ಅಪುಲಿಯಾ, ಇಟಲಿ: ಜಿ-7 ಶೃಂಗಸಭೆಗಾಗಿ ಇಟಲಿ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿ ಶುಕ್ರವಾರ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.
ಉಭಯ ರಾಷ್ಟ್ರಗಳ ನಾಯಕರ ನಡುವಿನ ಈ ಸಭೆಯಲ್ಲಿ, ಎರಡೂ ದೇಶಗಳ ನಡುವಿನ ರಕ್ಷಣಾ ಮತ್ತು ಭದ್ರತಾ ಸಹಕಾರದ ಕುರಿತು ಚರ್ಚಿಸಲಾಯಿತು. ಮತ್ತು ರಕ್ಷಣಾ ಕೈಗಾರಿಕಾ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಭರವಸೆಯನ್ನು ಮೋದಿ ವ್ಯಕ್ತಪಡಿಸಿದರು. ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಸಹಕಾರದ ಬಗ್ಗೆ ಮೊದಿ ಮತ್ತು ಮೆಲೋನಿ ಸಂತಸ ವ್ಯಕ್ತಪಡಿಸಿದರು.
ಭಾರತ-ಇಟಲಿ ಕಾರ್ಯತಂತ್ರದ ಪಾಲುದಾರಿಕೆಯ ಪ್ರಗತಿಯ ವಿಮರ್ಶೆ ಮಾತುಕತೆಯ ಸಂದರ್ಭದಲ್ಲಿ, ಎರಡನೇ ಮಹಾಯುದ್ಧದ ಸಮಯದಲ್ಲಿ ಇಟಲಿಗೆ ಭಾರತೀಯ ಸೇನೆ ನೀಡಿರುವ ಕೊಡುಗೆಯನ್ನು ಗುರುತಿಸಿದ್ದಕ್ಕಾಗಿ ಪ್ರಧಾನಿ ಮೋದಿ ಇಟಾಲಿಯನ್ ಸರ್ಕಾರಕ್ಕೆ ಧನ್ಯವಾದಗಳನ್ನು ಅರ್ಪಿಸಿದರು. ಹಾಗೂ ಇಟಲಿಯ ಮಾಂಟೋನ್‌ನಲ್ಲಿರುವ ಯಶವಂತ್ ಘಾಡ್ಗೆ ಸ್ಮಾರಕವನ್ನು ಭಾರತವೂ ಅಭಿವೃದ್ಧಿಪಡಿಸಲಿದೆ ಎಂದು ತಿಳಿಸಿದರು.
ವ್ಯಾಪಾರ ಮತ್ತು ಆರ್ಥಿಕ ಸಹಕಾರ: ಈ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಹೆಚ್ಚುತ್ತಿರುವ ವ್ಯಾಪಾರ ಮತ್ತು ಆರ್ಥಿಕ ಸಹಕಾರದ ಬಗ್ಗೆ ಇಬ್ಬರೂ ನಾಯಕರು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಶುದ್ಧ ಇಂಧನ, ಉತ್ಪಾದನೆ, ಬಾಹ್ಯಾಕಾಶ, ವಿಜ್ಞಾನ ಮತ್ತು ತಂತ್ರಜ್ಞಾನ, ಟೆಲಿಕಾಂ ಸೇರಿದಂತೆ ವಾಣಿಜ್ಯ ಸಂಬಂಧಗಳನ್ನು ವಿಸ್ತರಿಸಲು ಕರೆ ನೀಡಿದರು. ಈ ಸಂದರ್ಭದಲ್ಲಿ, ಕೈಗಾರಿಕಾ ಆಸ್ತಿ ಹಕ್ಕುಗಳ ಕುರಿತು ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಅವರು ಸ್ವಾಗತಿಸಿದರು. ಈ ಒಪ್ಪಂದವು ಪೇಟೆಂಟ್‌ಗಳು, ವಿನ್ಯಾಸಗಳು ಮತ್ತು ಟ್ರೇಡ್‌ಮಾರ್ಕ್‌ಗಳ ಸಹಕಾರಕ್ಕೆ ಚೌಕಟ್ಟನ್ನು ನಿರ್ಮಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಏತನ್ಮಧ್ಯೆ, ಸಭೆಯಲ್ಲಿ ಉಭಯ ನಾಯಕರು ಇಂಧನ ಪರಿವರ್ತನೆಯಲ್ಲಿ ಸಹಕಾರ ಉದ್ದೇಶ ಪತ್ರಕ್ಕೆ ಸಹಿ ಹಾಕುವುದನ್ನು ಸ್ವಾಗತಿಸಿದರು, ಇದು ಶುದ್ಧ ಮತ್ತು ಹಸಿರು ಇಂಧನದಲ್ಲಿ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸುತ್ತದೆ. ಇದನ್ನು 'ಗ್ಲೋಬಲ್ ಬಯೋಫ್ಯುಯೆಲ್ಸ್ ಅಲೈಯನ್ಸ್' ಅಡಿ ಗುರುತಿಸಲಾಗಿದೆ. ಸಭೆ ಬಳಿಕ ಈ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಧಾನಿ ಮೋದಿ ಅವರು, ವಾಣಿಜ್ಯ, ಇಂಧನ, ರಕ್ಷಣೆ, ಟೆಲಿಕಾಂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ಮತ್ತು ಇಟಲಿ ನಡುವಿನ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ಬಗ್ಗೆ ಮೆಲೋನಿ ಅವರೊಂದಿಗೆ ಚರ್ಚಿಸಿದ್ದೇವೆ. ಜೈವಿಕ ಇಂಧನ, ಆಹಾರ ಸಂಸ್ಕರಣೆಯಲ್ಲೂ ಎರಡು ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡಲಿವೆ ಎಂದು ಅವರು ತಿಳಿಸಿದ್ದಾರೆ.