ರಬತ್ (ಮೊರಾಕ್ಕೊ): ಹಲವು ದಶಕಗಳ ನಂತರ ಸಹರಾ ಮರುಭೂಮಿಯಲ್ಲಿ ಅಪರೂಪದಲ್ಲಿ ಅಪರೂಪವೆಂಬಂತೆ ಧಾರಾಕಾರ ಮಳೆ ಸುರಿದಿದೆ. ಮರುಭೂಮಿಯ ತಾಳೆ ಮರಗಳು, ಮರಳು ದಿಬ್ಬಗಳ ನಡುವೆ ಜೀವ ಜಲ ಹರಿದಿದೆ. ಮರಳುಗಾಡಿನ ಅಲ್ಲಲ್ಲಿ ಸರೋವರಗಳು ರಚನೆಯಾಗಿವೆ. ಅನೇಕ ವರ್ಷಗಳಿಂದ ಬರಪೀಡಿತವಾಗಿದ್ದ ಪ್ರದೇಶಗಳು ಮಳೆಯಿಂದ ಹೊಸ ಬದುಕು ಪಡೆದಿವೆ.
ಮೊರಾಕ್ಕೊದ ಆಗ್ನೇಯ ದಿಕ್ಕಿನಲ್ಲಿರುವ ಮರುಭೂಮಿ ಜಗತ್ತಿನಲ್ಲೇ ಅತಿ ಶುಷ್ಕ (ಒಣ) ಪ್ರದೇಶಗಳಲ್ಲಿ ಒಂದು. ಇಲ್ಲಿ ಮಳೆ ಅಪರೂಪ. ಮೊರಾಕ್ಕೋ ಸರ್ಕಾರದ ಪ್ರಕಾರ, ಇತ್ತೀಚೆಗೆ ಎರಡು ದಿನ ಇಲ್ಲಿನ ಕೆಲವು ಭಾಗಗಳಲ್ಲಿ ಸುರಿದ ಮಳೆ ವಾರ್ಷಿಕ ಮಳೆಯ ಸರಾಸರಿ ಪ್ರಮಾಣವನ್ನು ಮೀರಿಸಿದೆ. ಇಲ್ಲಿ ವಾರ್ಷಿಕವಾಗಿ ಸರಾಸರಿ 250 ಮಿಲಿ ಮೀಟರ್‌ಗಿಂತ (10 ಇಂಚು) ಕಡಿಮೆ ಮಳೆ ಬೀಳುತ್ತದೆ.
ಹಲವು ದಶಕಗಳ ನಂತರ ಮರುಭೂಮಿ ಸಸ್ಯವರ್ಗ, ಮರಳು ದಿಬ್ಬಗಳ ನಡುವೆ ನೀರು ನಿಂತಿರುವ ದೃಶ್ಯಗಳು ನೋಡಲು ಮೋಹಕವಾಗಿವೆ. ಮರುಭೂಮಿಯಲ್ಲಿ ವಾಸಿಸುವ ಸಮುದಾಯಗಳು, ಭೇಟಿ ನೀಡುವ ಪ್ರವಾಸಿಗರಿಗರು ಈ ದೃಶ್ಯವನ್ನು ಕಣ್ತುಂಬಿಕೊಂಡು ಖುಷಿಪಟ್ಟಿದ್ದಾರೆ.
"ನಾವು ಇಂಥ ದೃಶ್ಯವನ್ನು ನೋಡಿ 30ರಿಂದ 50 ವರ್ಷಗಳೇ ಆದವು" ಎಂದು ಮೊರಾಕ್ಕೋ ಹವಾಮಾನ ನಿರ್ದೇಶನಾಲಯದ ಅಧಿಕಾರಿ ಹೊಸ್ಸೈನ್ ಯಾಬೇಬ್ ಹೇಳಿದರು. "ಹವಾಮಾನದ ಪರಿಭಾಷೆಯಲ್ಲಿ ಇದನ್ನು ಉಷ್ಣವಲಯದ ಚಂಡಮಾರುತಗಳು ಎನ್ನಬಹುದು. ಈಗ ಸುರಿದ ಮಳೆಯಿಂದಾಗಿ ಗಾಳಿಯಲ್ಲಿ ಹೆಚ್ಚು ತೇವಾಂಶವಿರಲಿದ್ದು, ಈ ಪ್ರದೇಶದ ಹವಾಗುಣದಲ್ಲಿ ಮುಂದಿನ ಹಲವು ತಿಂಗಳು ಮತ್ತು ವರ್ಷಗಳಲ್ಲಿ ಬದಲಾವಣೆಯಾಗಲಿದೆ. ಇದರಿಂದಾಗಿ ಹೆಚ್ಚೆಚ್ಚು ಆವಿಯಾಗುವಿಕೆ ಪ್ರಕ್ರಿಯೆ ನಡೆದ ಭವಿಷ್ಯದಲ್ಲಿ ಅಧಿಕ ಮಳೆಯಾಗುವ ಸಾಧ್ಯತೆಯೂ ಇದೆ" ಎಂದು ಅವರು ಹೇಳಿದರು.
ನಿರಂತರವಾಗಿ ಕಳೆದ 6 ವರ್ಷಗಳಿಂದಲೂ ಮೊರಾಕ್ಕೋ ತೀವ್ರ ಬರ ಎದುರಿಸುತ್ತಿದೆ. ನೀರಿಲ್ಲದೆ ಜನರು ತಮ್ಮ ಜಮೀನುಗಳನ್ನು ಪಾಳುಬಿಟ್ಟಿದ್ದಾರೆ. ಪೇಟೆ, ಪಟ್ಟಣಗಳಲ್ಲಿ ನೀರಿನ ಬಳಕೆಗೆ ಮಿತಿ ಹೇರಲಾಗಿದೆ. ಹೀಗಾಗಿ ಈಗ ಸುರಿದ ಮಳೆಯಿಂದಾಗಿ ಅಂತರ್ಜಲ ವೃದ್ಧಿಸಲಿದೆ. ಇದರೊಂದಿಗೆ ಮುಂದಿನ ದಿನಗಳಲ್ಲಿ ಮರುಭೂಮಿಯಲ್ಲಿ ವಾಸಿಸುವ ಜನರ ನೀರಿನ ಬವಣೆ ನೀಗಿಸುವ ನಿರೀಕ್ಷೆ ಮೂಡಿಸಿದೆ.
ಮಳೆನೀರು ಮರಳು ಮತ್ತು ಓಯಸಿಸ್ ಮೂಲಕ ನುಗ್ಗಿ 20ಕ್ಕೂ ಹೆಚ್ಚು ಮಂದಿ ಮೊರಾಕ್ಕೊ ಮತ್ತು ಅಲ್ಜೀರಿಯಾದಲ್ಲಿ ಸಾವನ್ನಪ್ಪಿದ್ದಾರೆ. ರೈತರ ಕೃಷಿಗೂ ವ್ಯಾಪಕ ಹಾನಿಯಾಗಿದೆ. ಸರ್ಕಾರ ತುರ್ತು ಪರಿಹಾರ ನೀಡಿದೆ. ಮಳೆ ಸುರಿದ ಇಲ್ಲಿನ ಕೆಲವು ಪ್ರದೇಶಗಳು ಕಳೆದ ವರ್ಷದ ಭೂಕಂಪಕ್ಕೆ ತುತ್ತಾಗಿದ್ದವು.
ನಾಸಾ ಉಪಗ್ರಹಗಳು ಸೆರೆಹಿಡಿದ ಚಿತ್ರಗಳಲ್ಲಿ ಮಳೆ ನೀರು ಮರುಭೂಮಿಯ ಇರ್ಕ್ಯೂ ಸರೋವರ ಸೇರಿರುವುದನ್ನು ನೋಡಬಹುದು. ಇದು ಮೊರಾಕ್ಕೊದ ಜಗೋರಾ ಮತ್ತು ಟಟ ಪ್ರದೇಶದ ಜನಪ್ರಿಯ ಸರೋವರವಾಗಿದ್ದು, ಕಳೆದ 50 ವರ್ಷದಿಂದ ಬತ್ತಿ ಹೋಗಿತ್ತು.
An extratropical cyclone over the Sahara Desert drenched parts of Morocco and Algeria – bringing up to a year’s worth of rain to some areas. 🌧️ @nasa’s Terra satellite captured floodwaters and some Saharan lakes, usually dry, filled with water. https://t.co/cuS1c73RoA pic.twitter.com/m8Ga8G0FgO
— NASA Earth (@NASAEarth) September 17, 2024
ಇದನ್ನೂ ಓದಿ: ಪಾಕಿಸ್ತಾನದಲ್ಲಿ 4 ಹೊಸ ಪೋಲಿಯೊ ಪ್ರಕರಣ ಪತ್ತೆ, 32ಕ್ಕೇರಿದ ಸಂಖ್ಯೆ