ಕೀವ್: ಉಕ್ರೇನ್ ಭೇಟಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ಅಧ್ಯಕ್ಷ ವೊಲಿಡಿಮಿರ್ ಝೆಲೆನ್ಸ್ಕಿಅವರಿಗೆ ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿದ್ದಾರೆ. ಈ ಆಹ್ವಾನ ಸ್ವೀಕರಿಸಿರುವ ಝೆಲೆನ್ಸ್ಕಿ, ಮಹಾನ್ ದೇಶಕ್ಕೆ ಪ್ರಯಾಣಿಸುವುದಕ್ಕೆ ಸಂತಸವಾಗುತ್ತದೆ ಎಂದಿದ್ದಾರೆ.
ಉಕ್ರೇನ್ ಅಧ್ಯಕ್ಷರೊಂದಿಗೆ ದ್ವಿಪಕ್ಷೀಯ ಸಂಬಂಧಗಳ ಕುರಿತು ವಿಶಾಲ ಚರ್ಚೆ ನಡೆಸಿದ ಬಳಿಕ ಮೋದಿ ಆಹ್ವಾನ ನೀಡಿದ್ದಾರೆ. ಉಕ್ರೇನ್ ಸ್ವಾತಂತ್ರ್ಯಗೊಂಡ ಬಳಿಕ ಭಾರತದಿಂದ ಮೊದಲ ಬಾರಿ ಪ್ರಧಾನಿ ಭೇಟಿ ನೀಡಿದ್ದು, ಇಲ್ಲಿ ಮೋದಿ ಅವರು 9 ಗಂಟೆಗಳ ಕಾಲ ಸಮಯ ಕಳೆದರು.
ಝೆಲೆನ್ಸ್ಕಿ ಅವರಿಗೆ ಪ್ರಧಾನಿ ಮೋದಿ ಆಹ್ವಾನದ ಕುರಿತು ಮಾಧ್ಯಮ ಹೇಳಿಕೆಯಲ್ಲಿ ದೃಢಪಡಿಸಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, 1992ರ ಉಕ್ರೇನ್ ದೇಶ ಸ್ವಾತಂತ್ರ್ಯಗೊಂಡ ಬಳಿಕ ಮೊದಲ ಬಾರಿಗೆ ನಮ್ಮ ಪ್ರಧಾನಿ ಭೇಟಿ ನೀಡುರುವುದು ಗಮನಾರ್ಹವಾಗಿದೆ. ಭೇಟಿ ಸಂದರ್ಭದಲ್ಲಿ ಅವರನ್ನು ನಮ್ಮ ದೇಶಕ್ಕೆ ಆಹ್ವಾನಿಸುವುದು ಸಹಜ. ಅಂತೆಯೇ ಮೋದಿ ಅವರು ಆಹ್ವಾನ ನೀಡಿದ್ದಾರೆ. ಅವರ ಅನುಕೂಲಕ್ಕೆ ತಕ್ಕಂತೆ ಉಕ್ರೇನ್ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಬಹುದು ಎಂದು ನಿರೀಕ್ಷಿಸಲಾಗುವುದು ಎಂದಿದ್ದಾರೆ.
ಪರಸ್ಪರ ಅನುಕೂಲಕರ ಅವಕಾಶದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ಮೋದಿ ಆಹ್ವಾನ ನೀಡಿದ್ದಾರೆ ಎಂದು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ ಝೆಲೆನ್ಸ್ಕಿ ಅಲ್ಲಿಗೆ ಪ್ರಯಾಣ ಬೆಳೆಸಲು ಸಂತೋಷ ಪಡುವುದಾಗಿ ತಿಳಿಸಿದ್ದಾರೆ.
ಕಾರ್ಯತಂತ್ರದ ಸಹಭಾಗಿತ್ವವನ್ನು ಆರಂಭಿಸಿದಾಗ ಮಾತುಕತೆ ಮೂಲಕ ನೀವು ಆರಂಭಿಸಬೇಕು. ಈ ಸಮಯದಲ್ಲಿ ನೀವು ಸಮಯ ವ್ಯರ್ಥ ಮಾಡಬಾರದು. ಇದೇ ಕಾರಣಕ್ಕೆ ನಾನು ಮತ್ತೊಮ್ಮೆ ಅವರನ್ನು ಭೇಟಿಯಾಗುವುದು ಉತ್ತಮ ಎಂದು ಯೋಚಿಸಿದ್ದೇನೆ ಎಂದರು.
ನಾನು ಅನೇಕ ದೊಡ್ಡ ಮತ್ತು ಮಹಾನ್ ದೇಶಗಳ ಬಗ್ಗೆ ಓದಿದ್ದೇನೆ. ಅದು ತುಂಬಾ ಆಸಕ್ತಿಕರವಾಗಿರುತ್ತದೆ. ಭಾರತವು ನಮ್ಮ ಪರವಾಗಿರಬೇಕು ಎಂದು ನಾನು ಬಯಸುತ್ತೇನೆ. ನಾನು ಭಾರತಕ್ಕೆ ಶೀಘ್ರದಲ್ಲೇ ಬರಲು ಉತ್ಸುಕನಾಗಿದ್ದೇನೆ ಎಂದು ಝೆಲೆನ್ಸ್ಕಿ ಉಕ್ರೇನ್ನಲ್ಲಿನ ಪರಿಸ್ಥಿತಿ ಆಧಾರಿಸಿ ಈ ಭೇಟಿ ನಡೆಸುವುದಾಗಿ ತಿಳಿಸಿದರು.
ಭೇಟಿ ಕುರಿತು ಪೋಸ್ಟ್ ಮಾಡಿರುವ ಪ್ರಧಾನಿ, ಉಕ್ರೇನ್‌ನೊಂದಿಗೆ ಆರ್ಥಿಕ ಸಂಬಂಧವನ್ನು ಗಾಢವಾಗಿಸಲು ಭಾರತ ಉತ್ಸುಕವಾಗಿದೆ. ಕೃಷಿ, ತಂತ್ರಜ್ಞಾನ, ಫಾರ್ಮಾ ಮತ್ತು ಅಂತಹ ಇತರ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸುವ ಮಾರ್ಗಗಳ ಕುರಿತು ನಾವು ಚರ್ಚಿಸಿದ್ದೇವೆ. ನಮ್ಮ ಸಾಂಸ್ಕೃತಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿ ಮಾಡಲು ಸಹ ಒಪ್ಪಿಕೊಂಡಿದ್ದೇವೆ ಎಂದಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ, ಅಧ್ಯಕ್ಷ ಜೆಲೆನ್ ಸ್ಕಿ ಮಾತುಕತೆ: 4 ದ್ವಿಪಕ್ಷೀಯ ಒಪ್ಪಂದಗಳಿಗೆ ಉಕ್ರೇನ್, ಭಾರತ ಸಹಿ