ಇಸ್ಲಾಮಾಬಾದ್(ಪಾಕಿಸ್ತಾನ): ''1999ರಲ್ಲಿ ಪಾಕಿಸ್ತಾನವು ಭಾರತದೊಂದಿಗಿನ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿತ್ತು'' ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಒಪ್ಪಿಕೊಂಡಿದ್ದಾರೆ.
ಮಂಗಳವಾರ ನಡೆದ ಪಿಎಂಎಲ್-ಎನ್ ಜನರಲ್ ಕೌನ್ಸಿಲ್ ಸಭೆಯಲ್ಲಿ ದೇಶದ ಸುಪ್ರೀಂ ಕೋಟ್ನಿಂದ ಅನರ್ಹಗೊಂಡ ಆರು ವರ್ಷಗಳ ನಂತರ ಆಡಳಿತ ಪಕ್ಷದ ಅಧ್ಯಕ್ಷರಾಗಿ ನವಾಜ್ ಷರೀಫ್ ಅಧಿಕಾರ ವಹಿಸಿಕೊಂಡರು.
ಬಳಿಕ ಮಾತನಾಡಿದ ಅವರು, "ಮೇ 28, 1998ರಂದು ಪಾಕಿಸ್ತಾನವು ಐದು ಪರಮಾಣು ಪರೀಕ್ಷೆಗಳನ್ನು ನಡೆಸಿತ್ತು. ಆ ನಂತರ ವಾಜಪೇಯಿ ಸಾಹೇಬರು ಇಲ್ಲಿಗೆ ಬಂದು ನಮ್ಮೊಂದಿಗೆ ಲಾಹೋರ್ ಒಪ್ಪಂದ ಮಾಡಿಕೊಂಡರು. ಆದರೆ ನಾವು ಆ ಒಪ್ಪಂದವನ್ನು ಉಲ್ಲಂಘಿಸಿದೆವು. ಅದು ನಮ್ಮ ತಪ್ಪು'' ಎಂದರು.
''ಅಟಲ್ ಬಿಹಾರಿ ವಾಜಪೇಯಿ ಫೆಬ್ರವರಿ 21, 1999ರಂದು ಲಾಹೋರ್ ಒಪ್ಪಂದಕ್ಕೆ ಸಹಿ ಹಾಕಿದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಮತ್ತು ಸ್ಥಿರತೆಯನ್ನು ಬೆಳೆಸುವುದು ಒಪ್ಪಂದದ ಗುರಿಯಾಗಿತ್ತು. ಆದರೆ, ಸ್ವಲ್ಪ ಸಮಯದ ನಂತರ ಪಾಕಿಸ್ತಾನಿ ಪಡೆಗಳು ಜಮ್ಮು ಮತ್ತು ಕಾಶ್ಮೀರದ ಕಾರ್ಗಿಲ್ ಜಿಲ್ಲೆಯ ಮೇಲೆ ದಾಳಿ ನಡೆಸಿದವು. ಇದು ಕಾರ್ಗಿಲ್ ಯುದ್ಧಕ್ಕೆ ಕಾರಣವಾಯಿತು" ಎಂದು ಅವರು ತಿಳಿಸಿದರು.
ಮುಂದುವರೆದು ಮಾತನಾಡಿ, "ಆಗಿನ ಯುಎಸ್ ಅಧ್ಯಕ್ಷ ಬಿಲ್ ಕ್ಲಿಂಟನ್ ಪಾಕಿಸ್ತಾನಕ್ಕೆ ಪರಮಾಣು ಪರೀಕ್ಷೆಗಳನ್ನು ನಡೆಸದಂತೆ ತಡೆಯಲು 5 ಬಿಲಿಯನ್ ಡಾಲರ್ ನೀಡಿದ್ದರು. ಆದರೆ, ನಾನು ನಿರಾಕರಿಸಿದೆ. (ಮಾಜಿ ಪ್ರಧಾನಿ) ಇಮ್ರಾನ್ ಖಾನ್ ಅಂತಹ ವ್ಯಕ್ತಿಯಂತೆ ನನ್ನ ಆಸನದಲ್ಲಿ ಇದ್ದಿದ್ದರೆ ಅವರು ಕ್ಲಿಂಟನ್ ಪ್ರಸ್ತಾಪವನ್ನು ಸ್ವೀಕರಿಸುತ್ತಿದ್ದರು. ಇದೀಗ ಪಾಕಿಸ್ತಾನ ಮೊದಲ ಪರಮಾಣು ಪರೀಕ್ಷೆಯ 26ನೇ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ'' ಎಂದು ಷರೀಫ್ ಹೇಳಿದ್ದಾರೆ.
ಇದನ್ನೂ ಓದಿ: ರಫಾ ಮೇಲೆ ಇಸ್ರೇಲ್ ದಾಳಿ: ಕದನ ವಿರಾಮ ಮಾತುಕತೆಯಿಂದ ಹಿಂದೆ ಸರಿದ ಹಮಾಸ್ - Hamas Israel ceasefire talks