ವ್ಯಾಟಿಕನ್ ಸಿಟಿ: ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪ್ರಧಾನ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರಿಗೆ ಸಂಪೂರ್ಣ ವಿದ್ಯುತ್ ಚಾಲಿತ ಹೊಸ ಮರ್ಸಿಡಿಸ್-ಬೆನ್ಜ್ ಕಾರನ್ನು ಹಸ್ತಾಂತರಿಸಲಾಯಿತು. ಜರ್ಮನ್ ಐಷಾರಾಮಿ ವಾಹನ ತಯಾರಕರಿಂದ ತಯಾರಿಸಲ್ಪಟ್ಟ ಕಾರು ಇದಾಗಿದ್ದು, ಪೋಪ್ ಫ್ರಾನ್ಸಿಸ್ ಅವರಿಗಾಗಿ ಈ ಎಲೆಕ್ಟ್ರಿಕ್ ವಾಹನವನ್ನು ಕಸ್ಟಮೈಸ್ ಮಾಡಲಾಗಿದೆ. ಬುಧವಾರ ನಡೆದ ಈವೆಂಟ್‌ನಲ್ಲಿ ಜರ್ಮನ್ ಆಟೋ ದೈತ್ಯ ಎಲೆಕ್ಟ್ರಿಕ್ G-ವ್ಯಾಗನ್ SUV ಅನ್ನು ವ್ಯಾಟಿಕನ್‌ಗೆ ಹಸ್ತಾಂತರಿಸಿತು.
ಪೋಪ್‌ಮೊಬೈಲ್ ಎಂದು ಕರೆಸಿಕೊಳ್ಳುವ ವಾಹನ ಇದಾಗಿದ್ದು, ಮೊದಲ ಎಲೆಕ್ಟ್ರಿಕ್ ಪೋಪ್‌ಮೊಬೈಲ್ ಅನ್ನು ಪಡೆದ ಖ್ಯಾತಿ ಕೂಡ ಪೋಪ್ ಫ್ರಾನ್ಸಿಸ್ ಅವರಿಗೆ ಸಲ್ಲುತ್ತದೆ. ಪವಿತ್ರ ವ್ಯಾಟಿಕನ್ ಸಿಟಿ ನಗರದಲ್ಲಿ ಬಂದ ಯಾತ್ರಾರ್ಥಿಗಳನ್ನು ಭೇಟಿ ಮಾಡಲು ಮತ್ತು ಸ್ವಾಗತಿಸಲು ಪೋಪ್ ಫ್ರಾನ್ಸಿಸ್ ಅವರು ಈ ಓಪನ್-ಟಾಪ್ ವೈಟ್ ಎಲೆಕ್ಟ್ರಿಕ್ ಜಿ-ವ್ಯಾಗನ್ ಅನ್ನು ಬಳಸಲಿದ್ದಾರೆ. ಮರ್ಸಿಡಿಸ್ ಜಿ-ಕ್ಲಾಸ್‌ನ ಮಾರ್ಪಡಿಸಿದ ಆವೃತ್ತಿಯಾದ ಈ ವಾಹನವು ಗಾಜಿನ ಮೇಲಾವರಣದ ಅಡಿಯಲ್ಲಿ ಎತ್ತರದ ಆಸನವನ್ನು ಹೊಂದಿದೆ.
ಬುಧವಾರ ಪೋಪ್ ಅವರಿಗೆ ಕಾರು ಹಸ್ತಾಂತರಿಸಿ ಮಾತನಾಡಿದ ಕಂಪನಿಯ ಸಿಇಒ ಓಲಾ ಕಲೇನಿಯಸ್, ''ಪರ್ಲ್-ವೈಟ್ ಪೋಪ್‌ಮೊಬೈಲ್ ಎಲೆಕ್ಟ್ರಿಕ್ ಮೋಟಾರ್ ಚಾಲಿತ ವಾಹನವಾಗಿದೆ. ಇದನ್ನು ಪೋಪ್ ಅವರಿಗಾಗಿ ವಿಶೇಷ ರೀತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅಗತ್ಯವಿರುವ ಕಡಿಮೆ ವೇಗಕ್ಕೆ ಅಳವಡಿಸಲಾಗಿದೆ. ತಮ್ಮ ಸುತ್ತಲಿನ ಜನರನ್ನು ಮಾತನಾಡಿಸಲು ಅನುಕೂಲಕರ ವ್ಯವಸ್ಥೆ ಸಹ ಮಾಡಲಾಗಿದೆ. ಪೋಪ್ ಅವರಿಗಾಗಿ ಈ ಕಾರುಗಳನ್ನು ವಿಶೇಷ ರೀತಿಯಲ್ಲಿ ಸಿದ್ಧಪಡಿಸಿರುವುದು ನಮ್ಮ ಕಂಪನಿಗೆ ವಿಶೇಷ ಗೌರವ. ಕಳೆದ 45 ವರ್ಷಗಳಿಂದ ವ್ಯಾಟಿಕನ್‌ಗೆ ಪೋಪ್ ಮೊಬೈಲ್ ಅನ್ನು ಪೂರೈಸುತ್ತಾ ಬಂದಿದ್ದು, ಸುಮಾರು ನೂರು ವರ್ಷಗಳ ಸಂಬಂಧ ಇದೆ. ಅವರು ನಮ್ಮ ಹಾಗೂ ನಮ್ಮ ಕಂಪನಿ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾವು ತುಂಬಾ ಹೆಮ್ಮೆ ಪಡುತ್ತೇವೆ'' ಎಂದಿದ್ದಾರೆ.
![Vatican City Pope Pope Gets First Electric Popemobile From Luxury German Automaker Mercedes-Benz](https://etvbharatimages.akamaized.net/etvbharat/prod-images/05-12-2024/23046047_789_23046047_1733377350999.png)
ಪರಿಸರ ಸ್ನೇಹಿಯಾಗಿರುವ ಈ ಕಾರಿನಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಇದು ಮೊದಲ ಆಲ್-ಎಲೆಕ್ಟ್ರಿಕ್ ಪೋಪ್‌ಮೊಬೈಲ್ ಎಂದು ಮರ್ಸಿಡಿಸ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಆದರೆ, ಫ್ರಾನ್ಸಿಸ್ ಅವರು ತಮ್ಮ ಕೆಲವು ವಿದೇಶಿ ಪ್ರವಾಸಗಳಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಳಸಿರುವ ಉದಾಹರಣೆ ಇದೆ.
ಪೋಪ್ ಫ್ರಾನ್ಸಿಸ್ ವಿಶ್ವದ ಪ್ರಮುಖ ಧಾರ್ಮಿಕ ಮುಖಂಡರಲ್ಲಿ ಒಬ್ಬರಾಗಿದ್ದು, ಅವರನ್ನು ಭೂಮಿಯ ಮೇಲಿನ ದೇವರ ಪ್ರತಿನಿಧಿ (ಮೆಸೆಂಜರ್) ಎಂದು ಪರಿಗಣಿಸಲಾಗುತ್ತದೆ. ಮಾರ್ಚ್ 2013 ರಿಂದ ಪೋಪ್ ಆಗಿರುವ ಫ್ರಾನ್ಸಿಸ್, ಬುಲೆಟ್ ಪ್ರೂಫ್ ವಾಹನಗಳ ಬಳಕೆಯನ್ನು ಹೆಚ್ಚಾಗಿ ದೂರವಿಟ್ಟು ಸಾಧ್ಯವಾದಷ್ಟು ಜನರಿಗೆ ಹತ್ತಿರವಾಗುತ್ತಿದ್ದಾರೆ. ಅಲ್ಲದೇ ಯುದ್ಧದಿಂದ ದೂರ ಇರುವಂತೆ ಮತ್ತೆ ಶಾಂತಿ ಕಾಪಾಡುವಂತೆ ಸಾರಿ ಹೇಳುತ್ತಿರುವ ಅವರು, ಜಗತ್ತು ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಒತ್ತಿ ಹೇಳುತ್ತಿದ್ದಾರೆ.
ಇದನ್ನೂ ಓದಿ: ಕೈಲಾಕ್ನ ಎಲ್ಲ ರೂಪಾಂತರಗಳ ಬೆಲೆ ರಿವೀಲ್ ಮಾಡಿದ ಸ್ಕೋಡಾ ಆಟೋ ಇಂಡಿಯಾ!