ಟೆಲ್ ಅವೀವ್(ಇಸ್ರೇಲ್): ಹಮಾಸ್ ಉಗ್ರರು ಅಡಗಿರುವ ಗಾಜಾಪಟ್ಟಿಯನ್ನು ಬಾಂಬ್ಗಳ ಸುರಿಮಳೆಯಿಂದ ಧ್ವಂಸಗೊಳಿಸುತ್ತಿರುವ ಇಸ್ರೇಲ್, ಮತ್ತೊಂದು ದೊಡ್ಡ ಯಶಸ್ಸು ಸಾಧಿಸಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ಭೀಕರ ದಾಳಿಯ ಹಿಂದಿನ ಮಾಸ್ಟರ್ಮೈಂಡ್ಗಳಲ್ಲಿ ಒಬ್ಬರಾದ ಯಾಹ್ಯಾ ಸಿನ್ವಾರ್‌ನನ್ನು ಹತ್ಯೆ ಮಾಡಿರುವುದಾಗಿ ಇಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ದೃಢಪಡಿಸಿದ್ದಾರೆ.
ಲೆಬನಾನ್ನ ಹಿಜ್ಬುಲ್ಲಾ ಬಂಡುಕೋರರ ಒಬ್ಬೊಬ್ಬ ನಾಯಕನನ್ನೂ ಹತ್ಯೆ ಮಾಡುತ್ತಿರುವ ನಡುವೆಯೇ ಹಮಾಸ್ ನಾಯಕರನ್ನೂ ಇಸ್ರೇಲ್ ಸದೆಬಡಿಯುತ್ತಿದೆ. ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಉಗ್ರರ ಕೈಯಲ್ಲಿ ಒತ್ತೆಯಾಳಾಗಿರುವ ಕುಟುಂಬಗಳಿಗೆ ಮಾಹಿತಿ ನೀಡಿ ಎಂದು ಪ್ರಧಾನಿ ಸೂಚನೆ ನೀಡಿದ್ದಾರೆ.
Eliminated: Yahya Sinwar.
— Israel Defense Forces (@IDF) October 17, 2024
ಇಸ್ರೇಲ್ ಪಡೆಯಿಂದಲೂ ಹೇಳಿಕೆ: ಇಸ್ರೇಲ್ ರಕ್ಷಣಾ ಪಡೆಗಳು (IDF) ಗಾಜಾದ ಮೇಲೆ ಬಾಂಬ್, ಕ್ಷಿಪಣಿ ದಾಳಿ ನಡೆಸಿದ್ದು ಮೂವರು ಹಮಾಸ್ ಉಗ್ರರನ್ನು ಹೊಡೆದುರುಳಿಸಲಾಗಿದೆ. ಅವರಲ್ಲಿ ಯಾಹ್ಯಾ ಸಿನ್ವಾರ್ ಕೂಡ ಸತ್ತಿದ್ದಾನೆ ಎಂದು ಹೇಳಿದೆ. ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಐಡಿಎಫ್, "ಗಾಜಾದಲ್ಲಿ ಸೇನಾ ಪಡೆಗಳ ಕಾರ್ಯಾಚರಣೆಯಲ್ಲಿ ಯಾಹ್ಯಾ ಸಿನ್ವಾರ್ ಸೇರಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ" ಎಂದಿದೆ.
ಇತ್ತೀಚೆಗೆ ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್, ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಹತ್ಯೆ ಮಾಡಿತ್ತು. ಇದರ ಬೆನ್ನಲ್ಲೇ, ತನ್ನ ಟಾರ್ಗೆಟ್ ಆಗಿ ಸಿನ್ವಾರ್‌ನನ್ನು ಕೊಂದಿರುವುದು ಭಾರಿ ಮಹತ್ವ ಪಡೆದುಕೊಂಡಿದೆ.
ಇದಕ್ಕೂ ಮುನ್ನ, ಹಮಾಸ್‌ನ ಮತ್ತೋರ್ವ ಹಿರಿಯ ನಾಯಕ ಇಸ್ಮಾಯಿಲ್ ಹನಿಯಾ ಇರಾನ್‌ನಲ್ಲಿ ಮೃತಪಟ್ಟಿದ್ದ. ಟೆಹ್ರಾನ್ ಮತ್ತು ಹಮಾಸ್ ಈ ದಾಳಿಯನ್ನು ಇಸ್ರೇಲ್ ನಡೆಸಿದೆ ಎಂದು ಆರೋಪಿಸಿದ್ದವು. ಆದರೆ, ಇಸ್ರೇಲ್ ಇದನ್ನು ಒಪ್ಪಲೂ ಇರಲಿಲ್ಲ. ನಿರಾಕರಣೆ ಕೂಡ ಮಾಡಿರಲಿಲ್ಲ.
ಹಮಾಸ್ ಉಗ್ರರ ಮಾರಣಹೋಮ: ಇದಕ್ಕೂ ಮೊದಲು, ಜಬಾಲಿಯಾದಲ್ಲಿ ಬುಧವಾರ ನಡೆದ ನಡೆದ ವೈಮಾನಿಕ ದಾಳಿಯಲ್ಲಿ ಸುಮಾರು 20 ಹಮಾಸ್ ಉಗ್ರರನ್ನು ಇಸ್ರೇಲ್ ಪಡೆಗಳು ಹತ್ಯೆ ಮಾಡಿದ್ದವು. ಶಸ್ತ್ರಾಸ್ತ್ರ ಸಂಗ್ರಹಗಾರ, ಯುದ್ಧ ಟ್ಯಾಂಕರ್ಗಳನ್ನು ನಾಶ ಮಾಡಿದ್ದಾಗಿ ಐಡಿಎಫ್ ಹೇಳಿದೆ.
ಉತ್ತರ ಗಾಜಾದ ಬೀಟ್ ಹನೌನ್, ಜಬಾಲಿಯಾ ಮತ್ತು ಬೀಟ್ ಲಾಹಿಯಾದಲ್ಲಿರುವ ಪ್ಯಾಲೆಸ್ಟೈನಿಯನ್ನರು ಗಾಜಾಪಟ್ಟಿಯ ದಕ್ಷಿಣದಲ್ಲಿರುವ ನಿಗದಿತ ಆಶ್ರಯ ತಾಣಗಳಿಗೆ ತೆರಳುವಂತೆ ಜನರಿಗೆ ಇಸ್ರೇಲ್ ಸೂಚನೆ ನೀಡಿದೆ.
ಇದನ್ನೂ ಓದಿ: ಲೆಬನಾನ್ನಲ್ಲಿ ಇಸ್ರೇಲ್ ವೈಮಾನಿಕ ದಾಳಿಗೆ 2,367 ಮಂದಿ ಸಾವು: 11,088 ಜನರಿಗೆ ಗಾಯ - ಆರೋಗ್ಯ ಸಚಿವಾಲಯ