Hasanamba Temple Story: ನಮ್ಮ ದೇಶದಲ್ಲಿ ಅನೇಕ ಪುರಾತನ ದೇವಾಲಯಗಳಿವೆ. ಪ್ರತಿಯೊಂದು ದೇವಾಲಯಕ್ಕೂ ಹಲವು ವರ್ಷಗಳ ಇತಿಹಾಸವಿದೆ. ಆದಾಗ್ಯೂ, ಬಹುತೇಕ ಎಲ್ಲಾ ದೇವಾಲಯಗಳಲ್ಲಿ ನಿಯಮಿತವಾಗಿ ವಿಶೇಷ ಪೂಜೆಗಳು ಮತ್ತು ಅರ್ಚನೆಗಳು ನಡೆಯುತ್ತವೆ. ಕರ್ನಾಟಕ ರಾಜ್ಯದ ಹಾಸನಾಂಬ ದೇವಿಯ ದೇವಸ್ಥಾನದ ಗರ್ಭಗುಡಿಯ ಬಾಗಿಲನ್ನು ವರ್ಷಕ್ಕೊಮ್ಮೆ ಅಂದ್ರೆ, ದೀಪಾವಳಿಯ ಮೊದಲು ಮಾತ್ರ ತೆರೆಯಲಾಗುತ್ತದೆ.
ವರ್ಷವಿಡೀ ಉರಿಯುತ್ತೆ ದೀಪ, ಬಾಡದ ಹೂವುಗಳು: ಸ್ಥಳೀಯರ ಪ್ರಕಾರ, ದೀಪಾವಳಿ ಮುನ್ನ ದೇವಾಲಯದ ಬಾಗಿಲು ತೆರೆದಾಗ, ದೀಪವು ಉರಿಯುತ್ತಿರುವುದು ಕಂಡುಬರುತ್ತದೆ. ಜೊತೆಗೆ ದೇವಿಗೆ ಅರ್ಪಿಸಿದ ಹೂವುಗಳು ಬಾಡದೇ ಹಾಗೆ ಇರುತ್ತವೆ. ಒಂದು ವರ್ಷದ ನಂತರವೂ ಹಾಸನಾಂಬೆ ದೇವಿಗೆ ಅರ್ಪಿಸುವ ನೈವೇದ್ಯಗಳು ಮುಂದಿನ ವರ್ಷದವರೆಗೆ ತಾಜಾವಾಗಿರುತ್ತವೆ. ಈ ಪವಾಡವನ್ನು ವೀಕ್ಷಿಸಲು ಲಕ್ಷಾಂತರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.
ಹಾಸನಾಂಬ ದೇವಿ ಜಾತ್ರೆ ದೀಪಾವಳಿಯ ಮೊದಲು ಬಹಳ ಅದ್ಧೂರಿಯಾಗಿ ಜರುಗುತ್ತದೆ. ಈ ದೇವಿಯನ್ನು ಹಾಸನ ನಗರದ ಪ್ರಧಾನ ದೇವತೆಯಾಗಿ ಭಕ್ತರು ಪೂಜಿಸುತ್ತಾರೆ. ಮೂರು ಶಿಲೆಗಳ ರೂಪದಲ್ಲಿರುವ ಹಾಸನಾಂಬ ದೇವಿ ಇಲ್ಲಿ ನೆಲೆಸಿದ್ದಾಳೆ. ಈ ವರ್ಷ ಒಂಬತ್ತು ದಿನ ಮಾತ್ರ ಅಮ್ಮನ ದರ್ಶನಕ್ಕೆ ಅವಕಾಶವಿದೆ. ಆದರೆ ಹಬ್ಬ ಹರಿದಿನಗಳಲ್ಲಿ ಅಮ್ಮನವರ ದರ್ಶನ ಮಾಡಿದರೆ ಅವರ ಸಂಕಷ್ಟಗಳೆಲ್ಲವೂ ದೂರವಾಗುತ್ತವೆ. ಸುಖಿಯಾಗುತ್ತಾರೆ ಎಂಬುದು ಭಕ್ತರ ನಂಬಿಕೆಯಾಗಿದೆ. ಪ್ರತಿ ವರ್ಷ ಆಶ್ವಯುಜ ಮಾಸದ ಪೂರ್ಣಿಮೆಯ ನಂತರ ಬರುವ ಮೊದಲ ಗುರುವಾರದಂದು ಹಾಸನಾಂಬ ದೇವಾಲಯದ ಬಾಗಿಲು ತೆರೆಯಲಾಗುತ್ತದೆ. ಇಲ್ಲಿರುವ ದೇವಿಯ ಕಾರಣದಿಂದಲೇ ಜಿಲ್ಲೆಗೆ ‘ಹಾಸನ’ ಎಂಬ ಹೆಸರು ಬಂದಿದೆ ಎಂದು ಭಕ್ತರು ನಂಬುತ್ತಾರೆ.
ಹಾಸನಾಂಬ ದೇವಸ್ಥಾನದ ಬಾಗಿಲು ತೆರೆದು ಉತ್ಸವಗಳನ್ನು ನೆರವೇರಿಸಿದ ನಂತರ ಕೊನೆಯ ದಿನ ದೇವಿಗೆ ಹೂವು, ದೀಪ ಬೆಳಗಿಸುವ ಮೂಲಕ ಪ್ರಸಾದ ಅರ್ಪಿಸಲಾಗುತ್ತದೆ. ನಂತರ ವಿಶೇಷ ಆಚರಣೆಗಳ ಪ್ರಕಾರ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಒಂದು ವರ್ಷದ ನಂತರ ಮತ್ತೆ ಬಾಗಿಲು ತೆರೆದರೂ ದೇವಾಲಯದಲ್ಲಿ ದೀಪ ಉರಿಯುರುತ್ತದೆ. ಅದೇ ರೀತಿ ಹೂವುಗಳು ಕೂಡ ಮೊದಲ ದಿನದಂತೆಯೇ ತಾಜಾವಾಗಿ ಕಾಣುತ್ತವೆ. ದೇವಿಗೆ ಅರ್ಪಿಸುವ ನೈವೇದ್ಯವೂ ಹಾಳಾಗದಿರುವುದು ಈ ದೇವಾಲಯದ ವಿಶೇಷ ಎಂದು ಹೇಳಲಾಗುತ್ತದೆ. ಈ ದೇವಾಲಯವನ್ನು 12ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಇತಿಹಾಸ ಹೇಳುತ್ತದೆ. ಆದರೆ, ಇದನ್ನು ನಿರ್ಮಿಸಿದವರು ಯಾರು ಎಂಬ ಬಗ್ಗೆ ಸ್ಪಷ್ಟವಾದ ದಾಖಲೆಗಳಿಲ್ಲ.
ಏನು ಹೇಳುತ್ತೆ ಸ್ಥಳಪುರಾಣ: ಪುರಾಣಗಳ ಪ್ರಕಾರ.. ಅಂಧಕಾಸುರ ಎಂಬ ರಾಕ್ಷಸನು ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಾನೆ. ಬ್ರಹ್ಮನು ಕಾಣಿಸಿಕೊಂಡಾಗ, ಅವನು ಅವನಿಗೆ ಅಮರತ್ವದ ವರವನ್ನು ನೀಡುತ್ತಾನೆ. ಆ ವರದ ಕಾರಣದಿಂದಾಗಿ, ಅವನು ಜಗತ್ತಿನಲ್ಲಿ ಅವ್ಯವಸ್ಥೆಯನ್ನು ಉಂಟುಮಾಡಲು ಪ್ರಾರಂಭಿಸುತ್ತಾನೆ. ಇದನ್ನು ತಿಳಿದ ಶಿವನು ಯೋಗೇಶ್ವರಿ ಎಂಬ ಶಕ್ತಿಯನ್ನು ಸೃಷ್ಟಿಸುತ್ತಾನೆ. ಆ ಶಕ್ತಿಯು ಬ್ರಾಹ್ಮಿ, ಮಹೇಶ್ವರಿ, ಕೌಮಾರಿ, ವೈಷ್ಣವಿ, ವರಾಹಿ, ಇಂದ್ರಾಣಿ ಮತ್ತು ಚಾಮುಂಡಿ ರೂಪವನ್ನು ತಾಳುವ ಮೂಲಕ ರಾಕ್ಷಸನನ್ನು ನಾಶಪಡಿಸುತ್ತಾಳೆ.
ನಂತರ ಸಪ್ತಮಾತೃಕೆಯರು ಕಾಶಿಗೆ ಹೋಗುವ ಪ್ರಯತ್ನದಲ್ಲಿ ಈ ಹಾಸನವನ್ನು ತಲುಪುತ್ತಾರೆ. ಈ ಸ್ಥಳವನ್ನು ಮೆಚ್ಚಿದ ಮಹೇಶ್ವರಿ, ವೈಷ್ಣವಿ ಮತ್ತು ಕೌಮಾರಿ ಈ ದೇವಾಲಯವಿರುವ ಪ್ರದೇಶದ ಬೆಟ್ಟದಲ್ಲಿ ವಾಸಿಸುತ್ತಿದ್ದರು. ಉಳಿದ ಮೂವರು ದೇವತೆಗಳು ದೇವಗಿರಿ ಹೊಂಡ ಎಂಬ ಪ್ರದೇಶದಲ್ಲಿ ತಂಗುತ್ತಾರೆ. ಅಂದಿನಿಂದ ಈ ದೇವಾಲಯದಲ್ಲಿ ದೇವಿಯು ಭಕ್ತರಿಗೆ ಮೂರು ಕಲ್ಲುಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ ಎಂದು ಹೇಳಲಾಗುತ್ತದೆ.
ಹಾಸನಾಂಬದೇವಿ ಹೆಸರು ಬಂದಿದ್ದು ಹೇಗೆ: ಅಮ್ಮ ಇಲ್ಲಿ ನಗುತ್ತಿರುವ ಕಾರಣ ಹಾಸನಾಂಬಾದೇವಿ ಎಂದು ಕರೆಯುತ್ತಾರೆ. ಆದರೂ.. ಅಮ್ಮ ಇಲ್ಲಿ ವರ್ಷಕ್ಕೊಮ್ಮೆ ಭಕ್ತನ ಕನಸಿನಲ್ಲಿ ಕಾಣಿಸಿಕೊಂಡಳು. ಆಗ ಕೆಲವು ದಿನಗಳ ಕಾಲ ಮಾತ್ರ ತನ್ನನ್ನು ಪೂಜಿಸಬೇಕು ಎನ್ನುತ್ತಾರೆ. ಹಾಗಾಗಿ ಅಂದಿನಿಂದ ಇಂದಿನವರೆಗೂ ಅದೇ ಆಚರಣೆಯನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ದೇವಸ್ಥಾನದ ಆಡಳಿತಾಧಿಕಾರಿಗಳು. ಈ ದೇವಾಲಯಕ್ಕೆ ಸಂಬಂಧಿಸಿದಂತೆ ಇನ್ನೊಂದು ಕಥೆಯೂ ಇದೆ.
ಮತ್ತೊಂದು ಕಥೆ: ದೇವಿಯ ಭಕ್ತೆಯೊಬ್ಬಳು ಅವಳ ಅತ್ತೆಯಿಂದ ಚಿತ್ರಹಿಂಸೆಗೊಳಗಾದಳು. ಹೀಗಿರುವಾಗ ಒಂದು ದಿನ ಆ ಸೊಸೆ ದೇವಸ್ಥಾನಕ್ಕೆ ಬಂದಾಗ ತಾಯಿ ಕೋಪಗೊಂಡು ಆಕೆಯನ್ನು ಕಲ್ಲಾಗಿಸಿದಳು. ಆ ಕಲ್ಲು ಈಗಲೂ ದೇವಸ್ಥಾನದಲ್ಲಿದೆ ಎಂದು ಹೇಳಲಾಗುತ್ತದೆ.
ಆಶ್ವಯುಜ ಮಾಸ: ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಮೊದಲ ಗುರುವಾರದಂದು ಈ ದೇವಾಲಯವನ್ನು ತೆರೆಯಲಾಗುತ್ತದೆ.. ಬಲಿಪಾಢ್ಯಮಿ ಮಾರ್ನಾಡು ಸಂಪ್ರದಾಯದ ಪ್ರಕಾರ ದೇವಿಗೆ ಹೂವು, ದೀಪಗಳನ್ನು ಬೆಳಗಿಸಿ, ನೈವೇದ್ಯ ಅರ್ಪಿಸಿ ಮುಚ್ಚಲಾಗುತ್ತದೆ. ದೇವಸ್ಥಾನ ತೆರೆದ ಎರಡನೇ ದಿನದಿಂದ ಸಾವಿರಾರು ಭಕ್ತರು ವಿವಿಧೆಡೆಯಿಂದ ಅಮ್ಮನವರ ದರ್ಶನಕ್ಕೆ ಬರುತ್ತಾರೆ. ದೇವಸ್ಥಾನ ತೆರೆದಾಗ ಇಲ್ಲಿ ನಡೆಯುವ ನಿತ್ಯದ ಪೂಜೆಗಳನ್ನು ನೋಡಲು ಭಕ್ತರಿಗೆ ಎರಡೂ ಕಣ್ಣುಗಳು ಸಾಲುವುದಿಲ್ಲ. ಈ ದೇವಾಲಯದ ಆರಂಭದಲ್ಲಿ ಸಿದ್ಧೇಶ್ವರ ಸ್ವಾಮಿ ದೇವಾಲಯವೂ ಇದೆ.
ತಲುಪುವುದು ಹೇಗೆ: ಈ ದೇವಾಲಯವು ಕರ್ನಾಟಕದ ಹಾಸನ ಜಿಲ್ಲೆಯಲ್ಲಿದೆ. ರಸ್ತೆ ಮಾರ್ಗವಾಗಿ ಬರುವವರು ಮೈಸೂರು, ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಹೀಗೆ ಎಲ್ಲಿಂದಲಾದರೂ ಬರಬಹುದು. ರೈಲಿನಲ್ಲಿ ಬರುವವರು ಅರಸೀಕೆರೆ ನಿಲ್ದಾಣದಲ್ಲಿ ಇಳಿದು ಬಸ್ಸಿನಲ್ಲಿ ಸುಮಾರು 40 ಕಿ.ಮೀ. ದೂರದ ದೇವಸ್ಥಾನ ತಲುಪಬಹುದು.
ಗಮನಿಸಿ: ಮೇಲೆ ನೀಡಿರುವ ವಿವರಗಳನ್ನು ಕೆಲವು ಜ್ಯೋತಿಷಿಗಳು ಜ್ಯೋತಿಷ್ಯದಲ್ಲಿ ಉಲ್ಲೇಖಿಸಿರುವ ಅಂಶಗಳ ಆಧಾರದ ಮೇಲೆ ಮಾತ್ರ ನೀಡಿದ್ದಾರೆ. ಇದಲ್ಲದೆ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ಓದುಗರು ಗಮನಿಸಬೇಕು. ಇದು ನಿಮ್ಮ ನಂಬಿಕೆಗೆ ಬಿಟ್ಟ ವಿಚಾರವಾಗಿದೆ.
ಇದನ್ನೂ ಓದಿ: ಗರ್ಭ ಗುಡಿ ಬಾಗಿಲು ಓಪನ್ ; 9 ದಿನ ಭಕ್ತರಿಗೆ ದರ್ಶನ ನೀಡುವ ಹಾಸನಾಂಬೆ