ಅಮ್ಮಾನ್ (ಜೋರ್ಡಾನ್): ಗಾಜಾದಲ್ಲಿ ಯುದ್ಧ ಭುಗಿಲೆದ್ದಾಗ ಪ್ಯಾಲೆಸ್ಟೈನ್ ಕಲಾವಿದರು ತಾವು ರಚಿಸಿದ ಸಂಘರ್ಷದ ಭಯಾನಕ ವಾಸ್ತವ ವ್ಯಕ್ತಪಡಿಸುವ ಚಿತ್ರಗಳನ್ನು ಈ ಪ್ರದೇಶದಿಂದ ರಹಸ್ಯವಾಗಿ ಹೊರದೇಶಗಳಿಗೆ ಕಳುಹಿಸುವ ಮೂಲಕ ಅಲ್ಲಿನ ಜನರ ಸಂಕಷ್ಟಗಳನ್ನು ಜಗತ್ತಿನ ಎದುರು ಅನಾವರಣಗೊಳಿಸಿದ್ದಾರೆ.
ಆರು ತಿಂಗಳ ಕಾಲ ಪ್ಯಾಲೆಸ್ಟೈನ್ ಕಲಾವಿದರು ಈಜಿಪ್ಟ್ನೊಂದಿಗೆ ಹೊಂದಿಕೊಂಡಿರುವ ರಾಫಾ ಗಡಿ ದಾಟಿ ಗಾಜಾದಿಂದ ಹೊರಹೋಗುವ ಜನರ ಕೈಗೆ ತಮ್ಮ ವರ್ಣಚಿತ್ರಗಳು ಮತ್ತು ಇತರ ಕಲಾಕೃತಿಗಳನ್ನು ನೀಡಿ ಅವನ್ನು ಹೊರದೇಶಗಳಿಗೆ ಸಾಗಿಸಿದ್ದಾರೆ. ಮೇ ತಿಂಗಳಲ್ಲಿ ಇಸ್ರೇಲಿ ಪದಾತಿ ದಳದ ಯೋಧರು ಗಡಿ ನಿಯಂತ್ರಣಕ್ಕೆ ತೆಗೆದುಕೊಂಡು ಅದನ್ನು ಮುಚ್ಚಿದ ನಂತರ ಅದೂ ಕೂಡ ನಿಂತು ಹೋಯಿತು.
"ವರ್ಣಚಿತ್ರಗಳು ಯುದ್ಧ ಮತ್ತು ಹತ್ಯಾಕಾಂಡಗಳ ಕ್ರೌರ್ಯ ದಾಖಲಿಸಿವೆ. ನೋವು ಮತ್ತು ದುಃಖವನ್ನು ಅನಾವರಣಗೊಳಿಸುತ್ತವೆ. ಅಲ್ಲದೆ ಅವು ಕಲಾವಿದನ ದೃಢ ಸಂಕಲ್ಪವನ್ನೂ ಬಿಂಬಿಸುತ್ತವೆ" ಎಂದು ಮೊಹಮ್ಮದ್ ಶಕ್ದಿಹ್ ಹೇಳಿದರು.
ಮೊಹಮ್ಮದ್ ಶಕ್ದಿಹ್ ಜೋರ್ಡಾನ್ ರಾಜಧಾನಿ ಅಮ್ಮಾನ್ ನಲ್ಲಿರುವ ದಾರತ್ ಅಲ್ - ಫುನುನ್ ಎಂಬ ಕಲಾ ಗ್ಯಾಲರಿಯ ಉಪ ನಿರ್ದೇಶಕರಾಗಿದ್ದು, "ಅಂಡರ್ ಫೈರ್" ಹೆಸರಿನ ಪ್ರದರ್ಶನದಲ್ಲಿ ಕಳ್ಳಸಾಗಣೆ ಮಾಡಿ ತರಲಾದ ಕಲಾಕೃತಿಗಳನ್ನು ಪ್ರದರ್ಶಿಸುತ್ತಾರೆ. ಈ ಕೃತಿಗಳು ಸ್ವತಃ ಯುದ್ಧ ಪೀಡಿತ ಪ್ರದೇಶದಿಂದ ಹೊರಬರುವಲ್ಲಿ ಯಶಸ್ವಿಯಾದರೂ, ಅವುಗಳನ್ನು ರಚಿಸಿದ ನಾಲ್ವರು ಕಲಾವಿದರಾದ ಬಾಸೆಲ್ ಅಲ್-ಮಕೌಸಿ, ರಯೆದ್ ಇಸಾ, ಮಜೀದ್ ಶಾಲಾ ಮತ್ತು ಸುಹೇಲ್ ಸಲೇಂ ಅಷ್ಟು ಅದೃಷ್ಟಶಾಲಿಗಳಾಗಿರಲಿಲ್ಲ.
ಹಮಾಸ್ ಆಡಳಿತ ಇರುವ ಪ್ರದೇಶದ ಆರೋಗ್ಯ ಸಚಿವಾಲಯದ ಪ್ರಕಾರ, ಇಸ್ರೇಲ್ನ ಮಿಲಿಟರಿ ಕಾರ್ಯಾಚರಣೆಯಲ್ಲಿ ಈವರೆಗೆ 43,500 ಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದಾರೆ. ಮೃತರಲ್ಲಿ ಹೆಚ್ಚಾಗಿ ನಾಗರಿಕರೇ ಇದ್ದು, ಇಡೀ ಪ್ರದೇಶದಲ್ಲಿ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಕಲಾಕೃತಿಗಳು "ಯುದ್ಧದ ದೈನಂದಿನ ವಾಸ್ತವತೆಗಳನ್ನು ಮತ್ತು ಸ್ಥಳಾಂತರಗೊಂಡ ಮತ್ತು ತಮ್ಮ ಮನೆಗಳನ್ನು ಕಳೆದುಕೊಂಡ ಈ ಕಲಾವಿದರು ಅನುಭವಿಸುವ ಕಷ್ಟಗಳನ್ನು ಚಿತ್ರಿಸಿವೆ" ಎಂದು ಶಕ್ದಿಹ್ ಹೇಳಿದರು.
ಅಕ್ಟೋಬರ್ 7, 2023 ರಂದು ಪ್ಯಾಲೆಸ್ಟೈನ್ ಉಗ್ರಗಾಮಿ ಗುಂಪು ಹಮಾಸ್ ದಕ್ಷಿಣ ಇಸ್ರೇಲ್ ಮೇಲೆ ದಾಳಿ ನಡೆಸಿ ನಂತರ ಯುದ್ಧ ಪ್ರಾರಂಭವಾಗುವ ಮೊದಲಿನಿಂದಲೂ ಗ್ಯಾಲರಿಯಲ್ಲಿ ಆ ಎಲ್ಲ ಕಲಾವಿದರ ಕಲಾಕೃತಿಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಅವರು ಹೇಳಿದರು.
'ದುಃಸ್ವಪ್ನಗಳು': ಇಸ್ರೇಲ್ ಮೇಲೆ ನಡೆದ ಅಂದಿನ ದಾಳಿಯಲ್ಲಿ 1,206 ಜನರು ಸಾವನ್ನಪ್ಪಿದ್ದರು. ಇದರಲ್ಲಿ ಹೆಚ್ಚಿನವರು ನಾಗರಿಕರು ಎಂದು ಇಸ್ರೇಲಿ ಅಧಿಕೃತ ಅಂಕಿ- ಅಂಶಗಳು ತಿಳಿಸಿವೆ.
"ಕಲೆಯ ಭಾಷೆ ಸಾರ್ವತ್ರಿಕವಾಗಿದೆ. ಈ ವರ್ಣಚಿತ್ರಗಳ ಮೂಲಕ, ನಾವು ನಮ್ಮ ಧ್ವನಿ, ನಮ್ಮ ಅಳು, ನಮ್ಮ ಕಣ್ಣೀರು ಮತ್ತು ನಾವು ಪ್ರತಿದಿನ ನೋಡುವ ದುಃಸ್ವಪ್ನಗಳನ್ನು ಹೊರ ಜಗತ್ತಿಗೆ ತಿಳಿಸಲು ಪ್ರಯತ್ನಿಸುತ್ತಿದ್ದೇವೆ " ಎಂದು 53 ವರ್ಷದ ಮಕೌಸಿ ಗಾಜಾದಿಂದ ದೂರವಾಣಿ ಮೂಲಕ ಎಎಫ್ಪಿಗೆ ತಿಳಿಸಿದರು.
ನೈಸರ್ಗಿಕ ವರ್ಣದ್ರವ್ಯಗಳನ್ನು ಬಳಸಿಕೊಂಡು ಕಲಾಕೃತಿಗಳ ರಚನೆ: ಪ್ರದರ್ಶನದಲ್ಲಿ ದಾಸವಾಳ, ದಾಳಿಂಬೆ ಮತ್ತು ಚಹಾದಿಂದ ತಯಾರಿಸಿದ ನೈಸರ್ಗಿಕ ವರ್ಣದ್ರವ್ಯಗಳನ್ನು ಬಳಸಿಕೊಂಡು ಔಷಧಿ ಹೊದಿಕೆಗಳು ಸೇರಿದಂತೆ ಸುಧಾರಿತ ವಸ್ತುಗಳಿಂದ ರಚಿಸಲಾದ 79 ಕಲಾಕೃತಿಗಳನ್ನು ಗ್ಯಾಲರಿಯಲ್ಲಿ ಪ್ರದರ್ಶಿಸಲಾಗಿದೆ. ಬಾಂಬ್ ದಾಳಿಗೊಳಗಾದ ಜನರು, ಕತ್ತೆ ಎಳೆಯುವ ಗಾಡಿಗಳಲ್ಲಿ ಸ್ಥಳಾಂತರಗೊಂಡ ಕುಟುಂಬಗಳು, ತಾತ್ಕಾಲಿಕ ಡೇರೆಗಳು, ದಣಿದ ಮತ್ತು ಭಯಭೀತ ಮುಖಗಳು, ತಾಯಂದಿರಿಗೆ ಅಂಟಿಕೊಂಡಿರುವ ದುರ್ಬಲ ಮಕ್ಕಳು ಮತ್ತು ಮಿಲಿಟರಿ ವಾಹನಗಳಿಂದ ಸುತ್ತುವರಿದ ಕಣ್ಣುಮುಚ್ಚಿದ ಪುರುಷರನ್ನು ರೇಖಾಚಿತ್ರಗಳು ತೋರಿಸುತ್ತವೆ.
"ನಾನು ಬಣ್ಣಗಳು ಮತ್ತು ದುಬಾರಿ ವರ್ಣದ್ರವ್ಯಗಳಿಂದ ಚಿತ್ರಿಸಲು ಸಾಧ್ಯವಿಲ್ಲ. ಗಾಜಾದಲ್ಲಿ ಆಹಾರ, ಪಾನೀಯ ಮತ್ತು ನನಗೆ ಮತ್ತು ನನ್ನ ಕುಟುಂಬದ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದೇ ದುಸ್ತರವಾಗಿದೆ." ಎಂದು ಕಲಾವಿದ ಸುಹೇಲ್ ಸಲೇಂ ಹೇಳಿದರು. ಇವರು ಬಾಲ್ ಪಾಯಿಂಟ್ ಪೆನ್ನುಗಳಿಂದ ಶಾಲಾ ನೋಟ್ ಬುಕ್ಗಳಲ್ಲಿ ರೇಖಾಚಿತ್ರಗಳನ್ನು ಬಿಡಿಸಿದ್ದಾರೆ.
ತನ್ನ ಕೆಲಸದ ಜೊತೆಗೆ ಪ್ರದರ್ಶಿಸಲಾದ ಪತ್ರದಲ್ಲಿ, ಮಜೀದ್ ಶಾಲಾ ಅವರು ದಕ್ಷಿಣದ ನಗರವಾದ ದೇರ್ ಅಲ್-ಬಾಲಾಹ್ ಗೆ ಹೇಗೆ ಸ್ಥಳಾಂತರಗೊಂಡರು ಎಂಬುದನ್ನು ವಿವರಿಸಿದ್ದಾರೆ. ಅವರ ಮನೆ, ಸ್ಟುಡಿಯೋ ಮತ್ತು 30 ವರ್ಷಗಳ ಕಲಾಕೃತಿಗಳು ಸಂಪೂರ್ಣವಾಗಿ ನಾಶವಾಗಿವೆ. "ಯುದ್ಧವು ಮೊದಲು ಪ್ರಾರಂಭವಾದಾಗ, ನಾನು ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ಒಳಗಾಗಿದ್ದೆ. ಕಲಾಕೃತಿಯನ್ನು ರಚಿಸಲು ಅಥವಾ ಅದರ ಬಗ್ಗೆ ಯೋಚಿಸಲು ಸಾಧ್ಯವಾಗಲಿಲ್ಲ" ಎಂದು ಅವರು ಬರೆದಿದ್ದಾರೆ.
ಸಮಯ ಕಳೆದಂತೆ, "ನಮ್ಮ ದೈನಂದಿನ ಜೀವನದ ಪ್ರತಿಯೊಂದು ಭಾಗದ ಮೇಲೆ ಪರಿಣಾಮ ಬೀರಿದ ಸ್ಥಳಾಂತರ ಮತ್ತು ದೇಶಭ್ರಷ್ಟತೆಯ ನಿಜ ಜೀವನದ ದೃಶ್ಯಗಳನ್ನು ನಾನು ದಾಖಲಿಸಲು ಪ್ರಾರಂಭಿಸಿದೆ" ಎಂದು ಅವರು ಹೇಳಿದರು. ವಿನಾಶದ ದೃಶ್ಯದ ನಡುವೆ ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ಅಪ್ಪಿಕೊಳ್ಳುವ ವರ್ಣಚಿತ್ರದ ಪಕ್ಕದಲ್ಲಿ ಇವರ ಮಾತುಗಳನ್ನು ಪ್ರದರ್ಶಿಸಲಾಗಿದೆ.
"ಈ ದೃಶ್ಯಗಳು 1948 ರ ನಕ್ಬಾ ಅಥವಾ "ದುರಂತ" ಬಗ್ಗೆ ನಮ್ಮ ಹಿರಿಯರು ನಮಗೆ ಹೇಳಿದ ಕಥೆಗಳನ್ನು ನೆನಪಿಸುತ್ತವೆ" ಎಂದು ಅವರು ಬರೆದಿದ್ದಾರೆ. ಇಸ್ರೇಲ್ ರಚನೆಗೆ ಕಾರಣವಾದ ಯುದ್ಧದ ಸಮಯದಲ್ಲಿ ಸುಮಾರು 7,60,000 ಪ್ಯಾಲೆಸ್ಟೈನಿಯರು ಸ್ಥಳಾಂತರಗೊಂಡಿದ್ದರು. ಆ ಘಟನೆಯನ್ನು ನಕ್ಬಾ ಎಂದು ಕರೆಯಲಾಗುತ್ತದೆ.
"ಆದರೆ ಈಗಿನ ನಮ್ಮ ಬದುಕು ಅದಕ್ಕಿಂತಲೂ ಘೋರವಾಗಿದೆ." ಎಂದು ಗ್ಯಾಲರಿಗೆ ಸಂದರ್ಶಕನಾಗಿ ಬಂದ 37 ವರ್ಷದ ಎಂಜಿನಿಯರ್ ವಿಕ್ಟೋರಿಯಾ ಡಬ್ ಡೌಬ್ ಅವರು ಹೇಳಿದರು.
"ಗಾಜಾ ಜನರ ನೋವು, ದುಃಖ ಮತ್ತು ಸಂಕಟವನ್ನು ಜನರ ಮುಂದೆ ಅನಾವರಣಗೊಳಿಸಲು ಈ ರೀತಿಯ ಕೃತಿಗಳನ್ನು ವಿಶ್ವಾದ್ಯಂತ ಹಂಚಿಕೊಳ್ಳುವುದು ಮುಖ್ಯ" ಎಂದು ಅವರು ಎಎಫ್ಪಿಗೆ ತಿಳಿಸಿದರು. ಹತ್ತಿರದ ಗೋಡೆಯ ಮೇಲೆ ಕಲಾವಿದ ರೇಡ್ ಇಸಾ ಅವರ ಸಂದೇಶವನ್ನು ಪೋಸ್ಟ್ ಮಾಡಲಾಗಿದೆ: "ನಾವು ನಿಮಗೆ ಭರವಸೆ ನೀಡುತ್ತೇವೆ: ನಾವು ಹೇಗಿದ್ದೇವೆ ಎಂದು ನೀವು ಕೇಳಿದರೆ, ನಮ್ಮ ಸ್ಥಿತಿ ಚೆನ್ನಾಗಿಲ್ಲ.! ಹಗಲು -ರಾತ್ರಿ ಎನ್ನದೆ ನಿರಂತರ ಬಾಂಬ್ ದಾಳಿ ಮತ್ತು ಭಯೋತ್ಪಾದನೆ ನಡೆಯುತ್ತಿವೆ! ಗಾಜಾ ಶೋಕದಲ್ಲಿದೆ, ದೇವರ ಪರಿಹಾರಕ್ಕಾಗಿ ಕಾಯುತ್ತಿದೆ!"
ಇದನ್ನೂ ಓದಿ : 'ಎಲ್ಲ ಕಪೋಲ ಕಲ್ಪಿತ.. ಟ್ರಂಪ್ - ಪುಟಿನ್ ಮಧ್ಯೆ ಚರ್ಚೆ ನಡೆದಿಲ್ಲ': ರಷ್ಯಾ ಸ್ಪಷ್ಟನೆ