ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಸ್ಥಾಪಕ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಲು ಅವಕಾಶ ನೀಡದಿದ್ದರೆ ಅಕ್ಟೋಬರ್ 15 ರಂದು ಇಸ್ಲಾಮಾಬಾದ್ ನ ಡಿ-ಚೌಕ್ ನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಪಿಟಿಐ ಘೋಷಿಸಿದೆ ಎಂದು ಎಆರ್ವೈ ನ್ಯೂಸ್ ವರದಿ ಮಾಡಿದೆ.
"ಜೈಲಿನಲ್ಲಿರುವ ಪಕ್ಷದ ಸಂಸ್ಥಾಪಕ ಇಮ್ರಾನ್ ಖಾನ್ ಅವರನ್ನು ಅವರ ಕುಟುಂಬದವರು ಮತ್ತು ವಕೀಲರು ಭೇಟಿಯಾಗಲು ಅವಕಾಶ ನೀಡದಿದ್ದರೆ ಅಕ್ಟೋಬರ್ 15 ರಂದು ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ" ಎಂದು ಪಿಟಿಐ ಪಕ್ಷದ ಕೇಂದ್ರ ಮಾಹಿತಿ ಕಾರ್ಯದರ್ಶಿ ಶೇಖ್ ವಕಾಸ್ ಅಕ್ರಮ್ ಹೇಳಿದರು. ಕಳೆದ ಐದರಿಂದ ಆರು ವಾರಗಳಿಂದ ಇಮ್ರಾನ್ ಖಾನ್ ಅವರನ್ನು ವಕೀಲರು ಮತ್ತು ಕುಟುಂಬ ಸದಸ್ಯರು ಸೇರಿದಂತೆ ಯಾರೊಬ್ಬರೂ ಭೇಟಿಯಾಗದಂತೆ ಸರ್ಕಾರ ನಿರ್ಬಂಧ ವಿಧಿಸಿದೆ ಎಂದು ಅವರು ಹೇಳಿದರು.
"ನಮ್ಮ ನಾಯಕ ಇಮ್ರಾನ್ ಖಾನ್ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಜೈಲಿನಲ್ಲಿ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂಬ ವರದಿಗಳು ಕಳವಳ ಮೂಡಿಸಿವೆ. ನಾವು ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಿಲ್ಲ. ನಮ್ಮ ಪ್ರತಿಭಟನೆ ಏನಿದ್ದರೂ ಇಮ್ರಾನ್ ಖಾನ್ ಅವರ ಭೇಟಿಯ ಅವಕಾಶಕ್ಕಾಗಿ ಮಾತ್ರ" ಎಂದು ಶೇಖ್ ವಕಾಸ್ ಅಕ್ರಮ್ ತಿಳಿಸಿದ್ದಾರೆ.
ಅಕ್ಟೋಬರ್ 15 ರಂದು ಪಾಕಿಸ್ತಾನದಲ್ಲಿ ಶಾಂಘೈ ಸಹಕಾರ ಸಂಘಟನೆ (ಎಸ್ಸಿಒ) ಶೃಂಗಸಭೆ ಪ್ರಾರಂಭವಾಗಲಿದ್ದು, ವಿವಿಧ ದೇಶಗಳ ಮುಖ್ಯಸ್ಥರು, ಪ್ರತಿನಿಧಿಗಳು ಈಗಾಗಲೇ ಪಾಕಿಸ್ತಾನಕ್ಕೆ ಆಗಮಿಸುತ್ತಿದ್ದಾರೆ. ಅಂದಿನ ದಿನವೇ ಇಸ್ಲಾಮಾಬಾದ್ನ ಡಿ-ಚೌಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಪಿಟಿಐ ಎಚ್ಚರಿಕೆ ನೀಡಿದೆ.
ಪಕ್ಷದ ರಾಜಕೀಯ ಸಮಿತಿ ಸಭೆಯ ನಂತರ ಪಿಟಿಐ ಪ್ರತಿಭಟನೆಯ ನಿರ್ಧಾರವನ್ನು ಪ್ರಕಟಿಸಿದೆ. ಫೆಡರಲ್ ಮತ್ತು ಪಂಜಾಬ್ ಸರ್ಕಾರದ 'ಕಾನೂನುಬಾಹಿರ' ದಾಳಿಗಳು ಮತ್ತು ಬಂಧನಗಳನ್ನು ಕೊನೆಗೊಳಿಸಬೇಕೆಂದು ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷ ಒತ್ತಾಯಿಸುತ್ತಿದೆ. ಸರ್ಕಾರದ ಕ್ರಮಗಳಿಂದಾಗಿ ಪಿಟಿಐ ಅಧ್ಯಕ್ಷರ ಜೀವಕ್ಕೆ ಅಪಾಯ ಉಂಟಾಗಿದ್ದು, ಅವರ ಮೂಲಭೂತ ಮಾನವ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಶೇಖ್ ವಕಾಸ್ ಅಕ್ರಮ್ ಆರೋಪಿಸಿದ್ದಾರೆ. ಇಮ್ರಾನ್ ಖಾನ್ ಅವರಿಗೆ ಮೂಲಭೂತ ಹಕ್ಕುಗಳು, ಕುಟುಂಬ ಮತ್ತು ಪಕ್ಷದ ನಾಯಕರೊಂದಿಗೆ ಭೇಟಿಯ ಅವಕಾಶ ನೀಡದಿದ್ದರೆ ಅಕ್ಟೋಬರ್ 15 ರಂದು ಇಡೀ ಪಾಕಿಸ್ತಾನ ಬೀದಿಗಿಳಿಯಲಿದೆ ಎಂದು ಅವರು ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಇದನ್ನೂ ಓದಿ : ನರೇಂದ್ರ ಮೋದಿ ಬದಲಾವಣೆಯ ಹರಿಕಾರ, ಅವರಲ್ಲಿದೆ ದಿವ್ಯಶಕ್ತಿ: ಬ್ರಿಟನ್ ಮಾಜಿ ಪ್ರಧಾನಿ ಜಾನ್ಸನ್ ಶ್ಲಾಘನೆ