ವಾಶಿಂಗ್ಟನ್: ನೂರಾರು ಜನರ ಸಾವಿಗೆ ಕಾರಣವಾದ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ದೇಶದದಲ್ಲಿ ಉದ್ಭವಿಸಿದ ರಾಜಕೀಯ ಬಿಕ್ಕಟ್ಟಿನ ಹಿಂದೆ ತನ್ನ ಯಾವುದೇ ಕೈವಾಡವಿಲ್ಲ ಎಂದು ಅಮೆರಿಕ ಹೇಳಿದೆ. ಈ ಮೂಲಕ ಬಾಂಗ್ಲಾದೇಶದ ಬಿಕ್ಕಟ್ಟಿಗೆ ಅಮೆರಿಕವೇ ಕಾರಣ ಎಂಬ ವ್ಯಾಪಕವಾಗಿ ಕೇಳಿ ಬಂದ ಆರೋಪಗಳನ್ನು ಅದು ತಳ್ಳಿ ಹಾಕಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕರಿನ್ ಜೀನ್ ಪಿಯರೆ, ಇಂಥ ಎಲ್ಲ ವದಂತಿಗಳು ಸುಳ್ಳು. ಬಾಂಗ್ಲಾದೇಶದ ಬಿಕ್ಕಟ್ಟಿನ ಹಿಂದೆ ಅಮೆರಿಕದ ಕೈವಾಡವಿದೆ ಎಂದು ಹೇಳುವ ಎಲ್ಲಾ ವರದಿಗಳು ಸುಳ್ಳು. ಅದಾವುದೂ ಸತ್ಯವಲ್ಲ ಎಂದು ತಿಳಿಸಿದರು. ಬಾಂಗ್ಲಾದೇಶದ ಜನರೇ ಆ ದೇಶದಲ್ಲಿ ಯಾವ ಸರ್ಕಾರವಿರಬೇಕೆಂಬುದನ್ನು ನಿರ್ಧರಿಸುತ್ತಾರೆ ಎಂದರು.
"ಇದು ಬಾಂಗ್ಲಾದೇಶದ ಜನರಿಗಾಗಿ ಮತ್ತು ಅವರೇ ನಿರ್ಧರಿಸುವ ಆಯ್ಕೆಯಾಗಿದೆ. ಬಾಂಗ್ಲಾದೇಶದ ಜನರೇ ಅಲ್ಲಿನ ಸರ್ಕಾರದ ಭವಿಷ್ಯವನ್ನು ನಿರ್ಧರಿಸಬೇಕು ಎಂಬುದು ನಮ್ಮ ನಿಲುವಾಗಿದೆ ಮತ್ತು ನಾವು ಆ ನಿಲುವಿಗೆ ಬದ್ಧರಾಗಿದ್ದೇವೆ. ಆ ಕುರಿತಾದ ನಮ್ಮ ಮೇಲಿನ ಯಾವುದೇ ಆರೋಪಗಳು ಖಂಡಿತವಾಗಿಯೂ ಸುಳ್ಳು ಮತ್ತು ನಾವು ಅದನ್ನು ಪದೇ ಪದೆ ಹೇಳುತ್ತೇವೆ" ಎಂದು ಅವರು ಹೇಳಿದರು.
ಏತನ್ಮಧ್ಯೆ, ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂಗಳ ಮೇಲೆ ನಡೆದ ದಾಳಿಯ ವಿರುದ್ಧ ಶ್ವೇತಭವನದ ಹೊರಗೆ ನಡೆದ ಪ್ರತಿಭಟನೆಗಳ ಬಗ್ಗೆ ಮಾತನಾಡಿದ ಅವರು, ಯುಎಸ್ ಅಲ್ಲಿನ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಲಿದೆ ಎಂದು ಹೇಳಿದರು.
"ನಾವು ಖಂಡಿತವಾಗಿಯೂ ಪರಿಸ್ಥಿತಿಯ ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಲಿದ್ದೇವೆ. ಅದಕ್ಕಿಂತ ಹೆಚ್ಚಿನದನ್ನು ಹೇಳಲು ಅಥವಾ ಸೇರಿಸಲು ಬೇರೆ ಏನೂ ಇಲ್ಲ." ಎಂದು ಪಿಯರೆ ತಿಳಿಸಿದರು.
"ಅಲ್ಲಿ ಯಾವುದೇ ರೀತಿಯ ಮಾನವ ಹಕ್ಕುಗಳ ವಿಷಯದ ಬಗ್ಗೆ ಹೇಳುವುದಾದರೆ, ಯುಎಸ್ ಅಧ್ಯಕ್ಷರು ಆ ಬಗ್ಗೆ ಸಾರ್ವಜನಿಕವಾಗಿ ಅಥವಾ ಖಾಸಗಿಯಾಗಿ ಗಟ್ಟಿಯಾಗಿ ಮತ್ತು ಸ್ಪಷ್ಟವಾಗಿ ಧ್ವನಿ ಎತ್ತಲಿದ್ದಾರೆ ಮತ್ತು ಅವರು ಅದನ್ನು ಮುಂದುವರಿಸುತ್ತಾರೆ. ಆದರೆ, ಈ ಸಮಯದಲ್ಲಿ ಆ ಬಗ್ಗೆ ನಿರ್ದಿಷ್ಟವಾಗಿ ಹೇಳುವಂಥದೇನೂ ಇಲ್ಲ" ಎಂದು ಅವರು ಹೇಳಿದರು.
ಪ್ರತಿಭಟನೆಗಳು ತೀವ್ರವಾದ ನಂತರ ಶೇಖ್ ಹಸೀನಾ ಆಗಸ್ಟ್ 5 ರಂದು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಬಾಂಗ್ಲಾದೇಶದಲ್ಲಿ ರಾಜಕೀಯ ಬಿಕ್ಕಟ್ಟು ಎದುರಾಗಿದೆ. ಸರ್ಕಾರಿ ಉದ್ಯೋಗಗಳಲ್ಲಿನ ಮೀಸಲಾತಿ ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಗಳು ನಂತರ ಸರ್ಕಾರ ವಿರೋಧಿ ಪ್ರತಿಭಟನೆಯಾಗಿ ಮಾರ್ಪಟ್ಟಿದ್ದವು.
ಇದನ್ನೂ ಓದಿ : ಯಾವುದೇ ಕ್ಷಣದಲ್ಲಿ ನಮ್ಮ ಮೇಲೆ ಇರಾನ್, ಹಿಜ್ಬುಲ್ಲಾ ಜಂಟಿ ದಾಳಿ ಸಾಧ್ಯತೆ: ಇಸ್ರೇಲ್ ಹೇಳಿಕೆ - Israel Iran War