ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ 'ಮೀಸಲಾತಿ ವಿರೋಧಿ ಹಿಂಸಾತ್ಮಕ ಹೋರಾಟ' ಅಲ್ಲಿನ ಪ್ರಧಾನಿಯ ಹುದ್ದೆ ಖಾಲಿ ಮಾಡಿಸಿದ ಬಳಿಕವೂ ತಣ್ಣಗಾಗಿಲ್ಲ. ಉದ್ರಿಕ್ತ ಪ್ರತಿಭಟನಾಕಾರರು ಅಲ್ಲಿನ ಅಲ್ಪಸಂಖ್ಯಾತರಾದ ಹಿಂದುಗಳು, ಕ್ರೈಸ್ತರು, ಬೌದ್ಧರ ಮೇಲೆ ಅಟ್ಟಹಾಸ ಮೆರೆಯುತ್ತಿದ್ದಾರೆ. ಹಿಂದು ದೇವಾಲಯಗಳು, ಮನೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಇಬ್ಬರು ಹಿಂದುಗಳನ್ನು ಹತ್ಯೆ ಮಾಡಲಾಗಿದೆ.
ಹಿಂದು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಪುಂಡ ಹೋರಾಟಗಾರರು ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾರೆ. ದೇಶದ ಹಲವೆಡೆಗಳಿಂದ ಇಂತಹ ಘಟನೆಗಳು ವರದಿಯಾಗಿವೆ ಎಂದು ಬಾಂಗ್ಲಾದೇಶದ ಹಿಂದೂ, ಬೌದ್ಧ, ಕ್ರಿಶ್ಚಿಯನ್ ಒಕ್ಕೂಟದ ನಾಯಕಿ ಕಾಜೋಲ್ ದೇಬನಾಥ್ ತಿಳಿಸಿದ್ದಾರೆ.
ಇಬ್ಬರು ಹಿಂದುಗಳ ಹತ್ಯೆ: ಮತೀಯ ಉದ್ರಿಕ್ತರು ಇಬ್ಬರು ಹಿಂದುಗಳನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಸಾವಿಗೀಡಾದವರು ಶೇಕ್ ಹಸೀನಾ ಅವರ ಅವಾಮಿ ಲೀಗ್ ಪಕ್ಷದ ನಾಯಕರಾಗಿದ್ದರು ಎಂದು ತಿಳಿದುಬಂದಿದೆ. ಇದರಿಂದ ಅವರ ಮೇಲೆ ಮಾರಣಾಂತಿಕ ದಾಳಿ ಮಾಡಿ, ಕೊಲೆ ಮಾಡಲಾಗಿದೆ. ಈ ಎರಡೂ ಘಟನೆಗಳು ಸಿರಾಜ್‌ಗಂಜ್ ಮತ್ತು ರಂಗ್‌ಪುರದಲ್ಲಿ ನಡೆದಿವೆ ಎಂದು ಅವರು ಹೇಳಿದ್ದಾರೆ.
ದಾಳಿಕೋರರು ಹಿಂದುಗಳ ಅಂಗಡಿಗಳು, ದೇವಸ್ಥಾನಗಳು ಮತ್ತು ಮನೆಗಳನ್ನು ಲೂಟಿ ಮಾಡುತ್ತಿದ್ದಾರೆ. ಹಿಂದೂ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಅಪಹರಿಸುತ್ತಿದ್ದಾರೆ. ಶೇಕ್ ಹಸೀನಾ ಅವರ ಸರ್ಕಾರ ಪತನದ ನಂತರವೂ ಹಿಂಸಾಚಾರ ನಿಲ್ಲುತ್ತಿಲ್ಲ. ದಾಳಿಯಲ್ಲಿ ಅನೇಕರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಗಂಭೀರವಾಗಿದೆ. ಇಲ್ಲಿನ ಹಿಂದೂಗಳ ಮೇಲೆ ನಿರಂತರವಾಗಿ ದಾಳಿ ನಡೆಸಲಾಗುತ್ತಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರಾಣಾ ದಾಸ್‌ಗುಪ್ತಾ ಆತಂಕ ವ್ಯಕ್ತಪಡಿಸಿದ್ದಾರೆ.
Radical Islamists in Bangladesh are attacking the Hindu minority in their homes.
— Hananya Naftali (@HananyaNaftali) August 6, 2024
They surrounded the house and the family is helpless, trying to protect their children.
Will the world protest this horror? pic.twitter.com/SN9GwQDY4i
ದೇವಾಲಯಗಳು, ಸಾಂಸ್ಕೃತಿಕ ಕೇಂದ್ರಗಳ ನಾಶ: ರಾಜಧಾನಿ ಢಾಕಾದಲ್ಲಿದ್ದ ನಾಲ್ಕು ಹಿಂದು ದೇವಾಲಯಗಳನ್ನು ಪ್ರತಿಭಟನಾಕಾರರು ಕೆಡವಿ ನಾಶ ಮಾಡಿದ್ದಾರೆ. ಇಂದಿರಾಗಾಂಧಿ ಸಾಂಸ್ಕೃತಿಕ ಕೇಂದ್ರಕ್ಕೂ ಹಾನಿ ಮಾಡಲಾಗಿದೆ. ಈ ಕೇಂದ್ರವು ಭಾರತೀಯ ಕಲೆ, ಸಂಸ್ಕೃತಿಯನ್ನು ಸಾರುತ್ತಿತ್ತು. ರಾಜಕೀಯ, ಅರ್ಥಶಾಸ್ತ್ರ ಮತ್ತು ಸಾಹಿತ್ಯ ಕ್ಷೇತ್ರಗಳ 21,000ಕ್ಕೂ ಹೆಚ್ಚು ಪುಸ್ತಕಗಳಿರುವ ಗ್ರಂಥಾಲಯವೂ ಇಲ್ಲಿತ್ತು.
ಭದ್ರತೆಗೆ ಸೂಚಿಸಿದ ಭಾರತ ಸರ್ಕಾರ: ಹಿಂಸಾತ್ಮಕ ಮೀಸಲಾತಿ ಹೋರಾಟದಲ್ಲಿ ಹಿಂದುಗಳು ದೌರ್ಜನ್ಯಕ್ಕೆ ಒಳಗಾಗಿದ್ದು, ಅದನ್ನು ತಡೆಯಲು ಭಾರತ ಸರ್ಕಾರ ಬಾಂಗ್ಲಾದೇಶದ ಸೇನಾಧಿಕಾರಿಗಳಿಗೆ ಸೂಚಿಸಿದ್ದಾರೆ. ಹೋರಾಟದ ಹೆಸರಿನಲ್ಲಿ ನಾಗರಿಕರ ಮೇಲೆ ನಡೆಯುತ್ತಿರುವ ಅನಾಚಾರಗಳ ಮೇಲೆ ಕಣ್ಣಿಟ್ಟು, ಜನರಿಗೆ ಭದ್ರತೆ ನೀಡಲು ಆಗ್ರಹಿಸಿದೆ.