ಕರಾಚಿ, ಪಾಕಿಸ್ತಾನ: ಪಾಕಿಸ್ತಾನದ ಖೈಬರ್ ಕಣಿವೆಯ ಪಖ್ತುಂಖ್ವಾ, ಬಲೂಚಿಸ್ತಾನ್ ಮತ್ತು ಪಂಜಾಬ್‌ನಲ್ಲಿ ಸೇನೆ ಭಯೋತ್ಪಾದಕರ ವಿರುದ್ಧ ಭರ್ಜರಿ ಕಾರ್ಯಾಚರಣೆ ಕೈಗೊಂಡಿದೆ. ಇದರಲ್ಲಿ 16 ಉಗ್ರರನ್ನು ಕೊಂದು ಹಾಕಿದೆ. ಇದೇ ವೇಳೆ ಕಾರ್ಯಾಚರಣೆ ವೇಳೆ ನಾಲ್ವರು ಯೋಧರು ಅಸು ನೀಗಿದ್ದಾರೆ. ಉಗ್ರಗಾಮಿಗಳ ವಿರುದ್ಧ ಪಾಕ್ ಸೇನೆ ಉದ್ದೇಶಿತ ಕಾರ್ಯಾಚರಣೆಗಳನ್ನು ನಡೆಸಿತು ಎಂದು ಡಾನ್ ವರದಿ ಮಾಡಿದೆ.
ಬನ್ನು ಜಿಲ್ಲೆಯ ಬಕಾ ಖೇಲ್ ಪ್ರದೇಶದಲ್ಲಿ, ಗುಪ್ತಚರ ವರದಿ ಆಧರಿಸಿ ನಡೆದ ಕಾರ್ಯಾಚರಣೆಯಲ್ಲಿ ಐವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆ ವೇಳೆ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಜಾಂಗ್‌ನ 29 ವರ್ಷದ ಯೋಧ ಇಫ್ತಿಕರ್ ಹುಸೇನ್ ಹುತಾತ್ಮರಾಗಿದ್ದಾರೆ. ಭಯೋತ್ಪಾದನಾ ನಿಗ್ರಹದ ಭಾಗವಾಗಿ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ದೃಢಪಡಿಸಿದೆ.
ಖೈಬರ್ ಜಿಲ್ಲೆಯ ಶಾಗೈ ಪ್ರದೇಶದಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಕೊಲ್ಲಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ. ISPR ಪ್ರಕಾರ, ಲಾಹೋರ್‌ನ 25 ವರ್ಷದ ಕ್ಯಾಪ್ಟನ್ ಮುಹಮ್ಮದ್ ಜೊಹೈಬುದ್ದೀನ್ ಪಾಕ್ ಸೈನ್ಯವನ್ನು ಧೈರ್ಯದಿಂದ ಮುನ್ನಡೆಸಿದರು. ಅಷ್ಟೇ ಅಲ್ಲ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಅವರು ಅಸುನೀಗಿದರು. ಖೈಬರ್ ಆಕ್ರಮಣಕಾರರಲ್ಲಿ ಒಬ್ಬರು ಪತ್ರಕರ್ತ ಖಲೀಲ್ ಜಿಬ್ರಾನ್ ಅವರ ಹತ್ಯೆಯಲ್ಲಿ ಭಾಗಿಯಾಗಿದ್ದರು ಎಂದು ಸ್ಥಳೀಯ ಮೂಲಗಳು ಬಹಿರಂಗಪಡಿಸಿವೆ ಎಂದು ಡಾನ್ ವರದಿ ಮಾಡಿದೆ.
ಭಯೋತ್ಪಾದಕರನ್ನು ಧೈರ್ಯದಿಂದ ಹಿಮ್ಮೆಟ್ಟಿಸಿದ ಭದ್ರತಾ ಪಡೆಗಳು: ಲಕ್ಕಿ ಮಾರ್ವತ್‌ನ ದರ್ರಾ ಪೆಜು ಪಟ್ಟಣದಲ್ಲಿ ಪೊಲೀಸ್ ಠಾಣೆಯ ಮೇಲೆ ಮಧ್ಯರಾತ್ರಿ ನಡೆದ ದಾಳಿಯ ವೇಳೆ ಪೊಲೀಸ್ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ. ಶಸ್ತ್ರಸಜ್ಜಿತ ಭಯೋತ್ಪಾದಕರು ನಿಲ್ದಾಣ ವಶಪಡಿಸಿಕೊಳ್ಳುವ ಗುರಿಯೊಂದಿಗೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳೊಂದಿಗೆ ದ್ವಿಮುಖ ದಾಳಿ ನಡೆಸಿದ್ದರು. ಆದರೆ ಈ ದಾಳಿಯನ್ನು ಭದ್ರತಾಪಡೆಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ. ಇನ್ನು ಪಂಜಾಬ್‌ನ ಮಿಯಾನ್‌ವಾಲಿ ಜಿಲ್ಲೆಯಲ್ಲಿ ಚಾಪ್ರಿ ಪೊಲೀಸ್ ಠಾಣೆಯ ಮೇಲೆ ಉಗ್ರರ ದಾಳಿ ನಡೆಸಿದ್ದು, ಈ ದಾಳಿಯನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ರಾಕೆಟ್ ಲಾಂಚರ್‌ಗಳು ಮತ್ತು ಗ್ರೆನೇಡ್‌ಗಳೊಂದಿಗೆ ಶಸ್ತ್ರಸಜ್ಜಿತವಾದ 20 ಉಗ್ರರು ಒಂದು ಗಂಟೆಗಳ ಕಾಲ ದಾಳಿ ನಡೆಸಿದರು ಎಂದು ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ದಾಳಿಯ ತೀವ್ರತೆಯ ಹೊರತಾಗಿಯೂ, ಕಾನೂನು ಜಾರಿ ಸಿಬ್ಬಂದಿ ಅದನ್ನು ಯಶಸ್ವಿಯಾಗಿ ಎದುರಿಸಿದ್ದು, ನಾಲ್ವರು ಉಗ್ರಗಾಮಿಗಳನ್ನು ಹೊಡೆದುರುಳಿಸಲಾಗಿದೆ.
ಬಲೂಚಿಸ್ತಾನದ ಶೆರಾನಿ ಜಿಲ್ಲೆಯಲ್ಲಿ ಮೊಘಲ್ ಕೋಟ್ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಶಸ್ತ್ರಸಜ್ಜಿತ ಉಗ್ರಗಾಮಿಗಳ ಉಪಸ್ಥಿತಿಯ ಬಗ್ಗೆ ಗುಪ್ತಚರ ಮಾಹಿತಿಯ ಮೇರೆಗೆ ಪ್ರಾರಂಭಿಸಲಾದ ಕಾರ್ಯಾಚರಣೆಯು ನಿಷೇಧಿತ ಸಂಘಟನೆಯೊಂದಿಗೆ ಸಂಯೋಜಿತವಾಗಿರುವ ಭಯೋತ್ಪಾದಕರನ್ನು ತಟಸ್ಥಗೊಳಿಸಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಇದನ್ನು ಓದಿ: ಸಿರಿಯಾ ಸಂಘರ್ಷ ಮತ್ತಷ್ಟು ಭೀಕರ: 400 ಉಗ್ರರ ಹತ್ಯೆ, ಅಸಾದ್ ಬೆಂಬಲಕ್ಕೆ ನಿಂತ ರಷ್ಯಾ