ಜಕಾರ್ತಾ: ಪೂರ್ವ ಇಂಡೋನೇಷ್ಯಾದ ಜ್ವಾಲಾಮುಖಿಯೊಂದು ಭಾನುವಾರ ಬೆಳಗ್ಗೆ ಸ್ಫೋಟಗೊಂಡಿದ್ದು, ಆಕಾಶದಲ್ಲಿ ಎರಡು ಮೈಲಿಗಳಿಗಿಂತ ಹೆಚ್ಚು ಎತ್ತರಕ್ಕೆ ಬೂದಿಯ ಮೋಡವನ್ನು ಸೃಷ್ಟಿಸಿದೆ. ಜ್ವಾಲಾಮುಖಿಯ ಪ್ರದೇಶದಿಂದ ದೂರವಿರುವಂತೆ ಸ್ಥಳೀಯ ನಾಗರಿಕರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಮಾಲುಕು ಪ್ರಾಂತ್ಯದ ಹಲ್ಮಹೇರಾ ದ್ವೀಪದಲ್ಲಿರುವ ಮೌಂಟ್ ಇಬು ಜ್ವಾಲಾಮುಖಿ ಶನಿವಾರ ಮುಂಜಾನೆ 12:37 ಕ್ಕೆ (1537 ಜಿಎಂಟಿ ಶನಿವಾರ) ಸ್ಫೋಟಗೊಂಡಿದೆ. ಜ್ವಾಲಾಮುಖಿ ಸ್ಫೋಟದಿಂದ ಶಿಖರದ ಪಶ್ಚಿಮಕ್ಕೆ ಕಪ್ಪು ಹೊಗೆ ಮತ್ತು ಬೂದಿಯ ದಟ್ಟವಾದ ಮೋಡ ಆವರಿಸಿಕೊಂಡಿದೆ.
ಮೂರು ನಿಮಿಷಗಳಿಗಿಂತ ಹೆಚ್ಚು ಕಾಲ ಜ್ವಾಲಾಮುಖಿಯ ಸ್ಫೋಟ ಸಂಭವಿಸಿದ್ದು, ಶಿಖರದಿಂದ 3.5 ಕಿಲೋಮೀಟರ್ (2.2 ಮೈಲಿ) ಎತ್ತರದವರೆಗೆ ಬೂದಿ ಚಿಮ್ಮಿತು ಎಂದು ಮೌಂಟ್ ಇಬುವಿನ ಮೇಲ್ವಿಚಾರಣಾ ಪೋಸ್ಟ್ನ ಅಧಿಕಾರಿ ಆಕ್ಸಲ್ ರೋರೋ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.
1,325 ಮೀಟರ್ (4,347 ಅಡಿ) ಜ್ವಾಲಾಮುಖಿಯ ಬಗ್ಗೆ ಮುಂಜಾಗ್ರತಾ ಎಚ್ಚರಿಕೆಯ ಮಟ್ಟವು ನಾಲ್ಕು ಹಂತದ ವ್ಯವಸ್ಥೆಯಲ್ಲಿ ಎರಡನೇ ಮಟ್ಟದಲ್ಲಿದೆ. ಹೀಗಾಗಿ ಸ್ಫೋಟದ ನಂತರ ಜನರು ಸ್ಥಳಾಂತಗೊಳ್ಳುವಂತೆ ಯಾವುದೇ ಆದೇಶ ನೀಡಲಾಗಿಲ್ಲ. ಆಕಾಶದಿಂದ ಬೂದಿಯು ಉದುರುವ ಸಾಧ್ಯತೆಯಿರುವುದರಿಂದ ನಾಗರಿಕರು ಮನೆಯಿಂದ ಹೊರಹೋಗುವಾಗ ಮಾಸ್ಕ್ ಮತ್ತು ಕನ್ನಡಕಗಳನ್ನು ಧರಿಸುವಂತೆ ಸಲಹೆ ನೀಡಲಾಗಿದೆ.
ವಿಶಾಲವಾದ ದ್ವೀಪಸಮೂಹ ರಾಷ್ಟ್ರವಾದ ಇಂಡೋನೇಷ್ಯಾ, ಪೆಸಿಫಿಕ್ ರಿಂಗ್ ಆಫ್ ಫೈರ್ ಪ್ರದೇಶದಲ್ಲಿರುವುದರಿಂದ ಇಲ್ಲಿ ಆಗಾಗ ಭೂಕಂಪ ಮತ್ತು ಜ್ವಾಲಾಮುಖಿ ಸ್ಫೋಟಗಳು ಸಂಭವಿಸುತ್ತಿರುತ್ತವೆ.
ಜ್ವಾಲಾಮುಖಿಯ ಕುಳಿಗೆ ಬಿದ್ದು ಚೀನಾದ ಮಹಿಳೆ ಸಾವು: ಇಂಡೋನೇಷ್ಯಾದ ಸಕ್ರಿಯ ಜ್ವಾಲಾಮುಖಿಯ ಬಳಿ ನಿಂತು ಫೋಟೋಗೆ ಪೋಸ್ ನೀಡುವಾಗ ಚೀನಾದ ಮಹಿಳೆಯೊಬ್ಬರು ಕುಳಿಯ ಅಂಚಿನಿಂದ ಬಿದ್ದು ಶನಿವಾರ ಸಾವನ್ನಪ್ಪಿದ್ದಾರೆ. 31 ವರ್ಷದ ಹುವಾಂಗ್ ಲಿಹಾಂಗ್ ತನ್ನ ಪತಿ ಜಾಂಗ್ ಯಾಂಗ್ ಅವರೊಂದಿಗೆ ಪೂರ್ವ ಜಾವಾ ಪ್ರಾಂತ್ಯದ ಪ್ರವಾಸದಲ್ಲಿದ್ದಾಗ ಈ ಅಪಘಾತ ಸಂಭವಿಸಿದೆ.
ಅವರು ಈ ಪ್ರದೇಶದ ಜ್ವಾಲಾಮುಖಿ ಪ್ರವಾಸೋದ್ಯಮ ಉದ್ಯಾನವನವಾದ ಇಜೆನ್ ಕುಳಿಯ ಅಂಚಿಗೆ ಏರಿದ್ದರು. ಸೂರ್ಯೋದಯದ ದೃಶ್ಯವನ್ನು ವೀಕ್ಷಿಸಲು ದಂಪತಿಗಳು ನೀಲಿ ಬೆಂಕಿ ವಿದ್ಯಮಾನಕ್ಕೆ ಹೆಸರುವಾಸಿಯಾದ ಸಕ್ರಿಯ ಜ್ವಾಲಾಮುಖಿಯ ಮೇಲ್ಭಾಗಕ್ಕೆ ಏರಿದ್ದರು. ಆದರೆ ಪ್ರಪಾತದ ತುದಿಯಲ್ಲಿ ನಿಂತು ಫೋಟೊಗೆ ಪೋಸ್ ನೀಡುವಾಗ ಮಹಿಳೆ ಆಯ ತಪ್ಪಿ 75 ಮೀಟರ್ ಎತ್ತರದಿಂದ ಬಿದ್ದು ತಕ್ಷಣ ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಪಾಪ್ ಸಂಗೀತಕ್ಕೆ ಕುಣಿಯುತ್ತಿದ್ದ ಇರಾಕ್ನ ಟಿಕ್ಟಾಕ್ ಸ್ಟಾರ್ ಓಂ ಫಹಾದ್‌ಗೆ ಗುಂಡಿಕ್ಕಿ ಹತ್ಯೆ - Iraqi TikTok Star Shot Dead