ಸಿಯೋಲ್: ಅಮೆರಿಕ ಮತ್ತು ದಕ್ಷಿಣ ಕೊರಿಯಾದೊಂದಿಗಿನ ಉದ್ವಿಗ್ನತೆಯ ನಡುವೆ, ಉತ್ತರ ಕೊರಿಯಾ ಮಂಗಳವಾರ ಮತ್ತೊಮ್ಮೆ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಿದೆ. ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು (IRBM) ಪೂರ್ವ ಕರಾವಳಿ ಪ್ರದೇಶದ ಕಡೆಗೆ ಹಾರಿಸಲಾಗಿದೆ ಎಂದು ದಕ್ಷಿಣ ಕೊರಿಯಾದ ಸೇನೆಯು ಮಾಹಿತಿಯನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ಒಂದು ದಿನದ ಬಳಿಕ ವರದಿ ಮಾಡಿವೆ. ದಕ್ಷಿಣ ಕೊರಿಯಾವನ್ನು ಕೆರಳಿಸಲು ಉತ್ತರ ಕೊರಿಯಾ ಈ ರೀತಿಯ ಕ್ಷಿಪಣಿಗಳ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದು ದಕ್ಷಿಣ ಕೊರಿಯಾ ಆರೋಪಿಸಿದೆ. ಇಂತಹ ಪರೀಕ್ಷೆಗಳು ಕೊರಿಯನ್ ಪರ್ಯಾಯ ದ್ವೀಪಕ್ಕೆ ಬೆದರಿಕೆಯಾಗಿವೆ ಎಂದೂ ಅದು ಕಳವಳ ವ್ಯಕ್ತಪಡಿಸಿದೆ.
ಇದು ಈ ವರ್ಷದಲ್ಲಿ ಉತ್ತರ ಕೊರಿಯಾದಿಂದ ಉಡಾವಣೆಯಾದ ಮೂರನೇ ಕ್ಷಿಪಣಿಯಾಗಿದೆ. ದಕ್ಷಿಣ ಕೊರಿಯಾದ ಮಿಲಿಟರಿ ಹೇಳಿಕೆ ಉಲ್ಲೇಖಿಸಿ ಸಿಯೋಲ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಈ ಕ್ಷಿಪಣಿಯು ಹೈಪರ್ಸಾನಿಕ್ ಸಿಡಿತಲೆ ಹೊಂದಿದ್ದು, ಸಮುದ್ರಕ್ಕೆ ಬೀಳುವ ಮೊದಲು ಸುಮಾರು 570 ಕಿಲೋಮೀಟರ್ ಪ್ರಯಾಣಿಸಿದೆ ಎಂದು ಅಂದಾಜಿಸಲಾಗಿದೆ.
ಮಂಗಳವಾರ ಬೆಳಗ್ಗೆ 6.53ಕ್ಕೆ ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್‌ಯಾಂಗ್‌ನಿಂದ ಕ್ಷಿಪಣಿ ಉಡಾವಣೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದೆ ಎಂದು ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಮತ್ತೊಂದು ಕಡೆ ದಕ್ಷಿಣ ಕೊರಿಯಾ ಭದ್ರತಾ ಪಡೆ ಕಣ್ಗಾವಲು ಹೆಚ್ಚಿಸಿದೆ. ಇದರೊಂದಿಗೆ ಅಮೆರಿಕ ಮತ್ತು ಜಪಾನ್ ಜತೆಗೂ ಈ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಉತ್ತರ ಕೊರಿಯಾದ ಮಾಧ್ಯಮಗಳು ಮಾಹಿತಿ ಹಂಚಿಕೊಂಡಿದ್ದು, ಕಿಮ್ ಜೊಂಗ್ ಉನ್ ಅವರ ಸಮ್ಮುಖದಲ್ಲಿ ಹ್ವಾಸಾಂಗ್-16ಬಿ ಹೆಸರಿನ ಕ್ಷಿಪಣಿಯನ್ನು ಪರೀಕ್ಷೆ ಮಾಡಲಾಗಿದೆ. ಪರಮಾಣು ಯುದ್ಧ ಭಾಗವಾಗಿ ತಮ್ಮ ಶತ್ರು ರಾಷ್ಟ್ರಗಳನ್ನು ಎದುರಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕ್ಷಿಪಣಿಗಳನ್ನು ನಿರ್ಮಿಸಲು ಮುಂದಾಗಿದೆ. ಉತ್ತರ ಕೊರಿಯಾವು ಈಗ ವಿವಿಧ ಶ್ರೇಣಿಗಳ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಿದೆ ಎಂದು ಕಿಮ್ ಹೇಳಿಕೊಂಡಿರುವುದಾಗಿ ಸುದ್ದಿ ಸಂಸ್ಥೆ ತಿಳಿಸಿದೆ.
ನಿರಂತರ ಪರೀಕ್ಷೆ: ಕಳೆದ ತಿಂಗಳು, ಉತ್ತರ ಕೊರಿಯಾ ತನ್ನ ಹೊಸ ಮಧ್ಯಮ-ಶ್ರೇಣಿಯ ಹೈಪರ್ಸಾನಿಕ್ ಕ್ಷಿಪಣಿಯ ಪರೀಕ್ಷೆಯನ್ನು ನಡೆಸಿತ್ತು. ಇದಕ್ಕೂ ಮೊದಲು, ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ಅನ್ನು ಗುರಿಯಾಗಿಸಲು ವಿನ್ಯಾಸಗೊಳಿಸಲಾದ ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ರಾಕೆಟ್‌ಗಳ ಪರೀಕ್ಷೆ ನಡೆಸಲಾಗಿತ್ತು.