ದೋಹಾ : ಅಮೆರಿಕದ ಪ್ರಸ್ತಾವನೆಯ ತತ್ವಗಳ ಆಧಾರದ ಮೇಲೆ ಕದನ ವಿರಾಮ ಒಪ್ಪಂದವನ್ನು ಒಪ್ಪಿಕೊಳ್ಳುವಂತೆ ಕತಾರ್, ಅಮೆರಿಕ ಮತ್ತು ಈಜಿಪ್ಟ್ ಜಂಟಿಯಾಗಿ ಹಮಾಸ್ ಮತ್ತು ಇಸ್ರೇಲ್ಗೆ ಕರೆ ನೀಡಿವೆ ಎಂದು ಕತಾರ್ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.
ಗಾಜಾದಲ್ಲಿ ಕದನ ವಿರಾಮ ಜಾರಿಗೊಳಿಸಲು ಮತ್ತು ಒತ್ತೆಯಾಳುಗಳು ಹಾಗೂ ಬಂಧಿತರನ್ನು ಬಿಡುಗಡೆ ಮಾಡಲು ನಡೆಯುತ್ತಿರುವ ಚರ್ಚೆಗಳಲ್ಲಿ ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿರುವ ಮೂರು ದೇಶಗಳು ಜಂಟಿಯಾಗಿ ಹಮಾಸ್ ಮತ್ತು ಇಸ್ರೇಲ್ ಎರಡಕ್ಕೂ ಕರೆ ನೀಡಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಅಮೆರಿಕವು ಮುಂದಿಟ್ಟಿರುವ ಪ್ರಸ್ತಾವನೆಗಳು ಹಮಾಸ್ ಮತ್ತು ಇಸ್ರೇಲ್ ಎರಡೂ ಪಕ್ಷಗಳ ಹಿತಾಸಕ್ತಿಗಳಿಗೆ ಪೂರಕವಾಗಿವೆ ಮತ್ತು ದೀರ್ಘಕಾಲದಿಂದ ಸಂಘರ್ಷದಿಂದ ನಲುಗಿರುವ ಗಾಜಾದ ಜನರಿಗೆ, ಒತ್ತೆಯಾಳುಗಳಿಗೆ ಮತ್ತು ಅವರ ಕುಟುಂಬಗಳಿಗೆ ತಕ್ಷಣಕ್ಕೆ ನೆಮ್ಮದಿಯನ್ನು ತರುವಂತಿವೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
"ಈ ಪ್ರಸ್ತಾವಿತ ಒಪ್ಪಂದವು ಶಾಶ್ವತ ಕದನ ವಿರಾಮವನ್ನು ಜಾರಿಗೊಳಿಸುವ ಉದ್ದೇಶ ಹೊಂದಿದ್ದು, ಬಿಕ್ಕಟ್ಟನ್ನು ಕೊನೆಗೊಳಿಸಲಿದೆ" ಎಂದು ಅದು ಹೇಳಿದೆ.
ಗಾಜಾದಲ್ಲಿನ ಸಂಘರ್ಷವನ್ನು ಕೊನೆಗೊಳಿಸಲು ಮತ್ತು ಎಲ್ಲಾ ಒತ್ತೆಯಾಳುಗಳ ಬಿಡುಗಡೆಗೆ ಸಾಧ್ಯವಾಗುವ ಮೂರು ಹಂತದ ಇಸ್ರೇಲ್ ಪ್ರಸ್ತಾಪವನ್ನು ಯುಎಸ್ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಮಾಡಿದ ಭಾಷಣದಲ್ಲಿ ಬಹಿರಂಗಪಡಿಸಿದರು.
ಏತನ್ಮಧ್ಯೆ, ಗಾಜಾ ಪಟ್ಟಿಯಿಂದ ಇಸ್ರೇಲಿ ಸೇನೆ ಹಿಂದೆ ಸರಿಯಬೇಕೆಂದು ಮತ್ತು ಗಾಜಾದ ಎಲ್ಲ ಗಡಿಗಳನ್ನು ತೆರೆದು ಅವನ್ನು ಪ್ಯಾಲೆಸ್ಟೈನ್ ಪ್ರಾಧಿಕಾರಕ್ಕೆ ಹಸ್ತಾಂತರಿಸಬೇಕೆಂದು ಪ್ಯಾಲೆಸ್ಟೈನ್ ಆಡಳಿತ ಒತ್ತಾಯಿಸಿದೆ.
ಪ್ಯಾಲೆಸ್ಟೈನ್ ನ್ಯೂಸ್ ಏಜೆನ್ಸಿ (ಡಬ್ಲ್ಯುಎಎಫ್ಎ) ಪ್ರಕಟಿಸಿದ ಹೇಳಿಕೆಯಲ್ಲಿ, ಕ್ರಾಸಿಂಗ್ಗಳನ್ನು ತೆರೆಯುವುದರಿಂದ ಮತ್ತು ಅವುಗಳ ಹಸ್ತಾಂತರದಿಂದ ಗಾಜಾದ ಜನರಿಗೆ ಪರಿಹಾರ ಸಾಮಗ್ರಿ ಮತ್ತು ಎಲ್ಲಾ ಅಗತ್ಯ ವಸ್ತುಗಳನ್ನು ನಿಯಮಿತವಾಗಿ ತಲುಪಿಸಲು ಅನುಕೂಲವಾಗಲಿದೆ ಎಂದು ಗಾಜಾ ನಾಯಕತ್ವ ಶನಿವಾರ ಹೇಳಿದೆ.
ಗಾಜಾದಲ್ಲಿ ಕದನ ವಿರಾಮಕ್ಕಾಗಿ ಇಸ್ರೇಲ್ ಹೊಸ ಮೂರು ಹಂತದ ಮಾರ್ಗಸೂಚಿಯನ್ನು ನೀಡಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಘೋಷಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕತಾರ್ ಮೂಲಕ ಈ ಪ್ರಸ್ತಾಪವನ್ನು ಸ್ವೀಕರಿಸಿದ ಹಮಾಸ್, ಪ್ರಸ್ತಾಪವನ್ನು ಸಕಾರಾತ್ಮಕವಾಗಿ ಪರಿಗಣಿಸುವುದಾಗಿ ಹೇಳಿದೆ.
ಅಮೆರಿಕಕ್ಕೆ ಇಸ್ರೇಲ್ ನೀಡಿದ ಪ್ರಸ್ತಾವನೆಯ ಪ್ರಕಾರ, ಮೊದಲ ಹಂತವು ಸಂಪೂರ್ಣ ಆರು ವಾರಗಳ ಕದನ ವಿರಾಮ, ಗಾಜಾದ ಜನನಿಬಿಡ ಪ್ರದೇಶಗಳಿಂದ ಇಸ್ರೇಲಿ ಮಿಲಿಟರಿ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ನೂರಾರು ಪ್ಯಾಲೆಸ್ಟೈನ್ ಕೈದಿಗಳ ಬಿಡುಗಡೆಗೆ ಪ್ರತಿಯಾಗಿ ಒತ್ತೆಯಾಳುಗಳಾಗಿ ಬಂಧಿಸಲ್ಪಟ್ಟ ಮಹಿಳೆಯರು, ವೃದ್ಧರು ಮತ್ತು ಗಾಯಗೊಂಡವರನ್ನು ಬಿಡುಗಡೆ ಮಾಡುವುದನ್ನು ಒಳಗೊಂಡಿದೆ.
ಇದನ್ನೂ ಓದಿ : ರಫಾ ಕ್ರಾಸಿಂಗ್ ತೆರೆಯಲು ಇಸ್ರೇಲ್ನೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ: ಈಜಿಪ್ಟ್ ಸ್ಪಷ್ಟನೆ - Rafah Border Crossing