ಮಾಸ್ಕೋ (ರಷ್ಯಾ): ರಾಜಧಾನಿಯ ಈಶಾನ್ಯ ಇವಾನೊವೊ ಪ್ರದೇಶದ ಬಳಿ 15 ಜನರಿದ್ದ ರಷ್ಯಾದ ಮಿಲಿಟರಿ ಸರಕು ವಿಮಾನವೊಂದು ಮಂಗಳವಾರ ಪತನಗೊಂಡಿದ್ದು, ಎಲ್ಲರೂ ಸಾವನ್ನಪ್ಪಿದ್ದಾರೆ. Il-76 ವಿಮಾನವು ಟೇಕ್ ಆಫ್ ಆದ ಕೆಲ ಸಮಯದಲ್ಲೇ ಇಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡು ಪತನಗೊಂಡಿದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯ ತಿಳಿಸಿದೆ.
ಇವಾನೊವೊ ಗವರ್ನರ್ ಸ್ಟಾನಿಸ್ಲಾವ್ ವೊಸ್ಕ್ರೆಸೆನ್ಸ್ಕಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಟೇಕಾಫ್ ವೇಳೆ ಎಂಜಿನ್‌ನಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಅಪಘಾತಕ್ಕೆ ಕಾರಣ ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಧಿಕಾರಿಗಳ ತಂಡವು ತನಿಖೆ ನಡೆಸಲು ಇವಾನೊವೊಗೆ ತೆರಳಿದೆ.
ಸೇನಾ ಕಾರ್ಗೋ ವಿಮಾನ ಪತನವಾದಾಗ ಎಂಟು ಸಿಬ್ಬಂದಿ ಮತ್ತು ಏಳು ಮಂದಿ ಪ್ರಯಾಣಿಕರು ಸೇರಿದಂತೆ 15 ಜನರು ವಿಮಾನದಲ್ಲಿದ್ದರು. ಪ್ರಯಾಣಿಕರು ಯಾರು, ಮತ್ತು ಎಲ್ಲಿಗೆ ಹೋಗುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ. ರಷ್ಯಾದ ಮಾಧ್ಯಮ ನ್ಯೂಯಾರ್ಕ್ ಪೋಸ್ಟ್ ವಿಮಾನದ ಎಂಜಿನ್ ಹೊತ್ತಿ ಉರಿಯುತ್ತಿರುವ ವಿಡಿಯೋವೊಂದನ್ನು ಪ್ರಸಾರ ಮಾಡಿದೆ. ನಾಲ್ಕು- ಎಂಜಿನ್ Il-76 ಹೆವಿ-ಲಿಫ್ಟ್ ಸಾರಿಗೆ ವಿಮಾನ ಇದಾಗಿದ್ದು, 1970 ರ ದಶಕದಿಂದ ಸೋವಿಯತ್ ಮತ್ತು ನಂತರ ರಷ್ಯಾದ ವಾಯುಪಡೆಯೊಂದಿಗೆ ಸೇವೆಯಲ್ಲಿತ್ತು ಎಂದು ಆನ್‌ಲೈನ್ ಸುದ್ದಿವಾಹಿನಿಗಳಲ್ಲಿ ವರದಿಯಾಗಿದೆ.
"ಮಾಸ್ಕೋ ಸ್ಥಳೀಯ ಸಮಯ ಸುಮಾರು ಮಧ್ಯಾಹ್ನ 1 ಗಂಟೆಗೆ, ಇವಾನೊವೊ ಪ್ರದೇಶದಲ್ಲಿ ಟೇಕಾಫ್ ಆಗುವಾಗ Il-76 ಮಿಲಿಟರಿ ಸಾರಿಗೆ ವಿಮಾನ ಅಪಘಾತಕ್ಕೀಡಾಯಿತು" ಎಂದು ರಕ್ಷಣಾ ಸಚಿವಾಲಯದ ಮಾಹಿತಿ ಉಲ್ಲೇಖಿಸಿ, ಸರ್ಕಾರಿ ಸ್ವಾಮ್ಯದ TASS ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸೆವೆರ್ನಿ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆದ ತಕ್ಷಣವೇ ಎಂಜಿನ್‌ಗೆ ಬೆಂಕಿ ಹೊತ್ತಿಕೊಂಡಿದೆ. ಪೈಲಟ್‌ಗಳು ತುರ್ತು ಲ್ಯಾಂಡಿಂಗ್‌ಗಾಗಿ ಏರ್‌ಫೀಲ್ಡ್‌ಗೆ ಮರಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.
ರಷ್ಯಾದಲ್ಲಿ ಈ ವರ್ಷ ಸಂಭವಿಸಿದ ಎರಡನೇ ವಿಮಾನ ಅಪಘಾತ ಇದಾಗಿದೆ. ಇದಕ್ಕೂ ಮುನ್ನ ಜನವರಿ 24 ರಂದು ಉಕ್ರೇನಿಯನ್ ಸಶಸ್ತ್ರ ಪಡೆಗಳು 65 ಉಕ್ರೇನಿಯನ್ ಯುದ್ಧ ಕೈದಿಗಳು ಸೇರಿದಂತೆ 74 ಜನರನ್ನು ಹೊತ್ತ ವಿಮಾನವನ್ನು ಹೊಡೆದುರುಳಿಸಿದ್ದವು. ಅವರೆಲ್ಲರೂ ಸಾವನ್ನಪ್ಪಿದ್ದಾರೆ ಎಂದು TASS ವರದಿ ಮಾಡಿತ್ತು. 24 ಜೂನ್ 2022 ರಂದು ರಿಯಾಜಾನ್‌ನಲ್ಲಿ ಮತ್ತೊಂದು ಅಪಘಾತ ಸಂಭವಿಸಿತ್ತು. ಅದರಲ್ಲಿ ಐದು ಜನರು ಸಾವನ್ನಪ್ಪಿ, ನಾಲ್ವರು ಗಾಯಗೊಂಡಿದ್ದರು. ಇಂಜಿನ್ ವೈಫಲ್ಯವೇ ಘಟನೆಗೆ ಪ್ರಮುಖ ಕಾರಣವಾಗಿತ್ತು.
ಇದನ್ನೂ ಓದಿ: ಆರ್ಥಿಕತೆ ಚೇತರಿಕೆಗೆ ಸಚಿವರಿಗೆ ಪಾಕ್ ಪ್ರಧಾನಿ ಷರೀಫ್ "ಮಾಡು ಇಲ್ಲವೇ ಮಡಿ" ಟಾಸ್ಕ್