ಕೀವ್ : ಉಕ್ರೇನ್ನ ಪೂರ್ವ ಖಾರ್ಕಿವ್ ಪ್ರದೇಶದ ಝಿಮಿವ್ಸ್ಕಾ ಉಷ್ಣ ವಿದ್ಯುತ್ ಸ್ಥಾವರ (ಟಿಪಿಪಿ)ದ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದ್ದು, ದಾಳಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಸಂಪೂರ್ಣ ನಾಶವಾಗಿದೆ ಎಂದು ಉಕ್ರೇನ್ ವಿದ್ಯುತ್ ಉತ್ಪಾದನಾ ಕಂಪನಿ ಸೆಂಟರ್ ನರ್ಗೊವನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಮಾರ್ಚ್ 22 ರಂದು ನಡೆದ ಕ್ಷಿಪಣಿ ದಾಳಿಯಲ್ಲಿ ಸ್ಥಾವರದ ಎಲ್ಲಾ ಘಟಕಗಳು ನಾಶವಾಗಿವೆ. ಪ್ರಸ್ತುತ, ಕಾರ್ಮಿಕರು ಸ್ಥಳದಲ್ಲಿನ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ ಮತ್ತು ಸ್ಥಾವರದ ಬಹುತೇಕ ಉಪಕರಣಗಳು ಕೆಲಸ ಮಾಡುತ್ತಿಲ್ಲ ಎಂದು ಸೆಂಟರ್ ನರ್ಗೊ ವರದಿಯಲ್ಲಿ ತಿಳಿಸಿದೆ.
ಮಾರ್ಚ್ 22 ರಂದು ರಷ್ಯಾ ಉಕ್ರೇನ್ ಮೇಲೆ 88 ಕ್ಷಿಪಣಿಗಳು ಮತ್ತು 63 ಶಹೀದ್ ಯುದ್ಧ ಡ್ರೋನ್ಗಳನ್ನು ಹಾರಿಸಿ ಭಾರಿ ದಾಳಿ ನಡೆಸಿದೆ. ಇದು ದೇಶದ ಇಂಧನ ಮೂಲಸೌಕರ್ಯದ ಮೇಲಿನ ಅತಿದೊಡ್ಡ ದಾಳಿ ಎಂದು ಉಕ್ರೇನ್ ಅಧಿಕಾರಿಗಳು ಬಣ್ಣಿಸಿದ್ದಾರೆ ಎಂದು ವರದಿ ತಿಳಿಸಿದೆ. 2,200 ಮೆಗಾವ್ಯಾಟ್ ಸಾಮರ್ಥ್ಯದ ಝ್ಮಿವ್ಸ್ ಕಾ ಟಿಪಿಪಿ ಪೂರ್ವ ಉಕ್ರೇನ್ನ ಅತಿದೊಡ್ಡ ವಿದ್ಯುತ್ ಉತ್ಪಾದನಾ ಘಟಕವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಯುಎಸ್ ಬೆಂಬಲ ಕೋರಿದ ಜೆಲೆನ್ಸ್ಕಿ: ಯುಎಸ್ ಸಂಸತ್ತು ಅನುಮೋದಿಸಿರುವ ಮಿಲಿಟರಿ ಸಹಾಯ ಸಿಗದಿದ್ದರೆ ರಷ್ಯಾ ವಿರುದ್ಧ ತಾನು ನಿಯೋಜಿಸಿರುವ ಪಡೆಗಳನ್ನು ಸಣ್ಣ ಸಣ್ಣ ಹಂತಗಳಲ್ಲಿ ಹಿಂತೆಗೆದುಕೊಳ್ಳಬೇಕಾಗುತ್ತದೆ ಎಂದು ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸ್ಕಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
"ಅಮೆರಿಕದ ಬೆಂಬಲ ಸಿಗದಿದ್ದರೆ ಯುದ್ಧ ಮುಂದುವರಿಸಲು ನಮ್ಮ ಬಳಿ ವಾಯು ರಕ್ಷಣೆ, ಕ್ಷಿಪಣಿಗಳು, ಎಲೆಕ್ಟ್ರಾನಿಕ್ ಯುದ್ಧಕ್ಕೆ ಜಾಮರ್ಗಳು, ಫಿರಂಗಿಗಳು ಹೀಗೆ ಯಾವುದೂ ಇರುವುದಿಲ್ಲ" ಎಂದು ಜೆಲೆನ್ಸ್ಕಿ ವಾಷಿಂಗ್ಟನ್ ಪೋಸ್ಟ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಯುದ್ಧ ಸಾಮಗ್ರಿಗಳ ಕೊರತೆ ಎಂದರೆ ನಾವು ಯುದ್ಧದ ತೀವ್ರತೆಯನ್ನು ಕಡಿಮೆ ಮಾಡಬೇಕಾಗುತ್ತದೆ. ಸಹಜವಾಗಿಯೇ ನಾವು ಯುದ್ಧದಿಂದ ಹಿಂದೆ ಸರಿಯಬೇಕಾಗುತ್ತದೆ ಎಂದು ಅವರು ನುಡಿದರು.
ಯುದ್ಧ ಆರಂಭವಾಗಿ ಎರಡು ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ರಷ್ಯಾ ಇತ್ತೀಚಿನ ವಾರಗಳಲ್ಲಿ ಉಕ್ರೇನ್ನ ಇಂಧನ ಮತ್ತು ಇತರ ಮೂಲಸೌಕರ್ಯಗಳ ಮೇಲೆ ದಾಳಿಯನ್ನು ತೀವ್ರಗೊಳಿಸಿದೆ. ಆದರೆ ಅದಕ್ಕೆ ತಕ್ಕಂತೆ ಉಕ್ರೇನಿಯನ್ ಪಡೆಗಳು ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಮತ್ತು ರಷ್ಯಾದ ತೈಲ ಸಂಸ್ಕರಣಾಗಾರಗಳು ಸೇರಿದಂತೆ ಮುಖ್ಯ ಗುರಿಗಳ ಮೇಲೆ ದಾಳಿ ನಡೆಸಲು ಕೀವ್ ಉದ್ದೇಶಿಸಿದೆ ಜೆಲೆನ್ಸ್ಕಿ ತಿಳಿಸಿದರು.
ಇದನ್ನೂ ಓದಿ : ಅಲ್-ಶಿಫಾ ಆಸ್ಪತ್ರೆಯಲ್ಲಿ ಅಡಗಿದ್ದ 4 ಹಮಾಸ್ ನಾಯಕರನ್ನು ಹತ್ಯೆಗೈದ ಇಸ್ರೇಲ್