ಜೆರುಸಲೇಂ: ಗಾಜಾದಲ್ಲಿ ನಡೆಯುತ್ತಿರುವ ಯುದ್ಧ ಹಮಾಸ್ ಉಗ್ರರನ್ನು ಅಲ್ಲಿಂದ ಸಂಪೂರ್ಣ ನಿರ್ಮೂಲನೆ ಮಾಡುವ ಅಂತಿಮ ಹಂತದಲ್ಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಕಾಲೇಜಿನ ಕೆಡೆಟ್ಗಳೊಂದಿಗಿನ ಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, ಹಮಾಸ್ ಜಾಲವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವತ್ತ ನಾವು ಮುನ್ನಡೆಯುತ್ತಿದ್ದೇವೆ ಎಂದು ಹೇಳಿದರು.
ನೆತನ್ಯಾಹು ಇತ್ತೀಚೆಗೆ ಗಾಜಾ ಪ್ರದೇಶಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಮತ್ತು ಸೇನೆಯ ಹಿರಿಯ ಕಮಾಂಡ್ನೊಂದಿಗೆ ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಒಂಬತ್ತು ತಿಂಗಳ ಸುದೀರ್ಘ ಯುದ್ಧದ ಫಲಿತಾಂಶಗಳ ಬಗ್ಗೆ ಮೌಲ್ಯಮಾಪನ ಸಭೆ ನಡೆಸಿದ್ದರು. ಅದಾಗಿ ಒಂದು ದಿನದ ನಂತರ ಹಮಾಸ್ ಅನ್ನು ನಿರ್ಮೂಲನೆಗೊಳಿಸುವ ಅಂತಿಮ ಹಂತಕ್ಕೆ ಬಂದಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಏತನ್ಮಧ್ಯೆ ಖಾನ್ ಯೂನಸ್ ಪ್ರದೇಶವನ್ನು ಖಾಲಿ ಮಾಡಿ ಬೇರೆ ಕಡೆ ತೆರಳುವಂತೆ ಇಸ್ರೇಲ್ ಮಿಲಿಟರಿ ಅಲ್ಲಿನ ನಾಗರಿಕರಿಗೆ ಸೋಮವಾರ ಸೂಚನೆ ನೀಡಿದೆ. ಈ ಪ್ರದೇಶದಲ್ಲಿ ಮತ್ತೆ ಗುಂಪುಗೂಡಿರುವ ಹಮಾಸ್ ಪಡೆಗಳ ವಿರುದ್ಧ ಹೋರಾಡಲು ಇಸ್ರೇಲ್ ಪಡೆಗಳು ನೆಲದ ಮೂಲಕ ಕಾರ್ಯಾಚರಣೆ ನಡೆಸಲು ಸಿದ್ಧವಾಗಿವೆ ಎಂದು ಅಂದಾಜಿಸಲಾಗಿದೆ. ಇಸ್ರೇಲ್ ಏಪ್ರಿಲ್ ಆರಂಭದಲ್ಲಿ ಖಾನ್ ಯೂನಿಸ್ನಲ್ಲಿ ನಡೆಸಿದ ದೊಡ್ಡ ಪ್ರಮಾಣದ ದಾಳಿಯನ್ನು ಪೂರ್ಣಗೊಳಿಸಿ, ತನ್ನ ಬಹುತೇಕ ಪಡೆಗಳನ್ನು ಅಲ್ಲಿಂದ ಹಿಂತೆಗೆದುಕೊಂಡಿತ್ತು.
ಎಚ್ಚರಿಕೆ ಬೆನ್ನಲ್ಲೇ ದಾಳಿ: ಗಾಜಾ ನಗರದಲ್ಲಿ ಸಮಾರಂಭ ನಡೆಯುತ್ತಿದ್ದ ಮನೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಐವರು ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ. ವೈಮಾನಿಕ ದಾಳಿಯ ನಂತರ ಹಲವಾರು ಯುವಕರು ನೆಲದ ಮೇಲೆ ಬಿದ್ದಿರುವ ದೃಶ್ಯಗಳ ವೀಡಿಯೊಗಳು ಫೇಸ್ಬುಕ್ನಲ್ಲಿ ಹರಿದಾಡುತ್ತಿವೆ. ವೈಮಾನಿಕ ದಾಳಿಯಲ್ಲಿ ಐದು ಜನ ಸಾವನ್ನಪ್ಪಿದ್ದಾರೆ ಮತ್ತು ಇತರ 10 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ವೈದ್ಯಕೀಯ ಮೂಲಗಳು ವರದಿ ಮಾಡಿವೆ.
ಖಾನ್ ಯೂನಿಸ್ನ ಪೂರ್ವ ಭಾಗದಲ್ಲಿನ ನಿವಾಸಿಗಳು ಮತ್ತು ಇಲ್ಲಿಗೆ ಸ್ಥಳಾಂತರಗೊಂಡ ವ್ಯಕ್ತಿಗಳು ಈ ಕೂಡಲೇ ಇಲ್ಲಿಂದ ಸ್ಥಳಾಂತರಗೊಳ್ಳಬೇಕು ಎಂದು ಇಸ್ರೇಲಿ ಮಿಲಿಟರಿ ವಕ್ತಾರ ಅವಿಚೈ ಅಡ್ರೈ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದೆ. ಕಳೆದ ಅಕ್ಟೋಬರ್ನಲ್ಲಿ ಪ್ಯಾಲೆಸ್ಟೈನ್-ಇಸ್ರೇಲ್ ಸಂಘರ್ಷ ಪ್ರಾರಂಭವಾದಾಗಿನಿಂದ ಗಾಜಾದಲ್ಲಿ ಒಟ್ಟು ಸಾವಿನ ಸಂಖ್ಯೆ 37,900 ಮತ್ತು ಗಾಯಗೊಂಡವರ ಸಂಖ್ಯೆ 87,060ಕ್ಕೆ ತಲುಪಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಇಂಧನ ಬೆಲೆ ತೀವ್ರ ಹೆಚ್ಚಳ: ಲೀಟರ್ ಪೆಟ್ರೋಲ್ಗೆ 265 ರೂ. - Petrol Price Hiked In Pakistan