ಪ್ಯಾರಿಸ್: ವಿಶ್ವದ ಜನಪ್ರಿಯ ಎನ್ಕ್ರಿಪ್ಟೆಡ್ ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್ನ ಸ್ಥಾಪಕ ಹಾಗೂ ಮಾಲೀಕ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್ನಲ್ಲಿ ಬಂಧಿಸಲಾಗಿದೆ. ಡುರೊವ್ ವಿರುದ್ಧ ಹೊರಿಸಲಾಗಿರುವ ಆರೋಪಗಳು ಸಾಬೀತಾದಲ್ಲಿ ಅವರಿಗೆ 20 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಗಳಿವೆ.
ವಿವಿಧ ವರದಿಗಳ ಪ್ರಕಾರ, ಸುಮಾರು 900 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ಟೆಲಿಗ್ರಾಮ್ನಲ್ಲಿ ಕ್ರಿಮಿನಲ್ ಚಟುವಟಿಕೆ ಹರಡಲು ಅವಕಾಶ ಮಾಡಿಕೊಟ್ಟಿರುವ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಸದ್ಯ ಟೆಲಿಗ್ರಾಮ್ ದುಬೈ ಮೂಲದಿಂದ ಕಾರ್ಯಾಚರಣೆ ನಡೆಸುತ್ತಿದ್ದು, ಬಿಲಿಯನೇರ್ ಆಗಿರುವ ಡುರೊವ್ ಫ್ರಾನ್ಸ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ನ ದ್ವಿ ಪೌರತ್ವವನ್ನು ಹೊಂದಿದ್ದಾರೆ. ಅವರು ಹೆಚ್ಚಾಗಿ ದುಬೈನಲ್ಲಿ ವಾಸಿಸುತ್ತಾರೆ.
ಕನಿಷ್ಠ 15.5 ಬಿಲಿಯನ್ ಡಾಲರ್ ಸಂಪತ್ತಿನ ಒಡೆಯನಾಗಿರುವ ಉದ್ಯಮಿ ರಷ್ಯಾದಲ್ಲಿ ವಿಕಾಂಟ್ಯಾಕ್ಟೆ (VKontakte) ಹೆಸರಿನ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಆರಂಭಿಸಿದ್ದರು. ಆದರೆ ಪ್ಲಾಟ್ಫಾರ್ಮ್ನಲ್ಲಿ ಸರ್ಕಾರ ವಿರೋಧಿ ಸಮುದಾಯಗಳನ್ನು ನಿಷೇಧಿಸಬೇಕೆಂಬ ರಷ್ಯನ್ ಸರ್ಕಾರದ ಆದೇಶವನ್ನು ಒಪ್ಪದ ಅವರು 2014ರಲ್ಲಿ ರಷ್ಯಾವನ್ನು ತೊರೆದಿದ್ದರು.
ಆಗಸ್ಟ್ 25 ರ ಹೊತ್ತಿಗೆ, ಡುರೊವ್ ವಿಶ್ವದ 120 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. 2022 ರಲ್ಲಿ, ಫೋರ್ಬ್ಸ್ ನಿಯತಕಾಲಿಕವು ಅವರನ್ನು ಯುಎಇಯ ಅತ್ಯಂತ ಶ್ರೀಮಂತ ವಲಸಿಗ ಎಂದು ಗುರುತಿಸಿದೆ.
ವರದಿಗಳ ಪ್ರಕಾರ, ರಷ್ಯಾವನ್ನು ತೊರೆದ ನಂತರ ಅವರು ಸೇಂಟ್ ಕಿಟ್ಸ್ ಮತ್ತು ನೆವಿಸ್ ದೇಶದ ಸಕ್ಕರೆ ಉದ್ಯಮದ ಬೆಳವಣಿಗೆ ಫೌಂಡೇಶನ್ಗೆ $2,50,000 ದೇಣಿಗೆ ನೀಡುವ ಮೂಲಕ ಆ ದೇಶದ ಪೌರತ್ವ ಪಡೆದುಕೊಂಡಿದ್ದರು. ಅಲ್ಲದೆ ಸ್ವಿಸ್ ಬ್ಯಾಂಕುಗಳಲ್ಲಿ ಅವರು 300 ಮಿಲಿಯನ್ ಡಾಲರ್ನಷ್ಟು ಹಣವನ್ನು ಇಟ್ಟಿದ್ದಾರೆ.
ಇದು ಅವರಿಗೆ ತಮ್ಮ ಮುಂದಿನ ಕಂಪನಿಯಾದ ಟೆಲಿಗ್ರಾಮ್ ಅನ್ನು ರಚಿಸಲು ಅನುವು ಮಾಡಿಕೊಟ್ಟಿತು. ಜನವರಿ 2018 ರಲ್ಲಿ, ಟೆಲಿಗ್ರಾಮ್ನ ಯಶಸ್ಸಿನಿಂದ ಆದಾಯ ಪಡೆಯುವ ನಿಟ್ಟಿನಲ್ಲಿ ಅವರು "ಗ್ರಾಮ್" ಕ್ರಿಪ್ಟೋಕರೆನ್ಸಿ ಮತ್ತು ಟಿಒಎನ್ ಪ್ಲಾಟ್ ಫಾರ್ಮ್ ಅನ್ನು ಪ್ರಾರಂಭಿಸುತ್ತಿರುವುದಾಗಿ ಘೋಷಿಸಿದರು. ಇದು ಹೂಡಿಕೆದಾರರಿಂದ ಒಟ್ಟು 1.7 ಬಿಲಿಯನ್ ಡಾಲರ್ ಸಂಗ್ರಹಿಸಿದೆ.
ಆದಾಗ್ಯೂ, ಅವರ ಕ್ರಿಪ್ಟೋ ಉದ್ಯಮಗಳನ್ನು ಯುಎಸ್ ಕಾನೂನು ನಿಯಂತ್ರಕ ಪ್ರಾಧಿಕಾರವು ನಿಷೇಧಿಸಿತು. ರಷ್ಯಾದ ಭದ್ರತಾ ಪಡೆಗಳೊಂದಿಗೆ ಸಹಕರಿಸಲು ಕಂಪನಿಯು ನಿರಾಕರಿಸಿದ ನಂತರ 2018 ರಲ್ಲಿ ಟೆಲಿಗ್ರಾಮ್ ಅನ್ನು ನಿರ್ಬಂಧಿಸಲು ರಷ್ಯಾ ಪ್ರಯತ್ನಿಸಿತ್ತು.
ಪ್ಯಾರಿಸ್ ಹೊರವಲಯದ ಲೆ ಬೌರ್ಗೆಟ್ ವಿಮಾನ ನಿಲ್ದಾಣದಲ್ಲಿ ಡುರೊವ್ ತನ್ನ ಖಾಸಗಿ ಜೆಟ್ನಿಂದ ಇಳಿಯುತ್ತಿದ್ದಂತೆಯೇ ಫ್ರಾನ್ಸ್ನ ವಂಚನೆ ನಿಗ್ರಹ ದಳ ಕಚೇರಿಯಿಂದ ಬಂಧಿಸಲ್ಪಟ್ಟರು. ಪ್ರಾಥಮಿಕ ತನಿಖೆಯ ಭಾಗವಾಗಿ ಫ್ರೆಂಚ್ ರಾಷ್ಟ್ರೀಯ ನ್ಯಾಯಾಂಗ ಪೊಲೀಸರು ಹೊರಡಿಸಿದ ಬಂಧನ ವಾರಂಟ್ ಆಧಾರದ ಮೇಲೆ ಅವರನ್ನು ವಶಕ್ಕೆ ಪಡೆಯಲಾಗಿದೆ.
ಅವರು ಭಾನುವಾರ ನ್ಯಾಯಾಲಯಕ್ಕೆ ಹಾಜರಾಗುವ ನಿರೀಕ್ಷೆಯಿದೆ. ಅವರ ಮೇಲಿನ ಆರೋಪ ಸಾಬೀತಾದರೆ 20 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆ ಇದೆ. ಟೆಲಿಗ್ರಾಮ್ ಈ ಬೆಳವಣಿಗೆಯ ಬಗ್ಗೆ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಏತನ್ಮಧ್ಯೆ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಫ್ರಾನ್ಸ್ನಲ್ಲಿರುವ ರಷ್ಯಾದ ರಾಯಭಾರ ಕಚೇರಿ ಮುಂದಾಗಿದೆ.
ಡುರೊವ್ ಮತ್ತು ಅವರ ಸಹೋದರ ನಿಕೋಲಾಯ್ 2013 ರಲ್ಲಿ ಮೆಸೇಜಿಂಗ್ ಅಪ್ಲಿಕೇಶನ್ ಟೆಲಿಗ್ರಾಮ್ ಅನ್ನು ಸ್ಥಾಪಿಸಿದರು ಮತ್ತು ಇದು ಸುಮಾರು 900 ಮಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿದೆ.
ಇದನ್ನೂ ಓದಿ : ಅನಿಲ್ ಅಂಬಾನಿ ಸೇರಿ 24 ಕಂಪನಿಗಳಿಗೆ ಷೇರು ಮಾರುಕಟ್ಟೆಯಿಂದ 5 ವರ್ಷ ನಿಷೇಧ - SEBI Bars Anil Ambani