ಇಸ್ಲಾಮಾಬಾದ್ (ಪಾಕಿಸ್ತಾನ): ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಪ್ರಕರಣದಲ್ಲಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ವಿಧಿಸಿದ್ದ 14 ವರ್ಷಗಳ ಜೈಲು ಶಿಕ್ಷೆಯನ್ನು ಹೈಕೋರ್ಟ್ ಅಮಾನತುಗೊಳಿಸಿದೆ. ತೋಷಖಾನಾ ಪ್ರಕರಣದಲ್ಲಿ ಶಿಕ್ಷೆಯ ವಿರುದ್ಧದ ಅರ್ಜಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ. ಬಳಿಕ ಶಿಕ್ಷೆಯ ವಿರುದ್ಧದ ಅವರ ಮೇಲ್ಮನವಿಗಳನ್ನು ಮುಂದಿನ ತಿಂಗಳು ಈದ್ ಹಬ್ಬದ ನಂತರ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಾಲಯ ಘೋಷಿಸಿದೆ.
ಖಾನ್ ಅವರು ಇತರ ಪ್ರಕರಣಗಳಲ್ಲಿ ಅಪರಾಧಿ ಆಗಿರುವುದರಿಂದ ಅವರನ್ನು ಬಿಡುಗಡೆ ಮಾಡಲಾಗುವುದಿಲ್ಲ ಮತ್ತು ಇತರ ಪ್ರಕರಣಗಳಲ್ಲಿನ ಆರೋಪಗಳಿಂದ ಮುಕ್ತರಾಗುವವರೆಗೆ ಬಿಡುಗಡೆ ಸಾಧ್ಯವಿಲ್ಲ. ಅದೇ ರೀತಿ ಬುಶ್ರಾ ಕೂಡ ಮತ್ತೊಂದು ಪ್ರಕರಣದಲ್ಲಿ ದೋಷಿಯಾಗಿದ್ದು, ಶಿಕ್ಷೆಯನ್ನು ಅಮಾನತುಗೊಳಿಸಿದ ನಂತರ ಬಿಡುಗಡೆ ಆಗದಿರಬಹುದು.
ಇನ್ನು, ನ್ಯಾಯಾಲಯದ ಆದೇಶದಿಂದಾಗಿ ಇಮ್ರಾನ್ ಖಾನ್ ಶಿಕ್ಷೆಯಿಂದ ಪಾರಾಗಿದ್ದಾರೆ. ಆದರೆ ಅವರು ಮತ್ತು ಅವರ ಪತ್ನಿ ಬುಶ್ರಾ ಮುಂದಿನ 10 ವರ್ಷಗಳವರೆಗೆ ಯಾವುದೇ ಸಾರ್ವಜನಿಕ ಸ್ಥಾನವನ್ನು ಹೊಂದಲು ಸಾಧ್ಯವಾಗುವುದಿಲ್ಲ. ತೋಷಖಾನಾ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ಸಾರ್ವತ್ರಿಕ ಚುನಾವಣೆಗೂ ಮುನ್ನ ಪಾಕಿಸ್ತಾನದ ಎನ್‌ಎಬಿ ನ್ಯಾಯಾಲಯ ಈ ಶಿಕ್ಷೆ ವಿಧಿಸಿತ್ತು. ಇದಾದ ಕೇವಲ ಒಂದು ದಿನದ ಬಳಿಕ ಮದುವೆಗೆ ಸಂಬಂಧಿಸಿದ ಪ್ರಕರಣದಲ್ಲಿ ಇಬ್ಬರಿಗೂ ಪ್ರತ್ಯೇಕವಾಗಿ ಹೆಚ್ಚುವರಿ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
ಏನಿದು ಪ್ರಕರಣ: ಸರ್ಕಾರಕ್ಕೆ ಬಂದ ತೋಷಖಾನಾದಲ್ಲಿನ ಸರ್ಕಾರಿ ಉಡುಗೊರೆಗಳ ಮಾರಾಟದಿಂದ ಬಂದ ಲಾಭವನ್ನು ಮರೆಮಾಚಿದ ಆರೋಪದ ಮೇಲೆ ಇಸ್ಲಾಮಾಬಾದ್ ಮೂಲದ ಸೆಷನ್ಸ್ ನ್ಯಾಯಾಲಯವು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಅವರಿಗೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಅವರನ್ನು ಲಾಹೋರ್ನ ಅವರ ಜಮಾನ್ ಪಾರ್ಕ್ ನಿವಾಸದಿಂದ ಬಂಧಿಸಲಾಗಿತ್ತು.
ತೋಷಖಾನಾ ಇದು ಕ್ಯಾಬಿನೆಟ್ ವಿಭಾಗದ ಅಡಿಯಲ್ಲಿನ ಇಲಾಖೆಯಾಗಿದ್ದು, ಆಡಳಿತದಲ್ಲಿರುವವರು ಮತ್ತು ಸರ್ಕಾರಿ ಅಧಿಕಾರಿಗಳಿಗೆ ವಿದೇಶಿ ಸರ್ಕಾರಗಳ ಮುಖ್ಯಸ್ಥರು ಮತ್ತು ವಿದೇಶಿ ಗಣ್ಯರು ನೀಡಿದ ಉಡುಗೊರೆಗಳನ್ನು ಸಂಗ್ರಹಿಸಿ ಇಡುತ್ತದೆ. ಇಮ್ರಾನ್ ಖಾನ್ ಅವರು ಸೌದಿ ರಾಜಕುಮಾರ ನೀಡಿದ ಅಮೂಲ್ಯ ಗಡಿಯಾರ ಸೇರಿದಂತೆ ಕೆಲ ಉಡುಗೊರೆಗಳನ್ನು ಖರೀದಿಸಿ ಅವನ್ನು ಹೆಚ್ಚಿನ ಲಾಭಕ್ಕೆ ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಧಾನಿಯಾಗಿದ್ದಾಗ ಇಮ್ರಾನ್ ಅವರಿಗೆ ತೋಷಖಾನಾದಿಂದ ಉಡುಗೊರೆಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಅಧಿಕಾರವಿತ್ತು. ಆದರೆ ಹೀಗೆ ಮಾರಾಟದಿಂದ ಬಂದ ಲಾಭವನ್ನು ಅವರು ಪಾಕಿಸ್ತಾನದ ಚುನಾವಣಾ ಆಯೋಗಕ್ಕೆ ತಿಳಿಸಿರಲಿಲ್ಲ. ಇದು ಕಾನೂನಿನ ಅಡಿಯಲ್ಲಿ ಅಪರಾಧವಾಗಿದೆ. ಅಧಿಕಾರ ಕಳೆದುಕೊಂಡು ರಾಜಕೀಯವಾಗಿ ಒಬ್ಬಂಟಿಯಾಗಿರುವ ಇಮ್ರಾನ್ ಖಾನ್ ಈ ಪ್ರಕರಣದಲ್ಲಿ ಜೈಲುಪಾಲಾಗಿದ್ದರು.
ಓದಿ: Pakistan: ಪಾಕಿಸ್ತಾನದಲ್ಲಿ ಜೈಲುಪಾಲಾದ ಮಾಜಿ ಪ್ರಧಾನಿಗಳು ಯಾರ‍್ಯಾರು?