ನವದೆಹಲಿ: ಮುಂದಿನ ದಲೈ ಲಾಮಾ ಆಯ್ಕೆಯ ನಿರ್ಧಾರವನ್ನು ಹಾಲಿ ಬೌದ್ಧ ನಾಯಕ ದಲೈ ಲಾಮಾ ಅವರೇ ನಿರ್ಧರಿಸುತ್ತಾರೆ. ಎಬಿಸಿಪಿ ಈ ವಿಷಯದಲ್ಲಿ ಶಾಂತಿಗಾಗಿ ಏಷ್ಯನ್ ಬೌದ್ಧ ಸಮ್ಮೇಳನ (Asian Buddhist Conference for Peace - ABCP) ಮಧ್ಯಪ್ರವೇಶಿಸುವುದಿಲ್ಲ ಎಂದು ಎಬಿಸಿಪಿ ಪ್ರಧಾನ ಕಾರ್ಯದರ್ಶಿ ಬೈಂಬಾಜವ್ ಖುಂಕೂರ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಎರಡು ದಿನಗಳ ಏಷ್ಯನ್ ಎಬಿಸಿಪಿಯ 12ನೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡಿದ್ದ ಬೈಂಬಾಜವ್ ಖುಂಕೂರ್ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಮುಂದಿನ ದಲೈ ಲಾಮಾ ಮಂಗೋಲಿಯಾದಿಂದ ಬರುತ್ತಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ದಲೈ ಲಾಮಾ ಅವರ ವ್ಯವಹಾರಗಳಲ್ಲಿ ಎಬಿಸಿಪಿ ಮಧ್ಯಪ್ರವೇಶಿಸುವುದಿಲ್ಲ. ಅದನ್ನು ದಲೈ ಲಾಮಾ ಅವರೇ ನಿರ್ಧರಿಸಬೇಕು ಎಂದು ಹೇಳಿದರು.
ವಿಶ್ವದಾದ್ಯಂತದ ನಾಯಕರು ಮತ್ತು ರಾಷ್ಟ್ರಗಳಿಗೆ ಯುದ್ಧಗಳನ್ನು ಕೊನೆಗೊಳಿಸಲು ಎಬಿಸಿಪಿ ಕರೆ ನೀಡುತ್ತದೆ. ನಮಗೆ ತಿಳಿದಿರುವಂತೆ ಜಾಗತಿಕ ಪರಿಸ್ಥಿತಿ ಮತ್ತು ಉದ್ವಿಗ್ನತೆಗಳಿವೆ. ಅನೇಕ ನೈಸರ್ಗಿಕ ವಿಕೋಪ ಉಂಟಾಗಿವೆ. ಇದರಿಂದಾಗಿ ಪ್ರಪಂಚದಾದ್ಯಂತ ಅನೇಕ ಜನರು ಬಳಲುತ್ತಿದ್ದಾರೆ. ಹೀಗಾಗಿ ಯುದ್ಧಗಳನ್ನು ಕೊನೆಗೊಳಿಸಲು, ಹಿಂಸೆಯನ್ನು ನಿಲ್ಲಿಸಲು ಪ್ರಪಂಚದಾದ್ಯಂತದ ನಾಯಕರು ಮತ್ತು ರಾಷ್ಟ್ರಗಳಿಗೆ ದೆಹಲಿಯ ಸಾಮಾನ್ಯ ಸಭಯು ಕರೆ ಕೊಡುತ್ತದೆ ಎಂದು ಅವರು ತಿಳಿಸಿದರು.
ಇದೇ ವೇಳೆ, ಎಬಿಸಿಪಿ ತನ್ನ ಚಟುವಟಿಕೆಗಳನ್ನು ವಿಸ್ತರಿಸುವ ಉದ್ದೇಶ ಇದೆ. ಇದರ ಕಾರ್ಯಗಳಿಗೆ ಅನುಗುಣವಾಗಿ ಹೊಸ ಸದಸ್ಯತ್ವವನ್ನು ಸ್ವೀಕರಿಸಲು ಪರಿಗಣಿಸಿದ್ದೇವೆ. ಇದು ಔಪಚಾರಿಕವಾಗಿ 13 ರಾಷ್ಟ್ರಗಳಿಂದ 18 ಸದಸ್ಯರನ್ನು ಹೊಂದಿತ್ತು. ಈಗ ನಾವು 14 ದೇಶಗಳು ಮತ್ತು 19 ರಾಷ್ಟ್ರೀಯ ಕೇಂದ್ರಗಳನ್ನು ಹೊಂದಿದ್ದೇವೆ. ಇದರಲ್ಲಿ ಭೂತಾನ್ ಸಹ ಒಂದಾಗಿದೆ. ಇದಲ್ಲದೆ, 14ನೇ ದಲೈ ಲಾಮಾ ಅವರ ಜನ್ಮದಿನವಾದ ಜುಲೈ 6ರಂದು 'ಸಾರ್ವತ್ರಿಕ ಕರುಣೆಯ ದಿನ'ವನ್ನಾಗಿ ಎಂದು ಆಚರಿಸಲು ಸಭೆಯು ಸರ್ವಾನುಮತದ ನಿರ್ಧಾರ ಮತ್ತು ಅನುಮೋದನೆ ನೀಡಿದೆ. ಎಬಿಸಿಪಿಯ ಮುಂದಿನ 13ನೇ ಸಾಮಾನ್ಯ ಸಭೆಯನ್ನು 2026ರಲ್ಲಿ ವಿಯೆಟ್ನಾಂನಲ್ಲಿ ಕರೆಯಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಬಿಸಿಪಿಯು ಏಷ್ಯಾದಲ್ಲಿನ ಬೌದ್ಧರ ಸ್ವಯಂಪ್ರೇರಿತ ಸಾಮೂಹಿಕ ಸಂಘಟನೆಯಾಗಿದ್ದು, ಇದು 1969ರಲ್ಲಿ ಸ್ಥಾಪಿತವಾಗಿದೆ. ಮಂಗೋಲಿಯನ್ ಬೌದ್ಧರ ಮುಖ್ಯಸ್ಥ ಖಂಬೋ ಲಾಮಾ ಸಮಾಗಿನ್ ಗೊಂಬೊಜೊವ್ ಕೋರಿಕೆಯ ಮೇರೆಗೆ ಭಾರತ, ಮಂಗೋಲಿಯಾ, ಜಪಾನ್, ಮಲೇಷ್ಯಾ, ನೇಪಾಳ, ಆಗಿನ ಯುಎಸ್ಎಸ್ಆರ್, ವಿಯೆಟ್ನಾಂ, ಶ್ರೀಲಂಕಾ, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾದ ಬೌದ್ಧ ಗಣ್ಯರು ಪ್ರಯತ್ನದ ಫಲವಾಗಿ ಎಬಿಸಿಪಿ ರಚನೆಯಾಗಿದೆ. ಈಗ ದೆಹಲಿಯಲ್ಲಿ 12ನೇ ಸಾಮಾನ್ಯ ಸಭೆಯು ಜನವರಿ 17 ಮತ್ತು 18ರಂದು ನಡೆದಿದೆ. ಕೇಂದ್ರ ಭೂ ವಿಜ್ಞಾನ ಸಚಿವ ಕಿರಣ್ ರಿಜಿಜು ಅವರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.