ನವದೆಹಲಿ: ಎಲ್ಲದಕ್ಕೂ ಒಂದು ಮಿತಿ ಇರುತ್ತದೆ ಎಂಬುದನ್ನು ಅಧಿಕಾರದಲ್ಲಿರುವವರು ಅರಿತುಕೊಳ್ಳಬೇಕು ಎಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಬ್ಯಾರಿಸ್ಟರ್ ಗೋಹರ್ ಅಲಿ ಖಾನ್ ಹೇಳಿದ್ದಾರೆ. "ಅಧಿಕಾರದಲ್ಲಿರುವವರು ತಾವು ಮಾಡಿದ್ದನ್ನು ಸಾಕು ಎಂದು ಇನ್ನಾದರೂ ಅರಿತುಕೊಳ್ಳಬೇಕು. ಹಿಂತಿರುಗದ ಹಂತಕ್ಕೆ ನಮ್ಮನ್ನು ತಳ್ಳಬೇಡಿ" ಎಂದು ಗೋಹರ್ ವಾಯ್ಸ್ ಆಫ್ ಅಮೇರಿಕಾ ಉರ್ದುಗೆ ನೀಡಿದ ಸಂದರ್ಶನದಲ್ಲಿ ಹೇಳಿದರು. ಮಾತುಕತೆಯಲ್ಲಿ ತೊಡಗಿಸಿಕೊಳ್ಳಲು ಮತ್ತು ತಮ್ಮ ಪ್ರತಿಸ್ಪರ್ಧಿಗಳೊಂದಿಗೆ ಒಟ್ಟಾಗಿ ಕೆಲಸ ಮಾಡಲು ಪಿಟಿಐ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.
"ಆಡಳಿತಗಾರ ಮತ್ತು ಸರ್ವಾಧಿಕಾರಿಯ ಅಧಿಕಾರ ಒಂದು ದಿನ ಕೊನೆಗೊಳ್ಳುತ್ತದೆ. ಆದರೆ ಈ ದೇಶ, ಜನರು ಮತ್ತು ಪ್ರಜಾಪ್ರಭುತ್ವ ಮುಂದುವರೆಯುತ್ತವೆ. ಇದನ್ನು ಅರಿತುಕೊಂಡರೆ, ನಾವು ಭಿನ್ನಾಭಿಪ್ರಾಯಗಳನ್ನು ಮರೆತು ಮುಂದೆ ಸಾಗಬಹುದು. ಭಿನ್ನಾಭಿಪ್ರಾಯಗಳನ್ನು ಪರಿಹರಿಸದಿದ್ದರೆ ಮೂರನೇ ಶಕ್ತಿಯು ಪರಿಸ್ಥಿತಿಯ ದುರ್ಲಾಭ ಪಡೆಯಬಹುದು" ಎಂದು ಅವರು ಹೇಳಿದರು.
"ನೀವು ದೇಶದ ಅತಿದೊಡ್ಡ ಪಕ್ಷವನ್ನು ದೂರವಿಟ್ಟು, ಅದಕ್ಕೆ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅವಕಾಶ ನೀಡದಿದ್ದರೆ ಇದನ್ನು ಪ್ರಜಾಪ್ರಭುತ್ವ ದೇಶ ಎಂದು ಹೇಗೆ ಕರೆಯುವುದು" ಎಂದು ಅವರು ಪ್ರಶ್ನಿಸಿದರು.
ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ ಪಿಟಿಐ ಸಂಸ್ಥಾಪಕ ಅಧ್ಯಕ್ಷ ಇಮ್ರಾನ್ ಖಾನ್ ಎಲ್ಲರೊಂದಿಗೂ ಮಾತನಾಡಲು ಸಿದ್ಧರಿದ್ದಾರೆ ಎಂದು ಗೋಹರ್ ಸಂದರ್ಶನದಲ್ಲಿ ಹೇಳಿದರು. "ಒಂದು ಕಡೆ, ನವಾಜ್ ಷರೀಫ್ ಅವರನ್ನು ಮರಳಿ ಕರೆತರಲಾಯಿತು ಮತ್ತು ಅವರನ್ನು ಚುನಾವಣೆಗೆ ಅರ್ಹರನ್ನಾಗಿ ಮಾಡಲು ಎಲ್ಲಾ ಪ್ರಕರಣಗಳಿಂದ ಖುಲಾಸೆಗೊಳಿಸಲಾಯಿತು. ಮತ್ತೊಂದೆಡೆ, ಪಿಟಿಐ ಸ್ಥಾಪಕ ಅಧ್ಯಕ್ಷರ ವಿರುದ್ಧ ದೇಶದ್ರೋಹ ಸೇರಿದಂತೆ ಎಲ್ಲಾ ರೀತಿಯ ಪ್ರಕರಣಗಳನ್ನು ದಾಖಲಿಸಲಾಗಿದೆ." ಎಂದು ಗೋಹರ್ ಆತಂಕ ವ್ಯಕ್ತಪಡಿಸಿದರು.
ಪಿಟಿಐನ 'ಬ್ಯಾಟ್' ಚಿಹ್ನೆಯನ್ನು ಹಿಂಪಡೆದ ಬಗ್ಗೆ ಮಾತನಾಡಿದ ಅವರು, ಚಿಹ್ನೆಯಿಲ್ಲದೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ತಮ್ಮ ಪಕ್ಷವು 227 ಮೀಸಲು ಸ್ಥಾನಗಳಿಂದ ವಂಚಿತವಾಗಿದೆ ಎಂದರು.
ಫೆಬ್ರವರಿ 8 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯದಿದ್ದರೆ ದೇಶದಲ್ಲಿ ಮತ್ತಷ್ಟು ಅಸ್ಥಿರತೆ ಮತ್ತು ಅನಿಶ್ಚಿತತೆಗೆ ಕಾರಣವಾಗುತ್ತದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ಸ್ಥಾಪಕ 71 ವರ್ಷದ ಖಾನ್ ಅವರು ಶನಿವಾರ ಅಡಿಯಾಲಾ ಜೈಲಿನಲ್ಲಿ ಅನೌಪಚಾರಿಕ ಮಾಧ್ಯಮ ಸಂವಾದದ ಸಂದರ್ಭದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಇಸ್ರೇಲ್, ಹಮಾಸ್ ಶಾಂತಿ ಮಾತುಕತೆ ಮುಂದಿನ ವಾರ ಪುನಾರಂಭ ಸಾಧ್ಯತೆ