ವಿಶ್ವಸಂಸ್ಥೆ : ಸುಡಾನ್ನಲ್ಲಿ ಸುಮಾರು ಒಂದು ವರ್ಷದಿಂದ ನಡೆಯುತ್ತಿರುವ ಹೋರಾಟದಲ್ಲಿ ಸಾವಿರಾರು ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನ ಸ್ಥಳಾಂತರಗೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಸತ್ಯಶೋಧನಾ ನಿಯೋಗ ವರದಿ ಮಾಡಿದೆ.
ಕಳೆದ ಏಪ್ರಿಲ್ನಲ್ಲಿ ಸುಡಾನ್ ಸಶಸ್ತ್ರ ಪಡೆಗಳು (ಎಸ್ಎಎಫ್) ಮತ್ತು ಕ್ಷಿಪ್ರ ಬೆಂಬಲ ಪಡೆಗಳ (ಆರ್ಎಸ್ಎಫ್) ನಡುವೆ ಆರಂಭವಾದ ಹೋರಾಟದಲ್ಲಿ ಸಾವಿರಾರು ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರ ಮುಖ್ಯ ವಕ್ತಾರ ಸ್ಟೀಫನ್ ಡುಜಾರಿಕ್ ಗುರುವಾರ ಹೇಳಿದ್ದಾರೆ.
ಆರು ದಶಲಕ್ಷಕ್ಕೂ ಹೆಚ್ಚು ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದರೆ, ಸುಮಾರು ಎರಡು ಮಿಲಿಯನ್ ನಿರಾಶ್ರಿತರು ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಸುಮಾರು 24 ಮಿಲಿಯನ್ ಜನರಿಗೆ ಪರಿಹಾರ ಹಾಗೂ ಸಹಾಯದ ಅಗತ್ಯವಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಸುಡಾನ್ನಲ್ಲಿ ಭೀಕರ ಸಂಘರ್ಷ ಆರಂಭವಾಗಿ ಈ ವರ್ಷದ ಏಪ್ರಿಲ್ 15ಕ್ಕೆ ಒಂದು ವರ್ಷವಾಗಿದೆ.
ಸುಡಾನ್ ಮತ್ತು ಅದರ ನೆರೆಹೊರೆಯ ಪ್ರದೇಶಗಳಿಗೆ ಮಾನವೀಯ ನೆರವು ತಲುಪಿಸುವ ನಿಟ್ಟಿನಲ್ಲಿ ಫ್ರಾನ್ಸ್, ಜರ್ಮನಿ ಮತ್ತು ಯುರೋಪಿಯನ್ ಯೂನಿಯನ್ ಸೋಮವಾರ ಪ್ಯಾರಿಸ್ನಲ್ಲಿ ಜಂಟಿ ಮಾನವೀಯ ಸಭೆ ಆಯೋಜಿಸಲಿವೆ ಎಂದು ಡುಜಾರಿಕ್ ಹೇಳಿದರು.
ಮಾನವೀಯ ವ್ಯವಹಾರಗಳ ಸಹಾಯಕ ಪ್ರಧಾನ ಕಾರ್ಯದರ್ಶಿ ಜಾಯ್ಸ್ ಮಸೂಯಾ ಮತ್ತು ವಿಶ್ವಸಂಸ್ಥೆಯ ಇತರ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಸುಡಾನ್ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಹಾಯ ಕಾರ್ಯಾಚರಣೆಗಳನ್ನು ವಿಸ್ತರಿಸಲು ಸಂಪನ್ಮೂಲಗಳ ಕ್ರೋಢೀಕರಣಕ್ಕೆ ಸಲಹೆ ನೀಡಲಿದ್ದಾರೆ ಎಂದು ಅವರು ಹೇಳಿದರು. ಸಹಾಯದ ಅಗತ್ಯವಿರುವ ಜನರಿಗೆ ಜೀವ ಉಳಿಸುವ ಸಾಮಗ್ರಿಗಳನ್ನು ಸಕಾಲಕ್ಕೆ ತಲುಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಲಿದೆ.
ಏಪ್ರಿಲ್ 15, 2023 ರಿಂದ ಸುಡಾನ್ನಲ್ಲಿ ಎಸ್ಎಎಫ್ ಮತ್ತು ಆರ್ಎಸ್ಎಫ್ ಪಡೆಗಳ ಮಧ್ಯೆ ಭೀಕರ ಹಿಂಸಾತ್ಮಕ ಘರ್ಷಣೆ ನಡೆಯುತ್ತಿದೆ. ಅಕ್ಟೋಬರ್ 2021 ರ ದಂಗೆಯಲ್ಲಿ ದೇಶದಲ್ಲಿ ಅಧಿಕಾರದಲ್ಲಿದ್ದ ನಾಗರಿಕ ಸರ್ಕಾರ ಪತನಗೊಂಡಿತ್ತು. ಇದರ ನಂತರ ದೇಶದ ಅಧಿಕಾರ ಹಿಡಿಯುವ ಸಲುವಾಗಿ ಸೇನೆ ಮತ್ತು ಆರ್ಎಸ್ಎಫ್ ಮಧ್ಯೆ ವ್ಯಾಪಕ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದ್ದವು. ನಂತರ ಎರಡೂ ಬಣಗಳ ಮಧ್ಯೆ ಆರಂಭವಾದ ಸಂಘರ್ಷದಲ್ಲಿ ಸಾವಿರಾರು ನಾಗರಿಕರು ಸಾವನ್ನಪ್ಪಿರುವುದು ಮಾತ್ರವಲ್ಲದೆ, ದೇಶದ ಅನೇಕ ಮೂಲಭೂತ ಸೌಕರ್ಯಗಳು ನಾಶವಾಗಿವೆ. ವಿಶೇಷವಾಗಿ ರಾಜಧಾನಿ ಖಾರ್ಟೂಮ್ನಲ್ಲಿ ಸಂಘರ್ಷದ ತೀವ್ರತೆ ಹೆಚ್ಚಾಗಿದೆ.
ಇದನ್ನೂ ಓದಿ : ಕೆನಡಾ ಚುನಾವಣೆಗಳಲ್ಲಿ ಚೀನಾ ರಾಜಕೀಯ ಹಸ್ತಕ್ಷೇಪ: ಗುಪ್ತಚರ ಸಂಸ್ಥೆ ಆರೋಪ - Canada Election