವ ಆಯೋಜಿಸಲಾಗಿದೆ. ಹಾಟ್ ಏರ್ ಬಲೂನ್, ಪ್ಯಾರಾ ಗ್ಲೈಡಿಂಗ್ ಜೊತೆಗೆ ಹಲವು ರೋಚಕ ಸಾಹಸ ಕ್ರೀಡೆಗಳು ನಡೆಯಲಿವೆ. ಈ ಕುರಿತು ಜಿಲ್ಲಾಧಿಕಾರಿ ಶೈಲೇಂದ್ರ ಶರ್ಮಾ ಪ್ರತಿಕ್ರಿಯಿಸಿ, ಪಾತಾಳಕೋಟೆಯ ಸೊಬಗನ್ನು ಇಡೀ ವಿಶ್ವವೇ ಕಣ್ತುಂಬಿಕೊಳ್ಳಲಿ ಎಂಬ ಉದ್ದೇಶದಿಂದ ಶ್ರಮಿಸುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಅಗ್ಗದ ದರದಲ್ಲಿ ಕಟೀಲು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯದ ದರ್ಶನ ಮಾಡಿ; ವಿಸ್ಟಾಡೋಮ್ ರೈಲಿನಲ್ಲಿ ಪ್ರಯಾಣ