ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ವ್ಯವಸ್ಥೆಯ ಸುಧಾರಣೆಗೆ ಒತ್ತಾಯಿಸಿ ವಿದ್ಯಾರ್ಥಿಗಳ ನಡೆಸುತ್ತಿರುವ ಪ್ರತಿಭಟನೆ ಭುಗಿಲೆದ್ದಿದೆ. ರಾಷ್ಟ್ರ ರಾಜಧಾನಿ ಢಾಕಾ ಸೇರಿದಂತೆ ಇತರೆಡೆ ಹಿಂಸಾಚಾರ ನಡೆಯುತ್ತಿದೆ. ಗುರುವಾರ ಒಂದೇ ದಿನ ದೇಶಾದ್ಯಂತ ನಡೆದ ಗಲಾಟೆ, ಗಲಭೆಗಳಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದು, 2,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪ್ರತಿಭಟನೆ ಉಲ್ಭಣಗೊಂಡ ನಂತರದಲ್ಲಿ ಒಟ್ಟಾರೆ ಸಾವಿನ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
1971ರಲ್ಲಿ ಪಾಕಿಸ್ತಾನದಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಯೋಧರ ಸಂಬಂಧಿಕರ ಮೀಸಲಾತಿ ಸೇರಿದಂತೆ ಸಾರ್ವಜನಿಕ ವಲಯದ ಉದ್ಯೋಗಗಳಲ್ಲಿ ಮೀಸಲಾತಿ ಸಂಬಂಧ ಹೋರಾಟ ನಡೆಯುತ್ತಿದೆ. ಕಳೆದ ಒಂದು ವಾರದಿಂದ ಢಾಕಾ ಮತ್ತು ಇತರ ನಗರಗಳಲ್ಲಿನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನಿರಂತರವಾಗಿ ರ್‍ಯಾಲಿಗಳನ್ನು ನಡೆಸುತ್ತಿದ್ದಾರೆ. ಗುರುವಾರ ಇದು ಹಿಂಸಾಚಾರಕ್ಕೆ ತಿರುಗಿತು. ರಾಷ್ಟ್ರವ್ಯಾಪಿ ಘರ್ಷಣೆಗಳು ನಡೆದ ಕುರಿತು ವರದಿಯಾಗಿದೆ.
ಢಾಕಾದ ರಾಂಪುರ ಪ್ರದೇಶದಲ್ಲಿ ಸರ್ಕಾರಿ 'ಭಾಬನ್' ದೂರದರ್ಶನ ಕಚೇರಿಗೂ ಪ್ರತಿಭಟನಾಕಾರರು ಮುತ್ತಿಗೆ ಹಾಕಿ, ಕಚೇರಿಗೆ ಹಾನಿ ಮಾಡಿದ್ದಾರೆ. ಹಲವಾರು ವಾಹನಗಳಿಗೂ ಬೆಂಕಿ ಹಚ್ಚಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ರಬ್ಬರ್ ಬುಲೆಟ್‌ಗಳು, ಅಶ್ರುವಾಯು ಮತ್ತು ಧ್ವನಿ ಗ್ರೆನೇಡ್‌ಗಳನ್ನು ಬಳಸಿದ್ದಾರೆ. ಇತರ ಪ್ರದೇಶಗಳಲ್ಲೂ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಘರ್ಷಣೆಗಳು ಉಂಟಾಗಿವೆ. ಪರಿಣಾಮ, 18 ಜನರು ಸಾವನ್ನಪ್ಪಿದ್ದಾರೆ. ಮೃತರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ.
ರೈಲು, ಇಂಟರ್‌ನೆಟ್ ಬಂದ್: ಹಿಂಸಾಚಾರ ಭುಗಿಲೆದ್ದ ಕಾರಣ ಗುರುವಾರ ಮಧ್ಯಾಹ್ನದಿಂದ ಢಾಕಾದಲ್ಲಿ ರೈಲು ಸೇವೆ, ಮೆಟ್ರೋ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ. ಮೊಬೈಲ್ ಇಂಟರ್‌ನೆಟ್ ನೆಟ್‌ವರ್ಕ್‌ಗಳನ್ನೂ ಸ್ಥಗಿತಗೊಳಿಸಿ ಸರ್ಕಾರ ಆದೇಶಿಸಿದೆ. ಬಿಗಿ ಭದ್ರತೆಯ ನಡುವೆ ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್ಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಹೆಚ್ಚಿನ ಸಿಬ್ಬಂದಿ ಮನೆಯಿಂದಾಚೆ ಬಂದಿಲ್ಲ. ಇದೇ ವೇಳೆ, ಇತರ ಕಂಪನಿಗಳು ತಮ್ಮ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ.
ಇದರ ನಡುವೆ ಪ್ರತಿಭಟನಾನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಚಿವ ಮೊಹಿಬುಲ್ ಹಸನ್ ಚೌಧರಿ, ಕಾನೂನು ಸಚಿವ ಅನಿಸುಲ್ ಹಕ್ ಅವರಿಗೆ ಮಾತುಕತೆಯ ಹೊಣೆಯನ್ನು ಪ್ರಧಾನಿ ಶೇಖ್ ಹಸೀನಾ ವಹಿಸಿದ್ದಾರೆ. ಹಿಂಸಾಚಾರದಲ್ಲಿ ನಡೆದ ಸಾವುಗಳ ಬಗ್ಗೆ ತನಿಖೆಗೆ ಸರ್ಕಾರ ನ್ಯಾಯಾಂಗ ತನಿಖಾ ಸಮಿತಿ ರಚಿಸಿದೆ.
ಮೇಘಾಲಯದತ್ತ ಭಾರತೀಯರು: ಹಿಂಸಾಚಾರದಿಂದಾಗಿ ಬಾಂಗ್ಲಾದೇಶದಲ್ಲಿ ಸಿಲುಕಿದ್ದ 202 ಭಾರತೀಯರು, 101 ನೇಪಾಳಿಗರು ಮತ್ತು ಭೂತಾನ್‌ನ 7 ಮಂದಿ ಸೇರಿ 310 ಜನರು ಮೇಘಾಲಯ ಪ್ರವೇಶಿಸಿದ್ದಾರೆ. ಇದರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳಾಗಿದ್ದಾರೆ. ಮತ್ತೊಂದೆಡೆ, ಬಾಂಗ್ಲಾದಲ್ಲಿ ಸಿಲುಕಿರುವ ತನ್ನ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ಸಂಪರ್ಕದಲ್ಲಿರುವುದಾಗಿ ಅಸ್ಸಾಂ ಸರ್ಕಾರ ಹೇಳಿದೆ. ಢಾಕಾದಲ್ಲಿರುವ ಭಾರತದ ರಾಯಭಾರ ಕಚೇರಿ ಅಧಿಕಾರಿಗಳು, ಭಾರತೀಯ ಪ್ರಜೆಗಳು ಮತ್ತು ವಿದ್ಯಾರ್ಥಿಗಳಿಗೆ ನೆರವಿಗಾಗಿ 24x7 ತುರ್ತು ದೂರವಾಣಿ ಕರೆಗಳನ್ನು ಆರಂಭಿಸಿವೆ.
ಭಾರತದ ಹೈಕಮಿಷನ್, ಢಾಕಾ: +880-193740059, ಸಹಾಯಕ ಹೈಕಮಿಷನ್, ಚಿತ್ತಗಾಂಗ್: +880-1814654797 / +880-1814654799, ಸಹಾಯಕ ಹೈಕಮಿಷನ್, ಸಿಲ್ಹೆಟ್: + 880-1313076411, ಸಹಾಯಕ ಹೈಕಮಿಷನ್, ಖುಲ್ನಾದಲ್ಲಿ +880-1812817799 ತುರ್ತು ದೂರವಾಣಿ ಕರೆಗಳನ್ನು ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಒಮನ್ ಕರಾವಳಿಯಲ್ಲಿ ತೈಲ ಹಡಗು ಮುಳುಗಡೆ ಪ್ರಕರಣ: 8 ಭಾರತೀಯರು ಸೇರಿ 9 ಸಿಬ್ಬಂದಿ ರಕ್ಷಣೆ, ಓರ್ವ ಸಾವು