ಮನಾಡೊ(ಇಂಡೋನೇಷ್ಯಾ): ಇಂಡೋನೇಷ್ಯಾದ ಮೌಂಟ್ ರುವಾಂಗ್ ಜ್ವಾಲಾಮುಖಿ ಎರಡು ವಾರಗಳ ಅವಧಿಯಲ್ಲಿ ಮಂಗಳವಾರ ಎರಡನೇ ಬಾರಿಗೆ ಸ್ಫೋಟಗೊಂಡಿದೆ. ಆಕಾಶದಲ್ಲಿ ಸುಮಾರು 2 ಕಿಲೋಮೀಟರ್ (ಒಂದು ಮೈಲಿಗಿಂತ ಹೆಚ್ಚು)ನಷ್ಟು ಎತ್ತರಕ್ಕೆ ಬೂದಿ ಚಿಮ್ಮಿದೆ.
ಸುಲಾವೆಸಿ ದ್ವೀಪದಲ್ಲಿ ಸ್ಫೋಟಗೊಂಡ ಈ ಜ್ವಾಲಾಮುಖಿಯ ಎಚ್ಚರಿಕೆಯ ಮಟ್ಟವನ್ನು ಇಂಡೋನೇಷ್ಯಾದ ಭೂವೈಜ್ಞಾನಿಕ ಇಲಾಖೆಯು ಮತ್ತೆ ಅತ್ಯುನ್ನತ ಮಟ್ಟಕ್ಕೆ ಏರಿಸಿದೆ. ಜ್ವಾಲಾಮುಖಿಯ ಕುಳಿಯಿಂದ ಕನಿಷ್ಠ 6 ಕಿಲೋಮೀಟರ್ (3.7 ಮೈಲಿ) ಅಂತರ ಕಾಯ್ದುಕೊಳ್ಳುವಂತೆ ನಿವಾಸಿಗಳು ಮತ್ತು ಪರ್ವತಾರೋಹಿಗಳಿಗೆ ಸರ್ಕಾರ ಎಚ್ಚರಿಕೆ ನೀಡಿದೆ.
ಉತ್ತರ ಸುಲಾವೆಸಿ ಪ್ರಾಂತ್ಯದ 725 ಮೀಟರ್ (2,378 ಅಡಿ) ಆಳದ ಜ್ವಾಲಾಮುಖಿಯು ಪ್ರಾಂತೀಯ ರಾಜಧಾನಿ ಮನಾಡೊದ ಸ್ಯಾಮ್ ರತುಲಾಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈಶಾನ್ಯಕ್ಕೆ ಸುಮಾರು 95 ಕಿಲೋಮೀಟರ್ (59 ಮೈಲಿ) ದೂರದಲ್ಲಿದೆ. ಗೋಚರತೆ ಕಡಿಮೆಯಾಗಿರುವುದರಿಂದ ಮತ್ತು ಬೂದಿಯಿಂದ ವಿಮಾನದ ಎಂಜಿನ್ಗಳಿಗೆ ಹಾನಿಯುಂಟಾಗುವ ಸಾಧ್ಯತೆ ಇರುವುದರಿಂದ ಮಂಗಳವಾರ ಬೆಳಗ್ಗೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ ಎಂದು ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥ ಅಂಬರ್ ಸೂರ್ಯೋಕೊ ತಿಳಿಸಿದ್ದಾರೆ.
4,30,000ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಮನಾಡೊ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೂದಿ ಮತ್ತು ಬಂಡೆಗಳು ಆಕಾಶದಿಂದ ಬಿದ್ದವು. ಬೂದಿ ಹಾಗೂ ಹೊಗೆಯಿಂದಾಗಿ ಮುಂದಿನ ರಸ್ತೆ ಕಾಣದಾಗಿದ್ದರಿಂದ ಹಗಲಿನಲ್ಲಿಯೇ ವಾಹನಗಳು ಹೆಡ್ಲೈಟ್ ಹಾಕಿಕೊಂಡು ಓಡಾಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಸ್ಫೋಟದಿಂದ ತೀವ್ರಗತಿಯ ಕಂಪನಗಳು ಉಂಟಾಗಿ ವಿದ್ಯುಚ್ಛಕ್ತಿ ಕಡಿತಗೊಂಡಿತ್ತು. ಅಲ್ಲದೆ ಕಂಪನದಿಂದಾಗಿ ಕಿಟಕಿಗಳ ಗಾಜುಗಳು ಕೂಡ ಒಡೆದು ಹೋದವು ಎಂದು ಮೌಂಟ್ ರುವಾಂಗ್ ಮೇಲ್ವಿಚಾರಣಾ ಪೋಸ್ಟ್ನ ಮುಖ್ಯಸ್ಥ ಯೂಲಿಯಸ್ ರಾಮೊಪೊಲಿ ಹೇಳಿದ್ದಾರೆ.
ಈ ಹಿಂದೆ ಏಪ್ರಿಲ್ 17ರಂದು ಸಂಭವಿಸಿದ ಜ್ವಾಲಾಮುಖಿ ಸ್ಫೋಟದ ನಂತರ 11,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಸರ್ಕಾರವು ತನ್ನ ಎಚ್ಚರಿಕೆಯ ಮಟ್ಟವನ್ನು ನಾಲ್ಕು ಹಂತಗಳಿಂದ ಎರಡನೇ ಗರಿಷ್ಠ ಮಟ್ಟಕ್ಕೆ ಇಳಿಸಿದ ನಂತರ 3,000ಕ್ಕಿಂತ ಕಡಿಮೆ ಜನರು ತಾತ್ಕಾಲಿಕ ಆಶ್ರಯಗಳಲ್ಲಿ ಉಳಿದಿದ್ದಾರೆ.
ಇಂಡೋನೇಷ್ಯಾದ ಸುಮಾರು 130 ಸಕ್ರಿಯ ಜ್ವಾಲಾಮುಖಿಗಳ ಪೈಕಿ ರುವಾಂಗ್ ಕೂಡ ಒಂದು. ಪೆಸಿಫಿಕ್ ರಿಂಗ್ ಆಫ್ ಫೈರ್ನಲ್ಲಿ ನೆಲೆಗೊಂಡಿರುವ ಕಾರಣ ಇಂಡೋನೇಷ್ಯಾದಲ್ಲಿ ಆಗಾಗ ಭೂಕಂಪ ಮತ್ತು ಜ್ವಾಲಾಮುಖಿ ಸ್ಪೋಟಗಳು ಸಂಭವಿಸುತ್ತವೆ. ಪೆಸಿಫಿಕ್ ರಿಂಗ್ ಆಫ್ ಫೈರ್ ಇದು ಅಮೆರಿಕದ ಪಶ್ಚಿಮ ಕರಾವಳಿಗಳಿಂದ ಜಪಾನ್ ಮತ್ತು ಆಗ್ನೇಯ ಏಷ್ಯಾದ ಮೂಲಕ ವ್ಯಾಪಿಸಿರುವ ದೋಷ ರೇಖೆಗಳ ಸರಣಿಯಾಗಿದೆ.