ಪ್ಯೊಂಗ್ಯಾಂಗ್ (ಉತ್ತರ ಕೊರಿಯಾ): ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್‌ಗೆ ರಷ್ಯಾ ನಿರ್ಮಿತ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಉಭಯ ನಾಯಕರ ನಡುವಿನ ವಿಶೇಷ ಬಾಂಧವ್ಯ ಪ್ರದರ್ಶಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಉಡುಗೊರೆ ಇಬ್ಬರು ನಾಯಕರ ನಡುವಿನ ವಿಶೇಷ ವೈಯಕ್ತಿಕ ಸಂಬಂಧಗಳ ಸ್ಪಷ್ಟವಾದ ದ್ಯೋತಕವಾಗಿದೆ ಎಂದು ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (ಕೆಸಿಎನ್ಎ) ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. ಕೊರಿಯಾದ ಆಡಳಿತಾರೂಢ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಕಾರ್ಯದರ್ಶಿ ಮತ್ತು ಉತ್ತರ ಕೊರಿಯಾದ ನಾಯಕನ ಸಹೋದರಿ ಕಿಮ್ ಯೋ-ಜಾಂಗ್ ಅವರಿಗೆ ವಾಹನವನ್ನು ಉಡುಗೊರೆಯಾಗಿ ನೀಡುವ ಬಗ್ಗೆ ರಷ್ಯಾ ಮಾಹಿತಿ ರವಾನಿಸಿದೆ. ಕಿಮ್ ಜಾಂಗ್ ಉನ್‌ಗೆ ಪುಟಿನ್ ನೀಡಿದ ಉಡುಗೊರೆಗಾಗಿ ಕಿಮ್ ಯೋ-ಜಾಂಗ್ ರಷ್ಯಾದ ತಂಡಕ್ಕೆ ಧನ್ಯವಾದ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಶೃಂಗಸಭೆಗಾಗಿ ರಷ್ಯಾದ ವೊಸ್ಟೊಚ್ನಿ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪುಟಿನ್, ತಮ್ಮ ಅಧ್ಯಕ್ಷೀಯ ಆರಸ್ ಸೆನಾಟ್ ಲಿಮೋಸಿನ್ ಅನ್ನು ಕಿಮ್ ಉನ್‌ಗೆ ತೋರಿಸಿದರು. ರಷ್ಯಾ ನಿರ್ಮಿತ ಐಷಾರಾಮಿ ವಾಹನದಲ್ಲಿ ಕುಳಿತುಕೊಳ್ಳುವ ಅವಕಾಶವನ್ನು ಕಿಮ್ಗೆ ಪುಟಿನ್ ನೀಡಿದ್ದರು.
ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿರ್ಣಯಗಳ ಉಲ್ಲಂಘನೆ?: ಕಿಮ್ ಜಾಂಗ್ ಉನ್‌ಗೆ ರಷ್ಯಾದ ಅಧ್ಯಕ್ಷರ ಉಡುಗೊರೆಯು ಉತ್ತರ ಕೊರಿಯಾಕ್ಕೆ ಆಟೋಮೊಬೈಲ್‌ಗಳು ಸೇರಿದಂತೆ ಐಷಾರಾಮಿ ವಸ್ತುಗಳ ಪೂರೈಕೆಯನ್ನು ನಿಷೇಧಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಉಲ್ಲಂಘನೆ ಆಗಿದೆ. ಇನ್ನು ಗಮನಿಸಬೇಕಾದ ಅಂಶ ಎಂದರೆ, ಕಿಮ್ ವಿವಿಧ ವಾಹನಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಮರ್ಸಿಡಿಸ್-ಮೇ ಬ್ಯಾಕ್ ಎಸ್-ಕ್ಲಾಸ್ ವಾಹನ, ಲಿಮೋಸಿನ್ ಸೇರಿದಂತೆ ಉತ್ತರ ಕೊರಿಯಾದ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳ ಮೇಲಿನ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
ಈ ನಡುವೆ ತಂತ್ರಜ್ಞಾನ, ಮೀನುಗಾರಿಕೆ ಮತ್ತು ಕ್ರೀಡಾ ವ್ಯವಹಾರಗಳ ಉಸ್ತುವಾರಿ ವಹಿಸಿರುವ ಉತ್ತರ ಕೊರಿಯಾದ ಸರ್ಕಾರದ ಹಿರಿಯ ಅಧಿಕಾರಿಗಳ ನೇತೃತ್ವದ ನಿಯೋಗಗಳು ರಷ್ಯಾಕ್ಕೆ ತೆರಳಿವೆ. ಪ್ಯೊಂಗ್ಯಾಂಗ್ ಮತ್ತು ಮಾಸ್ಕೋ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿಯೋಗಗಳು ಮಾಸ್ಕೋಗೆ ಭೇಟಿ ನೀಡಿವೆ ಎಂದು ವರದಿಗಳು ತಿಳಿಸಿವೆ.
ಇದನ್ನು ಓದಿ:ಗಾಜಾ ಯುದ್ಧವನ್ನು "ಹಿಟ್ಲರ್ ಹತ್ಯಾಕಾಂಡ"ಕ್ಕೆ ಹೋಲಿಸಿದ ಬ್ರೆಜಿಲ್ ಅಧ್ಯಕ್ಷ ಲೂಲಾ; ಹೇಳಿಕೆ ಖಂಡಿಸಿದ ಇಸ್ರೇಲ್