ವಾಷಿಂಗ್ಟನ್: ನವೆಂಬರ್ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಗೆದ್ದರೆ ರಷ್ಯಾ-ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವುದಾಗಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಅವರ ಈ ಹೇಳಿಕೆಯನ್ನು ತಿರಸ್ಕರಿಸಿದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್, ಮಾಜಿ ಅಧ್ಯಕ್ಷರು ಯುದ್ಧದಿಂದ ಹಿಂದೆ ಸರಿದು ಸೋಲೊಪ್ಪಿಕೊಳ್ಳುವುದನ್ನು ಬಿಟ್ಟು ಅವರ ಕೈಯಲ್ಲಿ ಏನೂ ಮಾಡಲಾಗದು ಎಂದು ವ್ಯಂಗ್ಯವಾಡಿದ್ದಾರೆ.
ನವೆಂಬರ್ 5ರಂದು ನಡೆಯಲಿರುವ ಯುಎಸ್ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಪೆನ್ಸಿಲ್ವೇನಿಯಾದಲ್ಲಿ ಮಂಗಳವಾರ ನಡೆದ ಮೊದಲ ಅಧ್ಯಕ್ಷೀಯ ಚರ್ಚೆಯಲ್ಲಿ ಉಪಾಧ್ಯಕ್ಷ ಹ್ಯಾರಿಸ್ ಅವರೊಂದಿಗೆ ಮಾತುಕತೆ ನಡೆಸಿದ ಟ್ರಂಪ್, ತಾವು ಅಧ್ಯಕ್ಷರಾಗಿದ್ದರೆ ಯುದ್ಧವೇ ನಡೆಯುತ್ತಿರಲಿಲ್ಲ ಎಂದರು.
"ನಾನು ಅಧ್ಯಕ್ಷರಾಗಿ ಆಯ್ಕೆಯಾದರೆ ಉಕ್ರೇನ್ ಮತ್ತು ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸುತ್ತೇನೆ. ಅಧ್ಯಕ್ಷನಾಗುವ ಮೊದಲೇ ಅದನ್ನು ಮಾಡಬಲ್ಲೆ" ಎಂದು 78 ವರ್ಷದ ಟ್ರಂಪ್ ಚರ್ಚೆಯ ಸಮಯದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
2017ರಿಂದ 2021ರವರೆಗೆ ತಾವು ಅಧ್ಯಕ್ಷರಾಗಿದ್ದ ನಾಲ್ಕು ವರ್ಷಗಳಲ್ಲಿ ಯಾವುದೇ ಯುದ್ಧದ ಬೆದರಿಕೆ ಇರಲಿಲ್ಲ ಎಂಬುದನ್ನು ಉಲ್ಲೇಖಿಸಿದ ಟ್ರಂಪ್, "ನನಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಬಗ್ಗೆ ಬಹಳ ಚೆನ್ನಾಗಿ ತಿಳಿದಿದೆ. ಅವರು ಉಕ್ರೇನ್ ಮೇಲೆ ದಾಳಿ ಮಾಡಿ ಲಕ್ಷಾಂತರ ಜನರನ್ನು ಕೊಲ್ಲುವ ಸಂದರ್ಭವೇ ಬರುತ್ತಿರಲಿಲ್ಲ. ನಾನು 4 ವರ್ಷ ಅಧಿಕಾರದಲ್ಲಿದ್ದಾಗ ಅಂಥ ಯಾವುದೇ ಸನ್ನಿವೇಶ ನಿರ್ಮಾಣವಾಗಲಿಲ್ಲ. ಆದರೆ ನಿಮ್ಮ ಕಾರಣದಿಂದಲೇ ಆ ಯುದ್ಧ ಆರಂಭವಾಗಿದ್ದು" ಎಂದು ಹೇಳಿದರು.
"ನನಗೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಬಗ್ಗೆ ಕೂಡ ಚೆನ್ನಾಗಿ ತಿಳಿದಿದೆ. ಜೊತೆಗೆ ಪುಟಿನ್ ಬಗ್ಗೆಯೂ ಗೊತ್ತು. ಇಬ್ಬರೊಂದಿಗೂ ನನಗೆ ಉತ್ತಮ ಸಂಬಂಧವಿದೆ. ಅವರು ನನ್ನನ್ನು ಗೌರವಿಸುತ್ತಾರೆ. ಆದರೆ ಅವರು ಹಾಲಿ ಅಧ್ಯಕ್ಷ ಜೋ ಬೈಡನ್ ಅವರನ್ನು ಗೌರವಿಸುವುದಿಲ್ಲ" ಎಂದು ಟ್ರಂಪ್ ತಿಳಿಸಿದರು.
"ಅಷ್ಟಕ್ಕೂ ಬೈಡನ್ ಅವರನ್ನು ಯಾರಾದರೂ ಗೌರವಿಸುವುದಾದರೂ ಹೇಗೆ ಸಾಧ್ಯ? ಕಳೆದ ಎರಡು ವರ್ಷಗಳಿಂದ ಅವರು ಪುಟಿನ್ಗೆ ಒಂದೇ ಒಂದು ಬಾರಿ ಕರೆ ಮಾಡಿಲ್ಲ. ಈ ಯುದ್ಧ ತಕ್ಷಣ ನಿಲ್ಲುವುದು ಅನಿವಾರ್ಯ. ನಾನು ಚುನಾವಣೆಯಲ್ಲಿ ಗೆದ್ದರೂ ಸಾಕು, ಅಧ್ಯಕ್ಷ ಹುದ್ದೆ ವಹಿಸಿಕೊಳ್ಳುವ ಮೊದಲೇ ಯುದ್ಧವನ್ನು ಕೊನೆಗಾಣಿಸುತ್ತೇನೆ" ಎಂದು ಟ್ರಂಪ್ ಹೇಳಿದರು.
ಟ್ರಂಪ್ ಮಾತುಗಳನ್ನು ಒಪ್ಪದ ಕಮಲಾ ಹ್ಯಾರಿಸ್, "ಅವರು ಅಧ್ಯಕ್ಷರಾದರೆ ಅಮೆರಿಕವು ಉಕ್ರೇನ್ಗೆ ನೀಡುತ್ತಿರುವ ಬೆಂಬಲವನ್ನು ಹಿಂಪಡೆಯುತ್ತಾರೆ ಮತ್ತು ಅದೇ ಕಾರಣದಿಂದ 24 ಗಂಟೆಗಳಲ್ಲಿ ಯುದ್ಧ ಕೊನೆಗೊಳ್ಳಲಿದೆ ಎಂದು ಅವರು ಹೇಳುತ್ತಿದ್ದಾರೆ" ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಜೋರ್ಡಾನ್ ಗಡಿ ಕ್ರಾಸಿಂಗ್ನಲ್ಲಿ ಗುಂಡಿಕ್ಕಿ 3 ಇಸ್ರೇಲಿಗರ ಹತ್ಯೆ - Israelis Killed By Gunman