ಮಾಸ್ಕೋ (ರಷ್ಯಾ): ರಷ್ಯಾವು ಸುಖ - ದುಃಖದ ಪಾಲುದಾರ ಸ್ನೇಹಿತ. ಭಾರತ - ರಷ್ಯಾ ನಡುವಿನ ಸೌಹಾರ್ದತೆಯನ್ನು ಇನ್ನಷ್ಟು ಪಸರಿಸುವಲ್ಲಿ ‘ಆತ್ಮೀಯ ಗೆಳೆಯ’ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಶ್ರಮಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಬಣ್ಣಿಸಿದರು.
ಎರಡು ದಿನಗಳ ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು ಇಲ್ಲಿನ ಭಾರತೀಯ ಅನಿವಾಸಿಗಳನ್ನು ಉದ್ದೇಶಿಸಿ ಮಂಗಳವಾರ ಮಾತನಾಡಿದರು. ಭಾರತಕ್ಕೆ ಸಹಾಯ ಮಾಡಲು ರಷ್ಯಾ ಎಂದಿಗೂ ಹಿಂಜರಿಯದ ದೇಶವಾಗಿದೆ. ಎರಡು ದೇಶಗಳ ನಡುವಿನ ಬಾಂಧವ್ಯ ಗಟ್ಟಿಯಾಗಿದೆ ಎಂದು ಹೇಳಿದರು.
#WATCH | Moscow, Russia: Prime Minister Narendra Modi says " ...today when india builds the world's tallest railway bridge, world's tallest statue, the world says, india is changing and how is india changing because india trusts the support of its 140 crore citizens, trusts the… pic.twitter.com/Book00KsUN
— ANI (@ANI) July 9, 2024
ಇದೇ ವೇಳೆ, ಉಭಯ ರಾಷ್ಟ್ರಗಳ ನಡುವೆ ರಾಜಕೀಯ ಬಾಂಧವ್ಯವಲ್ಲದೇ ಸಾಂಸ್ಕೃತಿಕ ಸಂಬಂಧವೂ ಉತ್ತಮವಾಗಿದೆ ಎಂಬುದಕ್ಕೆ ಬಾಲಿವುಡ್ನ ಮೇರುನಟ ರಾಜ್ಕಪೂರ್ ಮತ್ತು ಮಿಥುನ್ ಚಕ್ರವರ್ತಿ ಅವರ ಸಿನಿಮಾಗಳನ್ನು ಪ್ರಸ್ತಾಪಿಸಿದರು.
ರಾಜ್ಕಪೂರ್, ಮಿಥುನ್ ಸಿನಿಮಾಗಳ ಪ್ರಸ್ತಾಪ: ಭಾರತೀಯ ಸಾಂಸ್ಕೃತಿಕ ಪರಂಪರೆಯು ರಷ್ಯಾದಲ್ಲಿ ಮಿಳಿತವಾಗಿದೆ. ಬಾಲಿವುಡ್ ನಟ ರಾಜ್ಕಪೂರ್ ಅವರ ಚಿತ್ರಗಳು ಆಗಿನ ಕಾಲದಲ್ಲೇ ಇಲ್ಲಿನ ಭಾಷೆಗೆ ಡಬ್ ಆಗಿದ್ದವು. ಇಲ್ಲಿನ ಪ್ರೇಕ್ಷಕರನ್ನು ಭಾರತೀಯ ಸಿನಿಮಾ ಸೆಳೆದಿತ್ತು. ‘ಸರ್ ಪೆ ಲಾಲ್ ಟೋಪಿ ರಸ್ಸಿ, ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ’ ಎಂಬ ಹಾಡು ಇಲ್ಲಿನ ಪ್ರತಿ ಮನೆಯಲ್ಲೂ ಗುನುಗುವಂತೆ ಮಾಡಿತ್ತು. ಈ ಹಾಡು ಹಳೆಯದಾಗಿರಬಹುದು. ಆದರೆ, ಭಾವನೆ ನವನವೀನ ಎಂದರು.
ಮಿಥುನ್ ಚಕ್ರವರ್ತಿ ಅವರ 'ಡಿಸ್ಕೋ ಡ್ಯಾನ್ಸರ್' ಹಾಡು ರಷ್ಯಾದಲ್ಲಿ ಭಾರೀ ಪ್ರಸಿದ್ಧವಾಗಿತ್ತು. ಜಿಮ್ಮಿ ಜಿಮ್ಮಿ ಹಾಡಿನ ಸಾಲುಗಳು ಜನರ ಬಾಯಲ್ಲಿದ್ದವು. ಭಾರತೀಯ ಸಿನಿಮಾಗಳು ಕೂಡ ಎರಡು ರಾಷ್ಟ್ರಗಳ ನಡುವಿನ ಸಂಬಂಧನವನ್ನು ಗಟ್ಟಿ ಮಾಡಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟರು.
ಪುಟಿನ್ ಆತ್ಮೀಯ ಸ್ನೇಹಿತ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಆತ್ಮೀಯ ಸ್ನೇಹಿತ ಎಂದು ಸಂಬೋಧಿಸಿದ ಮೋದಿ ಅವರು, ಭಾರತದೊಂದಿಗಿನ ಸಂಬಂಧವನ್ನು ಎರಡು ದಶಕಗಳಿಂದ ಮುಂದುವರಿಸಿಕೊಂಡು ಬಂದಿದ್ದನ್ನು ಶ್ಲಾಘಿಸಿದರು. ನಾನು ಕಳೆದ 10 ವರ್ಷಗಳಲ್ಲಿ ರಷ್ಯಾಕ್ಕೆ 6 ಬಾರಿ ಭೇಟಿ ನೀಡಿದ್ದೇನೆ. ಇಷ್ಟು ವರ್ಷಗಳಲ್ಲಿ ನಾವು ಹಲವು ವೇದಿಕೆಗಳಲ್ಲಿ ಪರಸ್ಪರ 17 ಬಾರಿ ಸಂಧಿಸಿದ್ದೇವೆ. ಎಲ್ಲ ಮಾತುಕತೆ, ಸಭೆಗಳಲ್ಲಿ ಪರಸ್ಪರ ವಿಶ್ವಾಸ, ಗೌರವ ಹೆಚ್ಚುತ್ತಾ ಬಂದಿದೆ ಎಂದು ಹೇಳಿದರು.
ಉಕ್ರೇನ್- ರಷ್ಯಾ ಯುದ್ಧದಲ್ಲಿ ಭಾರತೀಯ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾಗ ರಷ್ಯಾ ನೆರವು ನೀಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇದೇ ವೇಳೆ ನೆಪಿಸಿಕೊಂಡರು. ಭಾರತೀಯರನ್ನು ತಾಯ್ನಾಡಿಗೆ ಹಿಂತಿರುಗಿಸಲು ಅಧ್ಯಕ್ಷ ಪುಟಿನ್ ಅವರನ್ನು ನೆರವು ಕೋರಿದಾಗ, ಅವರು ಸಹಾಯ ಮಾಡಿದರು. ಹೀಗಾಗಿ ರಷ್ಯಾದ ಜನರಿಗೆ ಮತ್ತು ಆತ್ಮೀಯ ಸ್ನೇಹಿತ ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ಹೇಳಲು ಬಯಸುವೆ ಎಂದರು.