ಕೊಲಂಬೊ, ಶ್ರೀಲಂಕಾ: ಶ್ರೀಲಂಕಾದ ಒಂಬತ್ತನೇ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಜನತಾ ವಿಮುಕ್ತಿ ಪೆರಮುನಾ (ಜೆವಿಪಿ) ಪಕ್ಷದ ನಾಯಕ ಅನುರ ಕುಮಾರ ದಿಸ್ಸಾನಾಯಕೆ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಪುನರುತ್ಥಾನದ ಹೊಸ ಯುಗವನ್ನು ಪ್ರಾರಂಭಿಸುವುದಾಗಿ ಅವರು ಹೇಳಿದ್ದಾರೆ.
"ಇಂದು (23) ಬೆಳಗ್ಗೆ, ನಾನು ಅಧ್ಯಕ್ಷೀಯ ಸಚಿವಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರ ಸಮ್ಮುಖದಲ್ಲಿ ಡೆಮಾಕ್ರಟಿಕ್ ಸೋಷಿಯಲಿಸ್ಟ್ ರಿಪಬ್ಲಿಕ್ ಆಫ್ ಶ್ರೀಲಂಕಾದ 9 ನೇ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ" ಎಂದು ದಿಸ್ಸಾನಾಯಕೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
This morning (23rd), I took oath as the 9th Executive President of the Democratic Socialist Republic of Sri Lanka in the presence of Chief Justice Jayantha Jayasuriya at the Presidential Secretariat.
— Anura Kumara Dissanayake (@anuradisanayake) September 23, 2024
I promise to fulfill your responsibility to usher in a new era of Renaissance… pic.twitter.com/TFJuyh9SbC
ದೇಶಕ್ಕಾಗಿ ಕೆಲಸ; ದೇಶಕ್ಕಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ ದಿಸ್ಸಾನಾಯಕೆ, "ಈ ದೇಶಕ್ಕೆ ಅಭಿವೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸುವುದಾಗಿ ನಾನು ಭರವಸೆ ನೀಡುತ್ತೇನೆ ಮತ್ತು ಅದರಲ್ಲಿ ನೀವೆಲ್ಲರೂ ಸಾಮೂಹಿಕವಾಗಿ ಭಾಗಿಗಳಾಗಬೇಕೆಂದು ಕೇಳಿಕೊಳ್ಳುತ್ತೇನೆ" ಎಂದು ಅವರು ಬರೆದಿದ್ದಾರೆ.
ಶ್ರೀಲಂಕಾ ಎದುರಿಸುತ್ತಿರುವ ಸಂಕೀರ್ಣ ಸವಾಲುಗಳ ಬಗ್ಗೆ ಮಾತನಾಡಿದ ದಿಸ್ಸಾನಾಯಕೆ, ನಾಗರಿಕರ ನಿರೀಕ್ಷೆಗಳನ್ನು ಪೂರೈಸಲು ಶ್ರದ್ಧೆಯಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಕೊಲಂಬೋದ ಅಧ್ಯಕ್ಷೀಯ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರು ಪ್ರಮಾಣ ವಚನ ಬೋಧಿಸಿದರು. ಶ್ರೀಲಂಕಾದಲ್ಲಿ ಎಡಪಂಥೀಯ ನಾಯಕರೊಬ್ಬರು ಅಧ್ಯಕ್ಷರಾಗಿರುವುದು ಇದೇ ಮೊದಲ ಸಲವಾಗಿದೆ.
ದೇಶವನ್ನು ಬುದ್ದಿವಂತಿಕೆಯಿಂದ ಪಾರದರ್ಶಕವಾಗಿ ಮುನ್ನಡೆಸುವೆ: ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಮಾತನಾಡಿದ ಅವರು, ರಾಜಕಾರಣಿಗಳ ಮೇಲೆ ಸಾರ್ವಜನಿಕರು ಮತ್ತೊಮ್ಮೆ ವಿಶ್ವಾಸವಿಡುವಂತೆ ಕೆಲಸ ಮಾಡುವೆ ಹಾಗೂ ದೇಶವನ್ನು ಬುದ್ಧಿವಂತಿಕೆ ಮತ್ತು ಪಾರದರ್ಶಕತೆಯಿಂದ ಮುನ್ನಡೆಸುವೆ ಎಂದು ಪ್ರತಿಜ್ಞೆ ಮಾಡಿದರು.
"ನಾನೇನು ಜಾದೂಗಾರನಲ್ಲ. ನಾನೂ ಸಹ ಕೆಲ ಸಾಮರ್ಥ್ಯ ಮತ್ತು ಒಂದಿಷ್ಟು ದೌರ್ಬಲ್ಯಗಳನ್ನು ಹೊಂದಿರುವ ಸಾಮಾನ್ಯ ನಾಗರಿಕ. ನನ್ನ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುವುದು, ಜ್ಞಾನವನ್ನು ವಿಸ್ತರಿಸುವುದು ಮತ್ತು ದೇಶವನ್ನು ಆಳಲು ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನನ್ನ ಮೊದಲ ಆದ್ಯತೆಯಾಗಿದೆ" ಎಂದು ಅವರು ಒತ್ತಿ ಹೇಳಿದರು.
ಭಾನುವಾರದ ಗೆಲುವಿನ ನಂತರ, ಎಕೆಡಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದಿಸ್ಸಾನಾಯಕೆ ಆ ಕ್ಷಣದ ಐತಿಹಾಸಿಕ ಮಹತ್ವದ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
"ನಾವು ಶತಮಾನಗಳಿಂದ ಕಂಡ ಕನಸು ಅಂತಿಮವಾಗಿ ನನಸಾಗುತ್ತಿದೆ. ಈ ಸಾಧನೆಯು ಯಾವುದೇ ಒಬ್ಬ ವ್ಯಕ್ತಿಯ ಕೆಲಸದಿಂದ ಬಂದಿರುವುದಲ್ಲ. ಬದಲಾಗಿ ಇದು ನಿಮ್ಮಂಥ ಲಕ್ಷಾಂತರ ಜನರ ಸಾಮೂಹಿಕ ಪ್ರಯತ್ನದ ಫಲಿತಾಂಶವಾಗಿದೆ. ನಿಮ್ಮ ಬದ್ಧತೆ ನಮ್ಮನ್ನು ಇಷ್ಟು ದೂರ ತಂದಿದೆ ಮತ್ತು ಅದಕ್ಕಾಗಿ ನಾನು ತುಂಬಾ ಕೃತಜ್ಞನಾಗಿದ್ದೇನೆ." ಎಂದು ದಿಸ್ಸಾನಾಯಕೆ ಭಾವನಾತ್ಮಕವಾಗಿ ಬರೆದಿದ್ದಾರೆ.
ಇದನ್ನೂ ಓದಿ : ಹಿಜ್ಬುಲ್ಲಾ ವಿರುದ್ಧದ ದಾಳಿ ಮತ್ತಷ್ಟು ತೀವ್ರವಾಗಲಿದೆ: ಇಸ್ರೇಲ್ - Israel To Intensify Strikes