ವಾಷಿಂಗ್ಟನ್ (ಅಮೆರಿಕ): ಅಮೆರಿಕದ ನೆಲದಲ್ಲಿ ಅಮೆರಿಕದ ಪ್ರಜೆಯೊಬ್ಬರ ಹತ್ಯೆಯ ವಿಫಲ ಯತ್ನ ಪ್ರಕರಣದಲ್ಲಿ ಭಾರತೀಯ ಸರ್ಕಾರಿ ನೌಕರನ ಪಾತ್ರದ ಬಗ್ಗೆ ಭಾರತದಿಂದ ಉತ್ತರದಾಯಿತ್ವವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಬೇಸಿಗೆಯಲ್ಲಿ ಯುಎಸ್ ಪ್ರಜೆಯನ್ನು ಹತ್ಯೆ ಮಾಡುವ ವಿಫಲ ಪ್ರಯತ್ನದಲ್ಲಿ ಭಾರತೀಯ ಸರ್ಕಾರಿ ನೌಕರನ ಪಾತ್ರಕ್ಕೆ ಸಂಬಂಧಿಸಿದಂತೆ ನಾವು ಭಾರತ ಸರ್ಕಾರದಿಂದ ಉತ್ತರದಾಯಿತ್ವವನ್ನು ನಿರೀಕ್ಷಿಸುತ್ತೇವೆ ಎಂದು ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ್ ಪಟೇಲ್ ತಮ್ಮ ದೈನಂದಿನ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಇದೇ ವೇಳೆ, ನಾವು ಉನ್ನತ ಮಟ್ಟದಲ್ಲಿ ಭಾರತ ಸರ್ಕಾರದೊಂದಿಗೆ ನೇರವಾಗಿ ನಮ್ಮ ಕಳವಳಗಳನ್ನು ವ್ಯಕ್ತಪಡಿಸುವುದನ್ನು ಮುಂದುವರಿಸುತ್ತೇವೆ ಎಂದರು.
ಆದಾಗ್ಯೂ, ವಿವಾಹ ಸಮಾರಂಭದಲ್ಲಿ ಸಿಖ್ ಪ್ರತ್ಯೇಕತಾವಾದಿಯನ್ನು ಗುರಿಯಾಗಿಸಲು ಯೋಜಿಸುತ್ತಿರುವ ಐದು ಭಾರತೀಯ ಪ್ರಜೆಗಳನ್ನು ಕೆನಡಾದ ಅಧಿಕಾರಿಗಳು ಬಂಧಿಸಿದ್ದಾರೆ ಎಂಬ ವರದಿಯ ಬಗ್ಗೆ ಪ್ರತಿಕ್ರಿಯಿಸಲು ಪಟೇಲ್ ನಿರಾಕರಿಸಿದರು. ಕೆನಡಾದ ಕಾನೂನು ಜಾರಿ ವ್ಯವಸ್ಥೆಯಲ್ಲಿ ನಡೆಯುತ್ತಿರುವ ವಿಷಯಗಳ ಕುರಿತು ಕಾಮೆಂಟ್ ಮಾಡಲು ನೀವು ಕೆನಡಾ ಸರ್ಕಾರದವರನ್ನೇ ಕೇಳಿ ಎಂದು ಸುದ್ದಿಗಾರರೊಂದಿಗೆ ತಿಳಿಸಿದರು.
ಕಳೆದ ವರ್ಷ ನವೆಂಬರ್‌ನಲ್ಲಿ ನ್ಯೂಯಾರ್ಕ್‌ನಲ್ಲಿ ಸಿಖ್ ಪ್ರತ್ಯೇಕತಾವಾದಿಯಾದ ಗುರುಪತ್‌ವಂತ್ ಸಿಂಗ್ ಪನ್ನುನ್ ಹತ್ಯೆಯ ವಿಫಲ ಸಂಚಿನಲ್ಲಿ ಭಾರತೀಯ ಪ್ರಜೆ ನಿಖಿಲ್ ಗುಪ್ತಾ ಎಂಬಾತ ಭಾರತೀಯ ಸರ್ಕಾರಿ ಉದ್ಯೋಗಿಯೊಂದಿಗೆ ಕೆಲಸ ಮಾಡಿದ್ದಾರೆ ಎಂದು ಅಮೆರಿಕ ಫೆಡರಲ್ ಪ್ರಾಸಿಕ್ಯೂಟರ್‌ಗಳು ಆರೋಪಿಸಿದ್ದಾರೆ. ಕಳೆದ ವರ್ಷ ಜೂನ್‌ನಲ್ಲಿ ಜೆಕ್ ಗಣರಾಜ್ಯದಲ್ಲಿ ಬಂಧಿಸಲ್ಪಟ್ಟ ಗುಪ್ತಾ ಅವರನ್ನು ಜೂನ್ 14ರಂದು ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ.
ಇದನ್ನೂ ಓದಿ: ಇಸ್ರೇಲ್ ರಕ್ತಪಾತದ ರೂವಾರಿ ಹಮಾಸ್ ಮಿಲಿಟರಿ ಕಮಾಂಡರ್ ಮುಹಮ್ಮದ್ ದೀಫ್ ಹತ್ಯೆ