ಇಸ್ಲಾಮಾಬಾದ್: ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಬೆಂಬಲಿತ ಅಭ್ಯರ್ಥಿ ಅಲಿ ಅಮೀನ್ ಗಂಡಾಪುರ್ ಅವರು ಖೈಬರ್ ಪಖ್ತುನಖ್ವಾ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ. ಹಾಗೆಯೇ ಪಿಎಂಎಲ್-ಎನ್ ನ ಸರ್ದಾರ್ ಅಯಾಜ್ ಸಾದಿಕ್ ಅವರು ರಾಷ್ಟ್ರೀಯ ಅಸೆಂಬ್ಲಿ (ಸಂಸತ್ತು)ಯ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ.
ಫೆಬ್ರವರಿ 8 ರ ಸಾರ್ವತ್ರಿಕ ಚುನಾವಣೆಯಲ್ಲಿ ನಡೆದ ವ್ಯಾಪಕ ಅಕ್ರಮಗಳಲ್ಲಿ ಪಾಕಿಸ್ತಾನದ ಮುಖ್ಯ ಚುನಾವಣಾ ಆಯುಕ್ತ ಸಿಕಂದರ್ ಸುಲ್ತಾನ್ ರಾಜಾ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ ನೂತನ ಮುಖ್ಯಮಂತ್ರಿ ಗಂಡಾಪುರ್, ಆಯುಕ್ತರು ತಕ್ಷಣ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ ಎಂದು ಜಿಯೋ ನ್ಯೂಸ್ ವರದಿ ಮಾಡಿದೆ.
ಪಿಟಿಐ ಮಹಿಳಾ ಅಭ್ಯರ್ಥಿಗಳ ವಿರುದ್ಧದ ಎಫ್ಐಆರ್ಗಳನ್ನು ರದ್ದುಗೊಳಿಸುವಂತೆ ಮತ್ತು ಮೇ 9 ರ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಖಾಜಿ ಫೈಜ್ ಇಸಾ ಅವರನ್ನು ಅಲಿ ಅಮೀನ್ ಗಂಡಾಪುರ್ ಕೋರಿದ್ದಾರೆ.
ಪಿಟಿಐ ಸ್ಥಾಪಕ ಇಮ್ರಾನ್ ಖಾನ್ ಅವರ ಮೇಲಿನ ಆರೋಪಗಳ ಬಗ್ಗೆ ನ್ಯಾಯಯುತ ವಿಚಾರಣೆ ನಡೆಸಿ ಅವರನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದರು. ಇಮ್ರಾನ್ ಖಾನ್ ಅವರ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವುದಾಗಿ ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದರು.
ಆರ್ಥಿಕ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಗಂಡಾಪುರ್, "ನಾವು ನಮ್ಮ ಸ್ವಂತ ಕಾಲ ಮೇಲೆ ನಿಲ್ಲಬೇಕಿದೆ, ನಮ್ಮ ಆದಾಯ ಹೆಚ್ಚಿಸಿಕೊಳ್ಳಬೇಕಿದೆ ಮತ್ತು ಬಡವರ ಸಮಸ್ಯೆಗಳನ್ನು ಪರಿಹರಿಸಬೇಕಿದೆ" ಎಂದು ಹೇಳಿದರು.
ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಅಭ್ಯರ್ಥಿ ಇಬಾದುಲ್ಲಾ ಖಾನ್ ಅವರನ್ನು ಸೋಲಿಸಿ ಗಂಡಾಪುರ್ ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದಾರೆ. ಅಲಿ ಅಮೀನ್ ಗಂಡಾಪುರ್ ಅವರು ಕೇಂದ್ರದಲ್ಲಿ ಪಿಟಿಐ ಅಧಿಕಾರಾವಧಿಯಲ್ಲಿ ಕಾಶ್ಮೀರ ವ್ಯವಹಾರಗಳು ಮತ್ತು ಗಿಲ್ಗಿಟ್-ಬಾಲ್ಟಿಸ್ತಾನದ ಫೆಡರಲ್ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಅವರು 2013 ರಿಂದ 2018 ರವರೆಗೆ ಕೆಪಿ ಅಸೆಂಬ್ಲಿಯ ಸದಸ್ಯರಾಗಿ ಮತ್ತು ಖೈಬರ್ ಪಖ್ತುನಖ್ವಾ ಪ್ರಾಂತೀಯ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಚುನಾವಣೆಯ ಬಗ್ಗೆ ನೋಡುವುದಾದರೆ, ಚಲಾವಣೆಯಾದ ಒಟ್ಟು 291 ಮತಗಳಲ್ಲಿ ಸರ್ದಾರ್ ಅಯಾಜ್ ಸಾದಿಕ್ 199 ಮತಗಳನ್ನು ಪಡೆದಿದ್ದಾರೆ ಎಂದು ನಿರ್ಗಮಿತ ಸ್ಪೀಕರ್ ರಾಜಾ ಪರ್ವೇಜ್ ಅಶ್ರಫ್ ತಿಳಿಸಿದ್ದಾರೆ. ಸರ್ದಾರ್ ಅಯಾಜ್ ಸಾದಿಕ್ ಅವರು ಪಿಟಿಐ ಬೆಂಬಲಿತ ಅಭ್ಯರ್ಥಿ ಅಮೀರ್ ದೋಗರ್ ಅವರನ್ನು 91 ಮತಗಳಿಂದ ಸೋಲಿಸಿದರು.
ಇದನ್ನೂ ಓದಿ : ಪುಣೆ ನಕಲಿ ನೋಟು ಜಾಲ: ಚೀನಾದ ಪೋರ್ಟಲ್ನಿಂದ ಕಾಗದ ತರಿಸಿಕೊಂಡಿದ್ದ ಆರೋಪಿಗಳು