ಅಬುಧಾಬಿ(ಯುಎಇ) : ಭಾರತದ ಸಮುದಾಯ ಈಗ ಎಲ್ಲ ರಾಷ್ಟ್ರಗಳಲ್ಲಿ ಗುರುತರ ಸಾಧನೆ ಮಾಡುತ್ತಿದೆ. ದೇಶದಲ್ಲಿನ ಮೂಲ ಸೌಕರ್ಯ ಯೋಜನೆಗಳು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿದೆ. ಹೀಗಾಗಿ 'ಭಾರತ ವಿಶ್ವಬಂಧು'ವಾಗಿ ಬೆಳೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಅರಬ್ ಸಂಯುಕ್ತ ರಾಷ್ಟ್ರದ (ಯುಎಇ) ಅಬುಧಾಬಿಯಲ್ಲಿನ ಜಾಯೆದ್ ಸ್ಪೋರ್ಟ್ಸ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಅಹ್ಲಾನ್ ಮೋದಿ(ಸ್ವಾಗತ ಮೋದಿ) ಕಾರ್ಯಕ್ರಮದಲ್ಲಿ ಭಾರತೀಯ ಅನಿವಾಸಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತ ಇಂದು ತನ್ನ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಹೆಸರುವಾಸಿಯಾಗಿದೆ. ಅದ್ಭುತ ಪ್ರವಾಸೋದ್ಯಮ ತಾಣವಾಗಿ ವಿಶ್ವದ ಜನರು ಗುರುತಿಸುವಂತಾಗಿದೆ. ದೊಡ್ಡ ಕ್ರೀಡಾ ಶಕ್ತಿಯೂ ಹೌದು ಎಂದು ಸಾಬೀತು ಮಾಡಿದೆ. ಇದನ್ನು ಕೇಳಿದ ವಿಶ್ವದ ಯಾವುದೇ ಮೂಲೆಯಲ್ಲಿನ ಭಾರತೀಯ ಹೆಮ್ಮೆ ಪಡಬೇಕು ಎಂದು ಹೇಳಿದರು.
ಭಾರತದಲ್ಲಿ ಡಿಜಿಟಲ್ ಕ್ರಾಂತಿ ನಡೆದಿದೆ. ಇದು ವಿಶ್ವದ ಇತರ ರಾಷ್ಟ್ರಗಳಲ್ಲೂ ಮೆಚ್ಚುಗೆ ಪಡೆದಿದೆ. ಯುಎಇ ನಾಗರಿಕರು ಕೂಡ ಇದರ ಪ್ರಯೋಜನ ಪಡೆಯಲಿದ್ದಾರೆ. ಅರಬ್ ರಾಷ್ಟ್ರದಲ್ಲಿ ರುಪೇ, ಯುಪಿಐ ಕಾರ್ಡ್ ಸೇವೆಯನ್ನು ಆರಂಭಿಸಿದ್ದೇವೆ. ಉಭಯ ದೇಶಗಳ ಜನರು ಡಿಜಿಟಲ್ ಪಾವತಿಯನ್ನು ಸಲೀಸಾಗಿ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.
ವಿಶ್ವ ವೇದಿಕೆಯಲ್ಲಿ ಭಾರತ: ಇಂದು ಜಗತ್ತು ಭಾರತವನ್ನು 'ವಿಶ್ವ ಬಂಧು' ಎಂದು ಭಾವಿಸುತ್ತಿದೆ. ಪ್ರಪಂಚದ ಪ್ರತಿ ವೇದಿಕೆಯಲ್ಲೂ ದೇಶದ ಹೆಸರು ಧ್ವನಿಸುತ್ತದೆ. ಎಲ್ಲಿ ಸಮಸ್ಯೆ ಇದೆಯೋ ಅಲ್ಲಿ ಮೊದಲು ಕೇಳಿ ಬರುವ ದೇಶಗಳ ಹೆಸರಿನಲ್ಲಿ ಭಾರತ ಮೊದಲಿರುತ್ತದೆ. ದೇಶ ಬಲಿಷ್ಠವಾಗಿ ಬೆಳೆದುನಿಂತ ಪರಿಯಿಂದಾಗಿ ಅದು ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದು ಪ್ರಧಾನಿ ಹೇಳಿದರು.
ಕಳೆದ 10 ವರ್ಷಗಳಲ್ಲಿ ಇದು ನನ್ನ 7ನೇ ಯುಎಇ ಭೇಟಿಯಾಗಿದೆ. ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರು ವಿಮಾನ ನಿಲ್ದಾಣಕ್ಕೆ ಬಂದು ಬರಮಾಡಿಕೊಂಡರು. ಇದು ಅವರ ಸರಳತೆಯನ್ನು ಸಾರುತ್ತದೆ. ನಾನಿಲ್ಲಿಗೆ ಕುಟುಂಬ ಸದಸ್ಯರನ್ನು ಭೇಟಿಯಾಗಲು ಬಂದಿದ್ದೇನೆ ಎಂದೆನಿಸುತ್ತಿದೆ. ನೀವು ಹುಟ್ಟಿದ ಮಣ್ಣಿನ ಘಮ ಇಲ್ಲಿ ಹರಡುತ್ತಿದೆ. 140 ಕೋಟಿ ಭಾರತೀಯರ ಸಂದೇಶವನ್ನು ನಾನು ಹೊತ್ತು ತಂದಿದ್ದೇನೆ ಎಂದರು.
ವೆಲ್ಕಮ್ ಮೋದಿ ಕಾರ್ಯಕ್ರಮವು ಅನಿವಾಸಿ ಭಾರತೀಯರು ಸೇರಿ 65 ಸಾವಿರ ಜನರು ಭಾಗವಹಿಸಿದ್ದರು. ಇನ್ನಷ್ಟು ಜನರು ನೋಂದಣಿ ಕೋರಿ ಬಂದರೂ, ಸ್ಥಳಾವಕಾಶ ಕೊರತೆ ಕಾರಣ ಆಯೋಜಕರು ಜನರಿಗೆ ಪ್ರವೇಶ ನಿರಾಕರಿಸಿದರು.
ಇಂದು ಹಿಂದೂ ದೇಗುಲ ಉದ್ಘಾಟನೆ: ಅಬುಧಾಬಿಯಲ್ಲಿ 24 ಎಕರೆ ಪ್ರದೇಶದಲ್ಲಿ 900 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೊದಲ ಹಿಂದು ದೇಗುಲವಾದ ಸ್ವಾಮಿ ನಾರಾಯಣ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ.
2015 ರಲ್ಲಿ ಪ್ರಧಾನಿ ಮೋದಿ ಅವರೇ ದೇವಸ್ಥಾನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಇಲ್ಲಿನ ಸರ್ಕಾರ ಮಂದಿರ ನಿರ್ಮಾಣಕ್ಕಾಗಿ 24 ಎಕರೆ ಭೂಮಿಯನ್ನು ಕಾಣಿಕೆಯಾಗಿ ನೀಡಿದೆ. ವಿಶ್ವದ ಭಾರತೀಯ ಧನಿಕರು ಹಣ ಸಂಗ್ರಹಿಸಿ ದೇಗುಲವನ್ನು ನಿರ್ಮಾಣ ಮಾಡಲಾಗಿದೆ. ದೇಗುಲದಲ್ಲಿ ಅರಬ್ ಸಂಸ್ಕೃತಿ ಸೇರಿ ಮಹಾಭಾರತ, ರಾಮಾಯಣ, ಭಗವದ್ಗೀತೆ ಸೇರಿದಂತೆ ವಿವಿಧ ಪೌರಾಣಿಕ ಮಾಹಿತಿಯನ್ನು ಚಿತ್ರಿಸಲಾಗಿದೆ.
ಅಬುಧಾಬಿಯಲ್ಲಿ ದೇವಾಲಯವನ್ನು ನಿರ್ಮಾಣಕ್ಕೆ ನೆರವು ನೀಡಿದ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರಿಗೆ ಪ್ರಧಾನಿ ಧನ್ಯವಾದ ಹೇಳಿದರು. ದಿವ್ಯ ಮಂದಿರ ನಿರ್ಮಾಣವಾಗಿದ್ದು ಅದನ್ನು ಉದ್ಘಾಟಿಸುವ ಭಾಗ್ಯ ನನಗೆ ಸಿಕ್ಕಿದೆ ಎಂದು ಮೋದಿ ಹೇಳಿದ್ದಾರೆ. ಅಬುಧಾಬಿಯಲ್ಲಿ ಮಂದಿರವನ್ನು ಉದ್ಘಾಟಿಸಿದ ಬಳಿಕ ಕತಾರ್ಗೆ ತೆರಳಲಿದ್ದಾರೆ.
ಇದನ್ನೂ ಓದಿ: 'ಭಾರತ-ಯುಎಇ ದೋಸ್ತಿ ಜಿಂದಾಬಾದ್': ಅಬುಧಾಬಿಯಲ್ಲಿ ಮೋದಿ