ಢಾಕಾ (ಬಾಂಗ್ಲಾದೇಶ): ಬಾಂಗ್ಲಾದೇಶ ವಿದ್ಯಾರ್ಥಿಗಳ ದಂಗೆಯಲ್ಲಿ ಪ್ರಧಾನಿ ಶೇಕ್ ಹಸೀನಾ ಅವರ ತಲೆದಂಡದ ಬಳಿಕವೂ ಹಿಂಸೆ ನಿಲ್ಲುತ್ತಿಲ್ಲ. ಇದು, ಅಲ್ಲಿನ ಅಲ್ಪಸಂಖ್ಯಾತರಾದ ಹಿಂದುಗಳಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಆಗಸ್ಟ್ 5 ರಿಂದ ಉಗ್ರ ರೂಪ ಪಡೆದ ಹೋರಾಟದಲ್ಲಿ ಈವರೆಗೆ ಹಿಂದುಗಳ ಮೇಲೆ 205 ದಾಳಿಗಳು ನಡೆದಿವೆ ಎಂದು ಹಿಂದು ಸಂಘಟನೆಗಳು ತಿಳಿಸಿವೆ.
ಮೀಸಲಾತಿ ಹೋರಾಟದ ವಿರುದ್ಧ ನಡೆದ ಹೋರಾಟವು ಹಿಂಸೆಗೆ ತಿರುಗಿದ್ದು, ಉದ್ರಿಕ್ತ ಪ್ರತಿಭಟನಾಕಾರರು ಕಂಡ ಕಂಡವರ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದರಿಂದ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಉಂಟಾಗುತ್ತಿದೆ. ಜೊತೆಗೆ ಅಲ್ಪಸಂಖ್ಯಾತರಾದ ಹಿಂದುಗಳು, ಬೌದ್ಧರು, ಕ್ರಿಶ್ಚಿಯನ್ ಧರ್ಮದವರ ಮೇಲೆ ದೌರ್ಜನ್ಯ ನಡೆಯುತ್ತಿದೆ.
ನೂತನ ಮುಖ್ಯಸ್ಥರಿಗೆ ದೂರು: ಬಾಂಗ್ಲಾದೇಶ ಹಿಂದೂ, ಬೌದ್ಧ, ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ಸದಸ್ಯರು, ಅಲ್ಪಸಂಖ್ಯಾತರ ಮೇಲೆ ದೇಶದ 52 ಜಿಲ್ಲೆಗಳಲ್ಲಿ ಸಂಭವಿಸಿದ 205 ದಾಳಿಗಳ ಬಗ್ಗೆ ದಾಖಲೆ ಸಹಿತವಾಗಿ ಮಧ್ಯಂತರ ಸರ್ಕಾರದ ಮುಖ್ಯಸ್ಥರಾದ ಮುಹಮ್ಮದ್ ಯೂನಸ್ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.
ನಮ್ಮ ಜೀವನವು ದುರಂತದ ಸ್ಥಿತಿಯಲ್ಲಿರುವುದರಿಂದ ನಾವು ರಕ್ಷಣೆಯನ್ನು ಬಯಸುತ್ತೇವೆ. ರಾತ್ರಿಯಿಡೀ ನಮ್ಮ ಮನೆ ಮತ್ತು ದೇವಾಲಯಗಳನ್ನು ಕಾವಲು ಕಾಯುವಂತಾಗಿದೆ. ನನ್ನ ಜೀವನದಲ್ಲಿ ಈ ರೀತಿಯ ದಾಳಿಯನ್ನು ನೋಡಿಲ್ಲ. ಸರ್ಕಾರವು ದೇಶದಲ್ಲಿ ಕೋಮು ಸೌಹಾರ್ದತೆಯನ್ನು ಮರುಸ್ಥಾಪಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಏಕತಾ ಪರಿಷತ್ತಿನ ಮೂವರು ಅಧ್ಯಕ್ಷರಲ್ಲಿ ಒಬ್ಬರಾದ ನಿರ್ಮಲ್ ರೊಸಾರಿಯೊ ಹೇಳಿದ್ದಾರೆ.
ಹಿಂಸಾಚಾರ ತಡೆಗಟ್ಟಿ: ಪರಿಸ್ಥಿತಿ ತೀವ್ರವಾಗಿ ಹದಗೆಡುತ್ತಿದೆ. ನೂತನ ಮುಖ್ಯಸ್ಥರು ಈ ಘಟನೆಗಳ ಬಗ್ಗೆ ಆದ್ಯತೆ ನೀಡುವ ಮೂಲಕ, ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗೊಳಿಸುವ ಮೂಲಕ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೋಮು ಹಿಂಸಾಚಾರವು ಬಾಂಗ್ಲಾದೇಶದ ಅಲ್ಪಸಂಖ್ಯಾತರಲ್ಲಿ ವ್ಯಾಪಕ ಭಯ, ಆತಂಕ ಮತ್ತು ಅನಿಶ್ಚಿತತೆಯನ್ನು ಉಂಟುಮಾಡಿದೆ. ಅಂತಾರಾಷ್ಟ್ರೀಯ ಖಂಡನೆಗೂ ಕಾರಣವಾಗಿದೆ. ಈ ದಾಳಿಗಳನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ನಾವು ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ಹಿಂದು ಸಂಘಟನೆಗಳು ತಿಳಿಸಿವೆ.
ಮೀಸಲಾತಿ ವಿರೋಧಿ ಹೋರಾಟಕ್ಕೆ ಮಣಿದ ಮಾಜಿ ಪ್ರಧಾನಿ ಶೇಕ್ ಹಸೀನಾ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಭಾರತಕ್ಕೆ ಬಂದಿದ್ದರು. ಹಸೀನಾ ಅವರ ಪದಚ್ಯುತಿ ನಂತರ, 84 ವರ್ಷದ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರು ಆಗಸ್ಟ್ 8 ರಂದು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.