ನ್ಯೂಯಾರ್ಕ್ (ಅಮೆರಿಕ): ಅಧ್ಯಕ್ಷೀಯ ಚುನಾವಣೆಗೂ ಮೊದಲು ಡೊನಾಲ್ಡ್ ಟ್ರಂಪ್ ಸರಣಿ ಆಘಾತಗಳನ್ನು ಎದುರಿಸುವಂತಾಗಿದೆ. ತನ್ನ ಕಂಪನಿಯ ವಿಮಾದಾರರು, ಸಿಬ್ಬಂದಿ, ಬ್ಯಾಂಕ್ಗಳಿಗೆ ವಂಚಿಸಿದ ಸಿವಿಲ್ ಪ್ರಕರಣದಲ್ಲಿ 355 ಮಿಲಿಯನ್ ಡಾಲರ್ ದಂಡನೆಗೆ ಒಳಗಾಗಿದ್ದಾರೆ. ನ್ಯೂಯಾರ್ಕ್ ಕೋರ್ಟ್ ಅಮೆರಿಕದ ಮಾಜಿ ಅಧ್ಯಕ್ಷರಿಗೆ ದಂಡವನ್ನು ಕಟ್ಟುವಂತೆ ಶುಕ್ರವಾರ ಆದೇಶಿಸಿದೆ. ಜೊತೆಗೆ ಟ್ರಂಪ್ ಮೂರು ವರ್ಷ ಕಂಪನಿಯ ನಿರ್ದೇಶಕರಾಗುವಂತಿಲ್ಲ ಎಂಬ ನಿರ್ಬಂಧವನ್ನೂ ಹೇರಿದೆ.
ಟ್ರಂಪ್ ಮತ್ತು ಕುಟುಂಬಸ್ಥರು ನಡೆಸುತ್ತಿರುವ ಕಂಪನಿಯಲ್ಲಿ ಆದಾಯಕ್ಕಿಂತಲೂ ಅಧಿಕವಾಗಿ ಲಾಭವನ್ನು ತೋರಿಸಿ ಬ್ಯಾಂಕ್ಗಳಿಂದ ಸಾಲ, ವಿಮೆ ಪಡೆದುಕೊಂಡಿದ್ದರು. ಬಳಿಕ ಮರುಪಾವತಿಯಲ್ಲಿ ನಷ್ಟ ತೋರಿಸಿದ್ದರು. ಇದರಿಂದ ಸಿಬ್ಬಂದಿ ಸೇರಿ ಬ್ಯಾಂಕ್, ವಿಮಾ ಕಂಪನಿ ನಷ್ಟವಾಗುವಂತೆ ಮಾಡಿದ್ದರು. ಇದರ ವಿರುದ್ಧ ದಾಖಲಾದ ಪ್ರಕರಣದಲ್ಲಿ ನ್ಯೂಯಾರ್ಕ್ ಕೋರ್ಟ್ ಇದೀಗ ಮಾಜಿ ಅಧ್ಯಕ್ಷರಿಗೆ ಭಾರೀ ಪ್ರಮಾಣದ ದಂಡ ವಿಧಿಸಿದೆ.
ಟ್ರಂಪ್ ಮಕ್ಕಳಿಗೂ ದಂಡ: ಪ್ರಕರಣದಲ್ಲಿ ಟ್ರಂಪ್ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ಪುತ್ರಿ ಎರಿಕ್ ಟ್ರಂಪ್ಗೂ ಕೂಡ ತಲಾ 4 ಮಿಲಿಯನ್ ಡಾಲರ್ ದಂಡ ವಿಧಿಸಲಾಗಿದೆ. ಜೊತೆಗೆ ಇಬ್ಬರೂ ಕೂಡ 2 ವರ್ಷ ನಿರ್ದೇಶಕರಾಗುವಂತಿಲ್ಲ ಎಂಬ ನಿರ್ಬಂಧವನ್ನು ಹಾಕಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ಕೋರ್ಟ್ನ ನ್ಯಾಯಾಧೀಶ ಆರ್ಥರ್ ಎಂಗೊರಾನ್ ಅವರು ಜನವರಿಯಲ್ಲಿ ಪ್ರಕರಣವನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದರು. ಫೆಬ್ರವರಿ 16 ರಂದು ಅಂತಿಮ ತೀರ್ಪು ಪ್ರಕಟಿಸಿದ್ದಾರೆ. ಟ್ರಂಪ್ ಕಂಪನಿಯು ಬೇಕಂತಲೇ ಹಣದ ಅವ್ಯವಹಾರ ನಡೆಸಿದೆ ಎಂದು ಆರೋಪಿಸಲಾಗಿದೆ. ಟ್ರಂಪ್ ಕುಟುಂಬಕ್ಕೆ ದಂಡದ ಜೊತೆಗೆ ಅಧಿಕಾರದ ಮೇಲೂ ನಿರ್ಬಂಧ ವಿಧಿಸಿ ತೀರ್ಪು ನೀಡಲಾಗಿದೆ.
ಆರೋಪ ನಿರಾಕರಿಸಿದ ಟ್ರಂಪ್: ಕೋರ್ಟ್ ತೀರ್ಪಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್, ಪ್ರಕರಣದಲ್ಲಿ ತಮ್ಮ ಮೇಲೆ ಹಾಕಲಾಗಿರುವ ದಂಡ ಮತ್ತು ತೀರ್ಪನ್ನು ಒಪ್ಪಲಾಗಲ್ಲ. ಇದು ರಾಜಕೀಯ ಪ್ರೇರಿತ ಮತ್ತು ನನ್ನನ್ನೇ ವಂಚಿಸುವ ಆದೇಶವಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ ತಾವೂ ಕೂಡ ಯಾವ ತಪ್ಪು ಮಾಡಿಲ್ಲ ಎಂದು ಟ್ರಂಪ್ ಪುತ್ರ, ಪುತ್ರಿ ಹೇಳಿದ್ದಾರೆ.
ನ್ಯೂಯಾರ್ಕ್ ಕೋರ್ಟ್ ಪ್ರಕರಣದಲ್ಲಿ ಅಸಲಿಗೆ ಟ್ರಂಪ್ ಮೇಲೆ 370 ಮಿಲಿಯನ್ ಡಾಲರ್ ದಂಡವನ್ನು ವಿಧಿಸಿತ್ತು. 15 ಮಿಲಿಯನ್ ಕಡಿತಗೊಳಿಸಿ, 355 ಅಮೆರಿಕನ್ ಮಿಲಿಯನ್ ಡಾಲರ್ ಪಾವತಿಸುವಂತೆ ಆದೇಶಿಸಲಾಗಿದೆ. 90 ಪುಟಗಳ ಆದೇಶವನ್ನು ಕೋರ್ಟ್ ನೀಡಿದೆ.
ಇದನ್ನೂ ಓದಿ: ಪೋರ್ನ್ಸ್ಟಾರ್ಗೆ ಹಣ ನೀಡಿದ ಆರೋಪ: ಟ್ರಂಪ್ ಮನವಿ ತಿರಸ್ಕರಿಸಿ, ವಿಚಾರಣೆಗೆ ದಿನಾಂಕ ನಿಗದಿ ಮಾಡಿದ ಕೋರ್ಟ್