ಕೀವ್: ಪೋಲೆಂಡ್ ಭೇಟಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಯುದ್ಧ ಭೂಮಿ ಉಕ್ರೇನ್ಗೆ ಬಂದಿಳಿದಿದ್ದಾರೆ. ತಮ್ಮ ಈ ಐತಿಹಾಸಿಕ ಭೇಟಿ ವೇಳೆ ಅವರು ಅಧ್ಯಕ್ಷ ವೊಲಿಡಿಮಿರ್ ಝೆಲನ್ಸ್ಕಿ ಜೊತೆಗೆ ಸಂಘರ್ಷದ ಸಂಧಾನ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಲಿದ್ದಾರೆ.
1991ರಲ್ಲಿ ಉಕ್ರೇನ್ ಸ್ವಾತಂತ್ರ್ಯಗಳಿಸಿದ ಬಳಿಕ ಭಾರತದ ಪ್ರಧಾನಿ ಉಕ್ರೇನ್ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ರೈಲ್ ಫೋರ್ಸ್ ಒನ್ ಬಿಗಿ ಭದ್ರತೆಯಲ್ಲಿ ಪೋಲೆಂಡ್ನಿಂದ ಕೀವ್ಗೆ ಪ್ರಧಾನಿ ಭೇಟಿ ನೀಡಿದ್ದಾರೆ. ಕಳೆದ ಆರು ವಾರಗಳ ಹಿಂದೆ ರಷ್ಯಾಗೆ ಭೇಟಿ ನೀಡಿದ್ದ ಅವರು ಇದೀಗ ಉಕ್ರೇನ್ಗೆ ಭೇಟಿ ನೀಡುತ್ತಿರುವುದು ಎಲ್ಲರ ಗಮನ ಸೆಳೆದಿದೆ. ಇನ್ನು ಪ್ರಧಾನಿಯ ಉಕ್ರೇನ್ ರಾಜಧಾನಿ ಭೇಟಿ ವೇಳಾಪಟ್ಟಿಯನ್ನು ಭದ್ರತಾ ದೃಷ್ಟಿಯಿಂದ ಬಹಿರಂಗಪಡಿಸಿಲ್ಲ. ಈ ಭೇಟಿಯಲ್ಲಿ ಅವರು ಅನೇಕ ದ್ವಿಪಕ್ಷೀಯ ಕಾರ್ಯಗಳ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ.
ಪೋಲೆಂಡ್ ಭೇಟಿಯಲ್ಲಿ ಪೋಲಿಶ್ ಪ್ರಧಾನಿ ಡೋನಾಲ್ಡ್ ಟಸ್ಕ್ ಜೊತೆ ಮಾತುಕತೆ ವೇಳೆ ಉಕ್ರೇನ್ ಸಂಘರ್ಷದ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಪಶ್ಚಿಮ ಏಷ್ಯಾದಲ್ಲಿ ಇದು ಅತ್ಯಂತ ಕಾಳಜಿ ವಿಚಾರವಾಗಿದ್ದು, ಶಾಂತಿ ಪುನರ್ಸ್ಥಾಪಿಸುವ ನಿಟ್ಟುನಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕ ದಾರಿ ಮುಖ್ಯವಾಗಿದೆ ಎಂದಿದ್ದರು.
2022ರಿಂದ ಆರಂಭವಾಗಿರುವ ಈ ಯುದ್ಧ ಸಂಘರ್ಷವನ್ನು ಶಾಂತಿಯುತ ಮಾತುಕತೆ ಮೂಲಕ ಪರಿಹಾರ ನಡೆಸಬೇಕು ಎಂದು ಭಾರತ ಕರೆ ನೀಡಿದೆ. ಯುದ್ಧದಿಂದ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿಲ್ಲ ಎಂಬುದು ಭಾರತದ ನಂಬಿಕೆಯಾಗಿದೆ. ಯಾವುದೇ ಬಿಕ್ಕಟ್ಟಿನಲ್ಲಿನ ಮುಗ್ದ ಜನರ ಪ್ರಾಣ ತ್ಯಾಗವೂ ಇಡೀ ಮಾನವೀಯತೆಗೆ ದೊಡ್ಡ ಸವಾಲಾಗಿದೆ. ಶಾಂತಿ ಮತ್ತು ಸ್ಥಿರತೆ ಪುನರ್ಸ್ಥಾಪಿಸುವಲ್ಲಿ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ನಾವು ಬೆಂಬಲ ನೀಡುತ್ತೇವೆ. ಇದಕ್ಕಾಗಿ ಭಾರತ ಮತ್ತು ಸ್ನೇಹ ರಾಷ್ಟ್ರಗಳು ಸಾಧ್ಯವಾದ ಎಲ್ಲಾ ಬೆಂಬಲ ನೀಡಲು ಸಿದ್ಧ ಎಂದ ಟಸ್ಕ್ ಜೊತೆಗಿನ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದರು.
ಜೂನ್ನಲ್ಲಿ ಇಟಲಿಯ ಅಪುಲಿಯಾದಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಝೆಲನ್ಸ್ಕಿ ಜೊತೆಗೆ ಮಾತುಕತೆ ನಡೆಸಿದ್ದರು. ಈ ಮಾತುಕತೆಯಲ್ಲಿ ಕೂಡ ಪ್ರಧಾನಿ ಮೋದಿ ಉಕ್ರೇನ್ ಸಂಘರ್ಷಕ್ಕೆ ಶಾಂತಿಯುತ ಪರಿಹಾರದ ಮೂಲಕ ಎಲ್ಲಾ ರೀತಿ ಬೆಂಬಲ ಮುಂದುವರೆಸಲು ಸಿದ್ಧ ಎಂದಿದ್ದರು. ಈ ಭೇಟಿ ಸಂದರ್ಭದಲ್ಲಿ ಝೆಲಕ್ಸ್ಕಿ ಪ್ರಧಾನಿ ಮೋದಿ ಅವರನ್ನು ಉಕ್ರೇನ್ಗೆ ಅಹ್ವಾನಿಸಿದ್ದರು.
ಇದನ್ನೂ ಓದಿ: ಪೋಲೆಂಡ್ ಭೇಟಿ ವಿಶೇಷ: ಕಬ್ಬಡಿ ಆಟಗಾರರನ್ನು ಭೇಟಿಯಾದ ಪ್ರಧಾನಿ ಮೋದಿ