ಟಲಿಸೇ(ಫಿಲಿಪ್ಪೀನ್ಸ್): ಪ್ರಕೃತಿ ಮುನಿಸಿಗೆ ಆಗಾಗ್ಗೆ ತುತ್ತಾಗುವ ಫಿಲಿಪ್ಪೀನ್ಸ್‌ನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಟ್ರಾಮಿ ಹೆಸರಿನ ಚಂಡಮಾರುತದಿಂದ ಭಾರಿ ಪ್ರವಾಹ ಮತ್ತು ಭೂಕುಸಿತದಲ್ಲಿ 130 ಜನರು ಸಾವನ್ನಪ್ಪಿದ್ದಾರೆ. ಅನೇಕ ಪ್ರದೇಶಗಳು ತೀವ್ರ ಹಾನಿಗೀಡಾಗಿವೆ.
ಈ ವರ್ಷದ 11ನೇ ಚಂಡಮಾರುತವು ವಾಯುವ್ಯ ಫಿಲಿಪ್ಪೀನ್ಸ್ನಿಂದ ಬೀಸಿದ್ದು, ಭಾರಿ ಮಳೆ ಸುರಿದಿದೆ. 24 ಗಂಟೆಯಲ್ಲಿ ಎರಡು ತಿಂಗಳಲ್ಲಿ ಆಗುವಷ್ಟು ಮಳೆಯಾಗಿದೆ. ಇದರಿಂದ ಭೀಕರ ಪ್ರವಾಹ ಸೃಷ್ಟಿಯಾಗಿ ಹಲವು ಪ್ರಾಂತ್ಯಗಳು ಮುಳುಗಡೆಯಾಗಿವೆ. ಹಲವರು ನಾಪತ್ತೆಯಾಗಿದ್ದಾರೆ.
5 ಮಿಲಿಯನ್‌ಗಿಂತಲೂ ಹೆಚ್ಚು ಜನರು ಚಂಡಮಾರುತಕ್ಕೆ ತುತ್ತಾಗಿದ್ದಾರೆ. ಇದರಲ್ಲಿ ಅರ್ಧ ಮಿಲಿಯನ್ ಜನರು ಹಲವಾರು ಪ್ರಾಂತ್ಯಗಳಲ್ಲಿ ಸ್ಥಾಪಿಸಲಾಗಿರುವ 6,300ಕ್ಕೂ ಹೆಚ್ಚು ಆಶ್ರಯ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ ಎಂದು ಸರ್ಕಾರ ತಿಳಿಸಿದೆ.
ಈ ವರ್ಷ ಫಿಲಿಪ್ಪೀನ್ಸ್‌ಗೆ ಅಪ್ಪಳಿಸಿದ 11ನೇ ಚಂಡಮಾರುತ ಇದಾಗಿದ್ದು, ಮುಂದಿನ ವಾರ ಶಾಂತವಾಗಲಿದೆ. ಹಲವು ಪ್ರಾಂತ್ಯಗಳಲ್ಲಿ ಇದು ಇನ್ನಷ್ಟು ಹಾನಿ ಮಾಡುವ ಸಾಧ್ಯತೆ ಇದೆ ಎಂದು ಅಲ್ಲಿ ಹವಾಮಾನ ಇಲಾಖೆ ತಿಳಿಸಿದೆ. ಇದೇ ಚಂಡಮಾರುತವು ವಾರಾಂತ್ಯದಲ್ಲಿ ವಿಯೆಟ್ನಾಂ ಅನ್ನು ಪ್ರವೇಶಿಸಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಲುಜಾನ್ ಪ್ರಾಂತ್ಯದಲ್ಲಿ ಲಕ್ಷಾಂತರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರ ಮಾಡಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಶುಕ್ರವಾರದಿಂದ ಮೂರು ದಿನ ಶಾಲಾ-ಕಾಲೇಜುಗಳು ಮತ್ತು ಸರ್ಕಾರಿ ಕಚೇರಿಗಳಿಗೆ ರಜೆ ನೀಡಲಾಗಿತ್ತು. ದೋಣಿ ಸೇವೆಗಳನ್ನೂ ಸಹ ಸ್ಥಗಿತಗೊಳಿಸಲಾಗಿದೆ. ಆದಾಗ್ಯೂ ಪ್ರವಾಹದಲ್ಲಿ ಸಾವಿರಾರು ಮಂದಿ ಸಿಲುಕಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
ರಕ್ಷಣಾ ಕಾರ್ಯಾಚರಣೆ ಮುಂದುವರಿಕೆ: ಪ್ರಕೃತಿ ವಿಕೋಪಕ್ಕೆ ಸಿಲುಕಿದ ಪ್ರಾಂತ್ಯಗಳಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ, ಇತರ ರಕ್ಷಣಾ ಪಡೆಗಳು ಸ್ನಿಫರ್ ಡಾಗ್‌ಗಳ ಬೆಂಬಲದೊಂದಿಗೆ ಕಾಣೆಯಾದವರ ಪತ್ತೆ ಕಾರ್ಯ ನಡೆಸಲಾಗುತ್ತಿದೆ.
ಈ ವರ್ಷದಲ್ಲಿ ಸಂಭವಿಸಿದ ಅತ್ಯಂತ ವಿನಾಶಕಾರಿ ಚಂಡಮಾರುತಗಳಲ್ಲಿ ಕನಿಷ್ಠ 85 ಜನರು ಸಾವನ್ನಪ್ಪಿದ್ದಾರೆ. 41 ಮಂದಿ ಕಾಣೆಯಾಗಿದ್ದಾರೆ ಎಂದು ಸರ್ಕಾರದ ವಿಪತ್ತು ಸಚಿವಾಲಯ ಮಾಹಿತಿ ನೀಡಿದೆ. ಇದೀಗ ಮತ್ತೊಂದು ಚಂಡಮಾರುತದಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಪ್ರತಿ ವರ್ಷ ಸುಮಾರು 20 ಚಂಡಮಾರುತಗಳು ಮತ್ತು ಟೈಫೂನ್ಗಳು ಫಿಲಿಪ್ಪೀನ್ಸ್‌ಗೆ ಅಪ್ಪಳಿಸುತ್ತವೆ. ಇದು ಪೆಸಿಫಿಕ್ ಮಹಾಸಾಗರ ಮತ್ತು ದಕ್ಷಿಣ ಚೀನಾ ಸಮುದ್ರದ ನಡುವೆ ಇರುವ ಆಗ್ನೇಯ ಏಷ್ಯಾದ ದ್ವೀಪಸಮೂಹವಾಗಿದೆ. 2013ರಲ್ಲಿ ಹೈಯಾನ್ ಚಂಡಮಾರುತದ ಹೊಡೆತಕ್ಕೆ 7,300ಕ್ಕೂ ಹೆಚ್ಚು ಮಂದಿ ಸಾವು ಅಥವಾ ಕಾಣೆಯಾಗಿದ್ದರು.
ಇದನ್ನೂ ಓದಿ: ಇಸ್ರೇಲ್ನಿಂದ ಭೀಕರ ಕ್ಷಿಪಣಿ ದಾಳಿ: ವಿಮಾನ ಸೇವೆ ಸಂಪೂರ್ಣ ನಿಲ್ಲಿಸಿದ ಇರಾನ್