ಕಾಬೂಲ್: ಅಫ್ಘಾನಿಸ್ತಾನಕ್ಕೆ ರಷ್ಯಾ ಅಧ್ಯಕ್ಷರ ವಿಶೇಷ ಪ್ರತಿನಿಧಿ ಝಮೀರ್ ಕಾಬುಲೋವ್ ಆಗಮಿಸಿದ್ದು, ಅಫ್ಘಾನಿಸ್ತಾನ ಸರ್ಕಾರದ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದಾರೆ. ಅಫ್ಘಾನಿಸ್ತಾನದ ಉಪ ಪ್ರಧಾನಿ ಅಬ್ದುಲ್ ಕಬೀರ್, ವಿದೇಶಾಂಗ ವ್ಯವಹಾರಗಳ ಸಚಿವ ಅಮೀರ್ ಖಾನ್ ಮುತ್ತಾಕಿ ಮತ್ತು ಆಂತರಿಕ ವ್ಯವಹಾರಗಳ ಹಂಗಾಮಿ ಸಚಿವ ಸಿರಾಜುದ್ದೀನ್ ಹಕ್ಕಾನಿ ಕೂಡ ಸಭೆಯಲ್ಲಿ ಹಾಜರಿದ್ದರು.
"ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪ್ರಾದೇಶಿಕ ರಾಜಕೀಯ ಮತ್ತು ಭದ್ರತಾ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು" ಎಂದು ಅಫ್ಘಾನ್ ಆಂತರಿಕ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ವೈವಿಧ್ಯಮಯ ದ್ವಿಪಕ್ಷೀಯ ಸಹಕಾರದ ಅಭಿವೃದ್ಧಿ ಮತ್ತು ಮಾಸ್ಕೋದ ದೃಷ್ಟಿಕೋನದಲ್ಲಿ ಅಫ್ಘಾನಿಸ್ತಾನದೊಂದಿಗೆ ಪ್ರಾದೇಶಿಕ ಸಹಕಾರವನ್ನು ಸ್ಥಾಪಿಸುವುದು ಕಾಬುಲೋವ್ ಅವರ ಕಾಬೂಲ್ ಚರ್ಚೆಯ ಮುಖ್ಯ ವಿಷಯಗಳಾಗಿದ್ದವು ಎಂದು ಮಾಸ್ಕೋ ಹೇಳಿದೆ.
"ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಕಾಲ ಬೀಡುಬಿಟ್ಟಿದ್ದ ಯುಎಸ್ ಮತ್ತು ಅದರ ಮಿತ್ರರಾಷ್ಟ್ರಗಳ ಸೇನಾಪಡೆಗಳು ಹಿಂದೆ ಸರಿದ ನಂತರ ಅಫ್ಘಾನಿಸ್ತಾನ ಎದುರಿಸಿದ ಬಿಕ್ಕಟ್ಟಿಗೆ ಆ ದೇಶಗಳ ಜವಾಬ್ದಾರಿಯ ಬಗ್ಗೆ ಚರ್ಚಿಸಲಾಯಿತು. ದೇಶದ ರಾಷ್ಟ್ರೀಯ ಸ್ವತ್ತುಗಳನ್ನು ತಕ್ಷಣ ಮತ್ತು ಬೇಷರತ್ತಾಗಿ ಅಫ್ಘಾನಿಸ್ತಾನದ ಸೆಂಟ್ರಲ್ ಬ್ಯಾಂಕ್ಗೆ ವರ್ಗಾಯಿಸುವ ಅಗತ್ಯವನ್ನು ಒತ್ತಿಹೇಳಲಾಯಿತು. ಜೊತೆಗೆ ಈ ದೇಶದ ವಿರುದ್ಧದ ಎಲ್ಲಾ ಕಾನೂನುಬಾಹಿರ ಏಕಪಕ್ಷೀಯ ನಿರ್ಬಂಧಗಳನ್ನು ತೆಗೆದುಹಾಕುವ ಅಗತ್ಯವನ್ನು ಚರ್ಚಿಸಲಾಯಿತು" ಎಂದು ರಷ್ಯಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.
ತಾಲಿಬಾನ್ಗೆ ವಿಶ್ವಸಂಸ್ಥೆಯಲ್ಲಿ ಅಫ್ಘಾನಿಸ್ತಾನದ ಪ್ರತಿನಿಧಿ ಸ್ಥಾನ ನೀಡಬೇಕೆಂದು ಚರ್ಚೆಯ ಸಮಯದಲ್ಲಿ ಅಫ್ಘಾನಿಸ್ತಾನದ ಉಪ ಪ್ರಧಾನಿ ಅಬ್ದುಲ್ ಕಬೀರ್ ಬೇಡಿಕೆ ಇಟ್ಟಿದ್ದಾರೆ ಮತ್ತು ಅಫ್ಘಾನಿಸ್ತಾನಕ್ಕೆ ಯುಎನ್ ತನ್ನ ವಿಶೇಷ ರಾಯಭಾರಿ ನೇಮಿಸುವುದನ್ನು ವಿರೋಧಿಸಿದ್ದಾರೆ ಎಂದು ಕಾಬೂಲ್ನ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಅಫ್ಘಾನಿಸ್ತಾನಕ್ಕೆ ಮಾನವ ಹಕ್ಕುಗಳು ಮತ್ತು ಲಿಂಗತ್ವ ಸಮಾನತೆಯ ಬಗ್ಗೆ ಪರಿಣತಿಯನ್ನು ಹೊಂದಿದ ವಿಶೇಷ ರಾಯಭಾರಿಯನ್ನು ನೇಮಿಸುವಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಡಿಸೆಂಬರ್ನಲ್ಲಿ ಪ್ರಧಾನ ಕಾರ್ಯದರ್ಶಿಯನ್ನು ವಿನಂತಿಸುವ ನಿರ್ಣಯವೊಂದನ್ನು ಅಂಗೀಕರಿಸಿತ್ತು. ಅಲ್ಲದೆ ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ನೆರವು ಮಿಷನ್ (ಯುಎನ್ಎಎಂಎ) ನಿರಂತರವಾಗಿ ಕೆಲಸ ಮಾಡುವುದು ಅಗತ್ಯವಾಗಿದೆ ಎಂದು ಭದ್ರತಾ ಮಂಡಳಿ ಹೇಳಿತ್ತು. ಮಂಗಳವಾರ ನಡೆದ ಭದ್ರತಾ ಮಂಡಳಿಯ ಮುಕ್ತ ಚರ್ಚೆಯಲ್ಲಿ ಅಫ್ಘಾನಿಸ್ತಾನದಲ್ಲಿ ಲೈಂಗಿಕ ಹಿಂಸಾಚಾರದಿಂದ ಮಹಿಳೆಯರನ್ನು ರಕ್ಷಿಸುವ ಕುರಿತು ಅನೇಕ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಧ್ವನಿ ಎತ್ತಿದ್ದಾರೆ.
ಇದನ್ನೂ ಓದಿ : ಟಿಕ್ ಟಾಕ್ ನಿಷೇಧಿಸುವ ಮಸೂದೆಗೆ ಇಂದು ಸಹಿ ಹಾಕಲಿದ್ದಾರೆ ಅಧ್ಯಕ್ಷ ಬೈಡನ್ - TIKTOK