ಇಸ್ಲಾಮಾಬಾದ್: ಬೇಹುಗಾರಿಕೆ ಆರೋಪದ ಮೇಲೆ 2020ರಲ್ಲಿ ಗಿಲ್ಗಿಟ್ - ಬಾಲ್ಟಿಸ್ತಾನ್ (ಜಿಬಿ) ನಿಂದ ಬಂಧಿಸಲ್ಪಟ್ಟ ಇಬ್ಬರು ಭಾರತೀಯ ಪ್ರಜೆಗಳಿಗೆ ಪಾಕಿಸ್ತಾನವು ಭಾರತದ ರಾಜತಾಂತ್ರಿಕರೊಂದಿಗೆ ಭೇಟಿ ಮಾಡುವ ಅವಕಾಶ ನೀಡಿದೆ. ಭಾರತೀಯ ರಾಜತಾಂತ್ರಿಕರು ಮತ್ತು ಭಾರತೀಯ ಪ್ರಜೆಗಳ ನಡುವೆ ಸೋಮವಾರ ಮೊದಲ ಬಾರಿಗೆ ಭೇಟಿ ನಡೆಯಿತು ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದ ವಿದೇಶಾಂಗ ಕಚೇರಿ ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲವಾದರೂ, ಮೂಲಗಳು ಈ ಬೆಳವಣಿಗೆಯನ್ನು ದೃಢಪಡಿಸಿವೆ. ಇಬ್ಬರು ಭಾರತೀಯ ಪ್ರಜೆಗಳನ್ನು ಫಿರೋಜ್ ಅಹ್ಮದ್ ಲೋನ್ ಮತ್ತು ನೂರ್ ಮುಹಮ್ಮದ್ ವಾನಿ ಎಂದು ಗುರುತಿಸಲಾಗಿದ್ದು, ಇವರು ಕಾಶ್ಮೀರದ ಗುರೆಜ್ ಪ್ರದೇಶಕ್ಕೆ ಸೇರಿದವರು ಎಂದು ಮೂಲಗಳು ಹೇಳಿವೆ. ಇಬ್ಬರೂ ಭಾರತೀಯರನ್ನು ಇತ್ತೀಚೆಗೆ ಗಿಲ್ಗಿಟ್ - ಬಾಲ್ಟಿಸ್ತಾನ್ ಜೈಲಿನಿಂದ ರಾವಲ್ಪಿಂಡಿಯ ಅಡಿಯಾಲಾ ಜೈಲಿಗೆ ಸ್ಥಳಾಂತರಿಸಲಾಗಿದೆ.
ಸಭೆಯ ವಿವರಗಳನ್ನು ಹಂಚಿಕೊಂಡ ಮೂಲಗಳು, ಇಸ್ಲಾಮಾಬಾದ್ನಲ್ಲಿರುವ ಭಾರತೀಯ ಹೈಕಮಿಷನ್ (ಐಎಚ್ಸಿ) ನ ಮೂವರು ಸದಸ್ಯರ ನಿಯೋಗವು ಅಡಿಯಾಲಾ ಜೈಲಿನಲ್ಲಿ ಇಬ್ಬರು ಕೈದಿಗಳನ್ನು ಭೇಟಿ ಮಾಡಿದೆ ಮತ್ತು ಈ ಸಂದರ್ಭದಲ್ಲಿ ಆಂತರಿಕ ಸಚಿವಾಲಯದ ಅಧಿಕಾರಿಗಳು ಸಹ ಉಪಸ್ಥಿತರಿದ್ದರು ಎಂದು ಹೇಳಿವೆ.
ಭಾರತೀಯ ಪ್ರಜೆಗಳಿಬ್ಬರೂ 2018 ರ ನವೆಂಬರ್ನಲ್ಲಿ ತಿಳಿಯದೆ ಗಡಿ ದಾಟಿದ್ದಾರೆ ಎಂದು ಭಾರತೀಯ ಮಾಧ್ಯಮ ವರದಿಗಳು ಹೇಳಿವೆ. ಭಾರತೀಯ ಪ್ರಜೆಗಳಿಗೆ ರಾಜತಾಂತ್ರಿಕರ ಸಂಪರ್ಕಕ್ಕೆ ಅವಕಾಶ ಕಲ್ಪಿಸುವ ವಿಷಯವು ಇಂಡೋ-ಪಾಕ್ ಸಂಬಂಧಗಳ ದೃಷ್ಟಿಯಿಂದ ತನ್ನದೇ ಆದ ಸಂಕ್ಷಿಪ್ತ ಇತಿಹಾಸವನ್ನು ಹೊಂದಿದೆ.
ಬೇಹುಗಾರಿಕೆ ಮತ್ತು ಭಯೋತ್ಪಾದಕ ಚಟುವಟಿಕೆಗಳ ಆರೋಪದ ಮೇಲೆ 2016 ರಲ್ಲಿ ಪಾಕಿಸ್ತಾನ ಬಂಧಿಸಿದ್ದ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರಿಗೆ ಮಿಲಿಟರಿ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಭಾರತವು ಪದೇ ಪದೆ ವಿನಂತಿಸಿದರೂ ಈತನಿಗೆ ರಾಜತಾಂತ್ರಿಕರೊಂದಿಗೆ ಭೇಟಿ ಮಾಡುವ ಅವಕಾಶ ನೀಡಲಾಗಲಿಲ್ಲ.
ನಂತರ, ಭಾರತವು ಈ ವಿಷಯವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ (ಐಸಿಜೆ) ಕೊಂಡೊಯ್ದಿತು. ಅದು ಕುಲಭೂಷಣ್ ಜಾಧವ್ ಅವರಿಗೆ ರಾಜತಾಂತ್ರಿಕ ಸಂಪರ್ಕ ಕಲ್ಪಿಸುವಂತೆ ಇಸ್ಲಾಮಾಬಾದ್ಗೆ ನಿರ್ದೇಶನ ನೀಡಿದ್ದಲ್ಲದೇ ಅವರ ಮರಣದಂಡನೆ ಸಹ ರದ್ದುಗೊಳಿಸಿತ್ತು. ಜಾಧವ್ ಅವರನ್ನು ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸುವಂತೆ ಐಸಿಜೆ ಪಾಕಿಸ್ತಾನಕ್ಕೆ ನಿರ್ದೇಶನ ನೀಡಿತು. ಐಸಿಜೆ ಆದೇಶದ ನಂತರ, ಇಸ್ಲಾಮಾಬಾದ್ನಲ್ಲಿರುವ ಪಾಕಿಸ್ತಾನ ವಿದೇಶಾಂಗ ಕಚೇರಿಯ ಆವರಣದಲ್ಲಿ ಬಿಗಿ ಭದ್ರತೆಯಲ್ಲಿ ಜಾಧವ್ ಅವರನ್ನು ಭೇಟಿ ಮಾಡಲು ಭಾರತೀಯ ಅಧಿಕಾರಿಗಳಿಗೆ ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ : '1999ರಲ್ಲಿ ಪಾಕಿಸ್ತಾನ ಭಾರತದೊಂದಿಗಿನ ಶಾಂತಿ ಒಪ್ಪಂದ ಉಲ್ಲಂಘಿಸಿತ್ತು': ಕೊನೆಗೂ ಸತ್ಯ ಒಪ್ಪಿಕೊಂಡ ನವಾಜ್ ಷರೀಫ್ - Nawaz Sharif