ಸಿಯೋಲ್ : ಮುಂದಿನ ತಿಂಗಳು ದಕ್ಷಿಣ ಕೊರಿಯಾದಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ತನ್ನ ಎಲ್ಲ ಪ್ಲಾಟ್ಫಾರ್ಮ್ಗಳಲ್ಲಿ ರಾಜಕೀಯ ಸಂಬಂಧಿತ ಎಲ್ಲಾ ಜಾಹೀರಾತುಗಳನ್ನು ಸ್ಥಗಿತಗೊಳಿಸಲು ಗೂಗಲ್ ನಿರ್ಧರಿಸಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ದಕ್ಷಿಣ ಕೊರಿಯಾದ ಚುನಾವಣಾ ಅವಧಿಯಲ್ಲಿ ರಾಜಕೀಯ ಜಾಹೀರಾತುಗಳನ್ನು ಪ್ರದರ್ಶಿಸುವುದಿಲ್ಲ ಎಂದು ಗೂಗಲ್ ಇತ್ತೀಚೆಗೆ ಪ್ರಕಟಣೆ ಹೊರಡಿಸಿದೆ. ಈ ನಿರ್ಧಾರವು ಯೂಟ್ಯೂಬ್, ಗೂಗಲ್ ಸರ್ಚ್ ಮತ್ತು ಗೂಗಲ್ ಪ್ಲೇ ಸ್ಟೋರ್ ಸೇರಿದಂತೆ ಗೂಗಲ್ ಪ್ಲಾಟ್ಫಾರ್ಮ್ಗಳಿಗೆ ಏಕರೂಪವಾಗಿ ಅನ್ವಯಿಸುತ್ತದೆ.
ರಾಜಕೀಯ ಜಾಹೀರಾತುಗಳಲ್ಲಿ ಸಂಭಾವ್ಯ ಉತ್ಪ್ರೇಕ್ಷಿತ ಅಥವಾ ಪಕ್ಷಪಾತದ ವಿಷಯಗಳಿಂದ ಮತದಾರರನ್ನು ದಾರಿ ತಪ್ಪಿಸುವ ಪ್ರಯತ್ನಗಳನ್ನು ತಡೆಯಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಯೋನ್ಹಾಪ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮತದಾನದ ವಿಧಾನಗಳು ಮತ್ತು ಮತದಾರರ ನೋಂದಣಿ ವಿಧಾನಗಳ ಬಗ್ಗೆ ವಿಶ್ವಾಸಾರ್ಹ ಮಾಹಿತಿ ನೀಡುವ ಲಿಂಕ್ಗಳನ್ನು ಗೂಗಲ್ ತನ್ನ ಮುಖಪುಟದಲ್ಲಿ ಬಳಕೆದಾರರಿಗಾಗಿ ಪ್ರದರ್ಶಿಸಲು ಯೋಜಿಸಿದೆ. ದೇಶದಲ್ಲಿ ಏಪ್ರಿಲ್ 10ರಂದು ಲೋಕಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಗಾಗಿ ಆರಂಭಿಕ ಮತದಾನವು ಏಪ್ರಿಲ್ 5-6 ರಂದು ನಡೆಯಲಿದೆ.
ವೈದ್ಯರ ಮುಷ್ಕರಕ್ಕೆ ತತ್ತರಿಸಿದ ದಕ್ಷಿಣ ಕೊರಿಯಾ: ಈಗ ಸುಮಾರು ಆರು ವಾರಗಳಿಂದ ದಕ್ಷಿಣ ಕೊರಿಯಾದಲ್ಲಿ ಸಾವಿರಾರು ಕಿರಿಯ ವೈದ್ಯರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುತ್ತಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ. ದೇಶದಲ್ಲಿ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಸಂಖ್ಯೆ ಮತ್ತು ವೈದ್ಯರ ಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸುವ ಉದ್ದೇಶ ಹೊಂದಿರುವ ಸರ್ಕಾರದ ಯೋಜನೆಯ ವಿರುದ್ಧ ಅವರು ಪ್ರತಿಭಟನೆ ನಡೆಸುತ್ತಿದ್ದಾರೆ.
ದಕ್ಷಿಣ ಕೊರಿಯಾದಲ್ಲಿ ಕಾರ್ಯನಿರತ ವೈದ್ಯರ ಸಂಖ್ಯೆಯನ್ನು ಹೆಚ್ಚಿಸಲು ಪ್ರಯತ್ನಿಸುವ ಮೊದಲು ಸರ್ಕಾರ ಮೊದಲು ಈಗಿನ ವೈದ್ಯರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಮುಷ್ಕರ ನಿರತ ವೈದ್ಯರು ಒತ್ತಾಯಿಸಿದ್ದಾರೆ. ಸಂಬಳ ಹೆಚ್ಚಿಸುವಂತೆ ಮತ್ತು ಕೆಲಸದ ಸ್ಥಳದಲ್ಲಿನ ಪರಿಸ್ಥಿತಿಗಳನ್ನು ಉತ್ತಮಗೊಳಿಸುವಂತೆ ವೈದ್ಯರು ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದಾರೆ.
ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿರುವುದರಿಂದ ದೇಶಾದ್ಯಂತ ಆಸ್ಪತ್ರೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದೆ. ವೈದ್ಯರ ಕೊರತೆಯಿಂದಾಗಿ ಶಸ್ತ್ರಚಿಕಿತ್ಸೆಗಳನ್ನು ರದ್ದುಗೊಳಿಸಲಾಗುತ್ತಿದೆ ಮತ್ತು ತುರ್ತು ಚಿಕಿತ್ಸಾ ವಿಭಾಗಗಳಲ್ಲಿನ ರೋಗಿಗಳನ್ನು ಸಹ ಚಿಕಿತ್ಸೆ ಇಲ್ಲದೆ ವಾಪಸು ಕಳುಹಿಸಲಾಗುತ್ತಿದೆ. 2035 ರ ವೇಳೆಗೆ ಸುಮಾರು 15,000 ವೈದ್ಯರ ಕೊರತೆಯನ್ನು ನೀಗಿಸುವ ಉದ್ದೇಶದಿಂದ ವೈದ್ಯರ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆ ರೂಪಿಸಲಾಗಿದೆ ಎಂದು ದಕ್ಷಿಣ ಕೊರಿಯಾ ಸರ್ಕಾರ ಹೇಳಿದೆ.
ಇದನ್ನೂ ಓದಿ : ನಾಲ್ಕರಲ್ಲಿ ಓರ್ವ ಯೂಟ್ಯೂಬರ್ ಆದಾಯ ಗಳಿಸುತ್ತಿರುವುದು Shortsನಿಂದ - YouTube Shorts