ವೆಸ್ಟ್ ಫಾಮ್ ಬೀಚ್(ಫ್ಲೋರಿಡಾ): ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದಿಂದ ಎರಡನೇ ಬಾರಿ ಸ್ಪರ್ಧಿಸಿರುವ ಡೊನಾಲ್ಡ್ ಟ್ರಂಪ್ ಮೇಲೆ ಮತ್ತೊಂದು ಹತ್ಯೆ ಯತ್ನ ನಡೆದಿದೆ. ಭಾನುವಾರ ಫ್ಲೋರಿಡಾದ ಗಾಲ್ಫ್ ಕ್ಲಬ್ನಲ್ಲಿದ್ದ ಟ್ರಂಪ್ ಅವರತ್ತ ಗುಂಡಿನ ದಾಳಿ ನಡೆಸಲಾಗಿದ್ದು, ಅವರು ಜೀವಾಪಾಯದಿಂದ ಪಾರಾಗಿದ್ದಾರೆ.
"ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದೇವೆ. ಮಾಜಿ ಅಧ್ಯಕ್ಷರು ಆರೋಗ್ಯವಾಗಿದ್ದಾರೆ. ಯಾವುದೇ ಅಪಾಯವಿಲ್ಲ" ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುರಕ್ಷಿತವಾಗಿದ್ದೇನೆ- ಟ್ರಂಪ್: 'ನನ್ನ ಸಮೀಪದಲ್ಲಿ ಗುಂಡಿನ ದಾಳಿಗಳು ನಡೆದಿವೆ. ಆದರೆ ವದಂತಿಗಳಿಗೆ ಕಿವಿಗೊಡುವ ಮುನ್ನ ನಿಮಗೆ ಹೇಳ ಬಯಸುವುದೇನೆಂದರೆ, ನಾನು ಸುರಕ್ಷಿತ ಮತ್ತು ಚೆನ್ನಾಗಿದ್ದೇನೆ! ಯಾವುದೂ ನನ್ನನ್ನು ನಿಲ್ಲಿಸಲು ಸಾಧ್ಯವಾಗಿಲ್ಲ. ಎಂದಿಗೂ ನಾನು ಶರಣಾಗುವುದಿಲ್ಲ'! ಎಂದು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.
— Donald J. Trump Posts From His Truth Social (@TrumpDailyPosts) September 15, 2024
ಬಂದೂಕೂಧಾರಿ ಅರೆಸ್ಟ್: ಟ್ರಂಪ್ ಅವರು ಫ್ಲೋರಿಡಾದ ತಮ್ಮ ಗಾಲ್ಫ್ ಕ್ಲಬ್ನಲ್ಲಿ (ಸೆ.18ರಂದು) ಆಡುತ್ತಿದ್ದ ವೇಳೆ 400 ಗಜ ದೂರದಿಂದ AK ಶೈಲಿಯ ಬಂದೂಕಿನಿಂದ ದಾಳಿಕೋರ ಗುಂಡು ಹಾರಿಸಿದ್ದಾನೆ. ತಕ್ಷಣವೇ ಭದ್ರತಾ ಸಿಬ್ಬಂದಿಯೂ ಗುಂಡು ಹಾರಿಸಿದ್ದು ದಾಳಿಕೋರ ಗನ್, ಎರಡು ಬ್ಯಾಕ್ಪ್ಯಾಕ್, ಗುರಿ ಇಡಲು ಬಳಸಿದ ಸ್ಕೋಪ್ ಮತ್ತು ಗೋಪ್ರೊ ಕ್ಯಾಮೆರಾಗಳನ್ನು ಸ್ಥಳದಲ್ಲೇ ಬಿಟ್ಟು ಹೋಗಿದ್ದಾನೆ. ಬಳಿಕ ಕಾರ್ಯಾಚರಣೆ ನಡೆಸಿ ಪಕ್ಕದ ಪ್ರದೇಶದಲ್ಲಿ ಆತನನ್ನು ಬಂಧಿಸಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಎರಡು ತಿಂಗಳ ಹಿಂದೆ ನಡೆದ ದಾಳಿ ಬಳಿಕ ಭದ್ರತೆಯನ್ನು ಹೆಚ್ಚಿಸಲಾಗಿದೆ. ಟ್ರಂಪ್ ಆಟ ಆಡಲು ಬಂದಿದ್ದಾಗ ಫ್ಲೋರಿಡಾದ ಗಾಲ್ಫ್ ಕೋರ್ಸ್ ಭಾಗಶಃ ಬಂದ್ ಮಾಡಲಾಗಿರುತ್ತದೆ. ಆದರೆ ಕೆಲ ಕಡೆಗಳಲ್ಲಿ ಗಾಲ್ಫ್ ಕೋರ್ಸ್ನ ಗಡಿಯಲ್ಲಿ ನಿಂತು ಒಳಗಿರುವ ಆಟಗಾರರನ್ನು ವೀಕ್ಷಿಸಬಹುದು. ಇನ್ಮುಂದೆ ಇನ್ನಷ್ಟು ಭದ್ರತೆ ಹೆಚ್ಚಿಸಲಾಗುವುದು ಎಂದು ಪಾಮ್ ಬೀಚ್ ಭದ್ರತಾ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಜೋ ಬೈಡನ್ ಪ್ರತಿಕ್ರಿಯೆ: ಮಾಜಿ ಅಧ್ಯಕ್ಷರಿಗೆ ಯಾವುದೇ ತೊಂದರೆಯಾಗಿಲ್ಲ ಎಂಬುದನ್ನು ತಿಳಿದು ನಿರಾಳನಾಗಿದ್ದೇನೆ. ಕಾನೂನು ಜಾರಿ ಸಂಸ್ಥೆಗಳು ಘಟನೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದು, ತನಿಖೆ ನಡೆಯುತ್ತಿದೆ ಎಂದು ಅಧ್ಯಕ್ಷ ಜೋ ಬೈಡನ್ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
I am relieved that the former President is unharmed.
— President Biden (@POTUS) September 16, 2024
There is an active investigation into this incident as law enforcement gathers more details about what happened.
ಈ ಹಿಂದೆ ನಡೆದ ದಾಳಿ: ಜುಲೈ 13ರಂದು ಪೆನ್ಸಿಲ್ವೇನಿಯಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಗುಂಡು ಅವರ ಬಲಕಿವಿಯ ತುದಿ ಸವರಿಕೊಂಡು ಹೋಗಿತ್ತು. ಇದರಿಂದಾಗಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು.
ಅಮೆರಿಕ ಅಧ್ಯಕ್ಷೀಯ ಚುನಾವಣೆ ಯಾವಾಗ?: ನವೆಂಬರ್ 5ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಟ್ರಂಪ್ ಕಣಕ್ಕಿಳಿದಿದ್ದು, ಕಳೆದ ಎರಡು ತಿಂಗಳಿಂದ ಪ್ರಚಾರದಲ್ಲಿ ತೊಡಗಿದ್ದಾರೆ.